ಸುಂಟಿಕೊಪ್ಪ ಅ.23 NEWS DESK : ಸುಂಟಿಕೊಪ್ಪ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆ ಕುರಿತು ಪೂರ್ವಬಾವಿ ಸಭೆ ನಡೆಯಿತು. ಸುಂಟಿಕೊಪ್ಪದ ದ್ವಾರಕ ಸಭಾಂಗಣದಲ್ಲಿ ಹೋಬಳಿ ಕ.ಸಾ.ಪ.ಅಧ್ಯಕ್ಷ ಪಿ.ಎಫ್.ಸಭಾಸ್ಟೀನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸುಂಟಿಕೊಪ್ಪದ ಕನ್ನಡ ವೃತ್ತದಲ್ಲಿ ನ.1 ರಂದು ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಲಾಯಿತು. ಕನ್ನಡ ವೃತ್ತ ಸ್ಥಾಪನೆಗೆ ಕಾರ್ಯನಿರ್ವಹಿದ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕ್ಲಾಡಿಯಸ್ ಲೋಬೋ ಅವರನ್ನು ಮತ್ತು ಕನ್ನಡ ಪರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಸೇವೆ ಸಲ್ಲಿಸಿರುವ ಜಾಹಿದ್ ಅಹ್ಮದ್ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಹಾಗೂ ಮುಖ್ಯ ಭಾಷಣಕಾರರನ್ನು ಆಹ್ವಾನಿಸುವ ಚರ್ಚೆ ನಡೆಯಿತು. ಕುಶಾಲನಗರ ತಾಲ್ಲೂಕು ಕ.ಸಾ.ಪ. ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ ನ.11 ರಂದು ಕುಶಾಲನಗರದಲ್ಲಿ ರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ 5 ಸಹಸ್ರ ಮಂದಿಯಿಂದ ಏಕಕಂಠದಿಂದ ಏಕಕಾಲದಲ್ಲಿ ಕನ್ನಡನಾಡಗೀತೆ, ರೈತಗೀತೆ ಮತ್ತು ಹುಟ್ಟಿದರೆ ಕನ್ನಡನಾಡಲ್ಲಿ ಹುಟ್ಟಬೇಕು ಗೀತಾ ಗಾಯನದ ಕುರಿತು ಮಾಹಿತಿಯನ್ನು ನೀಡಿದರು. ಸುವರ್ಣ ಕರ್ನಾಟಕ ಸಂಭ್ರಮ 50 ಸಮಾರೋಪ ಹಾಗೂ ಮಂಡ್ಯದಲ್ಲಿ ಡಿ.20, 21 ಮತ್ತು 22 ರಂದು ನಡೆಯಲಿರುವ 87ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರದ ಕನ್ನಡ ಜ್ಯೋತಿ ಕುಶಾಲನಗರಕ್ಕೆ ಆಗಮಿಸಲಿದ್ದು, ಬೈಚನಹಳ್ಳಿ ಮಾರಮ್ಮ ದೇವಸ್ಥಾನದಿಂದ ರಥ ಬೀದಿಯವರೆಗೆ ಕಲಾ ತಂಡಗಳು ಸ್ಥಳೀಯ ಸಾಂಸ್ಕೃತಿಕ ಕ ವೈಭವದೊಂದಿಗೆ ಅದ್ಧೂರಿ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು. ಸುಂಟಿಕೊಪ್ಪವು ಸರ್ವಜನಾಂಗದ ಶಾಂತಿಯ ತೋಟವಾಗಿದ್ದು, ಕನ್ನಡ ನಾಡು ನುಡಿಯ ಬಗ್ಗೆ ಅಭಿಮಾನವಿರುವ ನಾವೆಲ್ಲಾರೂ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು. ತಾಲ್ಲೂಕು ಕಸಾಪ ಪ್ರಧಾನ ಕಾರ್ಯದರ್ಶಿ ಟಿ.ವಿ.ಶೈಲಾ, ಪದಾಧಿಕಾರಿಗಳಾದ ಬಿ.ಸಿ.ದಿನೇಶ್, ಟಿ.ಜಿ.ಪ್ರೇಮ್‍ಕುಮಾರ್, ಡಿ.ಆರ್.ಸೋಮಶೇಖರ್, ಬಿ.ಬಿ.ಹೇಮಲತಾ, ದೇವಿಪ್ರಸಾದ್ ಕಾಯಾರ್‍ಮಾರ್, ಜಿ.ಬಿ.ಹರೀಶ್, ಸುಂಟಿಕೊಪ್ಪ ಕಸಾಪ ಕೋಶಾಧಿಕಾರಿ ಬಿ.ಆರ್.ಸತೀಶ್‍ಶೇಟ್, ನಿಕಟಪೂರ್ವ ಅಧ್ಯಕ್ಷ ಎಂ.ಎಸ್.ಸುನಿಲ್, ಪದಾಧಿಕಾರಿಗಳಾದ ಅಶೋಕ್ ಶೇಟ್, ವಿನ್ಸೆಂಟ್, ಲೀಲಾವತಿ, ಸುನೀತ ಗಿರೀಶ್ ಸೇರಿದಂತೆ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಸುಂಟಿಕೊಪ್ಪ ಹೋಬಳಿ ಕಾರ್ಯದರ್ಶಿ ಕೆ.ಎಸ್.ಅನಿಲ್‍ಕುಮಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು.