ಮಡಿಕೇರಿ ಅ.24 NEWS DESK : ಕೊಡಗಿನ ಸಾಹಿತ್ಯ ಕ್ಷೇತ್ರಕ್ಕೆ ಗಮನಾರ್ಹ ಕೊಡುಗೆಯನ್ನು ನೀಡುತ್ತಿರುವ ಕೊಡವ ಮಕ್ಕಡ ಕೂಟ ದಾಖಲೆಯ 100ನೇ ಪುಸ್ತಕವನ್ನು ನ.24 ರಂದು ಅದ್ದೂರಿಯಾಗಿ ಲೋಕಾರ್ಪಣೆಗೊಳಿಸಲಿದೆ ಎಂದು ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ತಿಳಿಸಿದ್ದಾರೆ. ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 98ನೇ ಪುಸ್ತಕ, ಲೇಖಕಿ ಡಾ.ದೀಪ ನರೇಂದ್ರ ಬಾಬು ಅವರು ರಚಿಸಿರುವ “ಗುಳೆ” ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕೊಡವ ಮಕ್ಕಡ ಕೂಟದ ದಾಖಲೆಯ 100ನೇ ಪುಸ್ತಕ ಪುತ್ತರಿರ ಕರುಣ್ ಕಾಳಯ್ಯ ಸಂಪಾದಕತ್ವದ “ನೂರನೆ ಮೊಟ್ಟ್” ನಗರದ ಪತ್ರಿಕಾ ಭವನದಲ್ಲಿ ಬೆಳಿಗ್ಗೆ 11 ಗಂಟೆಗೆ ಬಿಡುಗಡೆಯಾಗಲಿದ್ದು, ಇದರೊಂದಿಗೆ ಲೇಖಕರಾದ ಐಚಂಡ ರಶ್ಮಿ ಮೇದಪ್ಪ, ಕರವಂಡ ಸೀಮಾ ಗಣಪತಿ, ತೆನ್ನೀರ ಟೀನಾ ಚಂಗಪ್ಪ, ಯಶೋಧ ಪೇರಿಯಂಡ ಅವರು ರಚಿಸಿರುವ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ ತಿಳಿಸಿದರು. ಹೊಸ ಬರಹಗಾರರಿಗೆ ಪ್ರೋತ್ಸಾಹ ನೀಡುವ ಮೂಲಕ ಅವರ ಪ್ರಥಮ ಪುಸ್ತಕವನ್ನು ಕೊಡವ ಮಕ್ಕಡ ಕೂಟದ ವತಿಯಿಂದ ಹೊರತರಲಾಗಿದೆ. ಸಾಮಾಜಿಕ ಕಳಕಳಿ, ಕೊಡಗಿನ ಅಭ್ಯುದಯದ ಕಾಳಜಿ, ಸಂಸ್ಕೃತಿ, ಸಾಹಿತ್ಯ ಬೆಳೆವಣಿಗೆಯ ಮೇಲಿನ ಆಸಕ್ತಿಯಿಂದ ನಿರಂತರ ಕಾರ್ಯನಿರ್ವಹಣೆಯಲ್ಲಿ ತೊಡಗಿರುವ ಕೊಡವ ಮಕ್ಕಡ ಕೂಟ ಈವರೆಗೆ ಜಿಲ್ಲೆಯ ಹಲವು ಬರಹಗಾರರು, ಸಾಹಿತಿಗಳು ಬರೆದ ಕೊಡವ, ಕನ್ನಡ, ಇಂಗ್ಲೀಷ್, ಹಿಂದಿ ಸೇರಿದಂತೆ ಒಟ್ಟು 98 ಕೃತಿಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ ಎಂದು ಹೇಳಿದರು. ಕೊಡಗು ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ ಸಲಹಾ ಸಂಪಾದಕ ಬಿ.ಜಿ.ಅನಂತಶಯನ ಮಾತನಾಡಿ, ಕೊಡಗಿಗೆ ಕಾರ್ಮಿಕರಾಗಿ ವಲಸೆ ಬರುವವರ ಜೀವನವನ್ನು ಅಧ್ಯಯನ ನಡೆಸಿ ವಿಶ್ಲೇಷಣೆ ಮಾಡಿದ್ದಾರೆ. ದೈವರಾಧನೆ, ಸಂಪ್ರದಾಯದ ಬಗ್ಗೆ ಕಾದಂಬರಿಯಲ್ಲಿ ವಿವರಿಸಲಾಗಿದ್ದು, ಸುಲಲಿತವಾಗಿ ಓದಬಹುದಾಗಿದೆ ಮತ್ತು ಪ್ರತಿಯೊಬ್ಬರು ಓದಲೇ ಬೇಕಾದ ಪುಸ್ತಕವಾಗಿದೆ ಎಂದರು. ಸಾಹಿತ್ಯ ಕ್ಷೇತ್ರಕ್ಕೆ ಅಮೂಲ್ಯ ಕೊಡುಗೆ ನೀಡುತ್ತಿರುವ ಕೊಡವ ಮಕ್ಕಡ ಕೂಟ ದಾಖಲೆಯ 100ನೇ ಪುಸ್ತಕವನ್ನು ಬಿಡುಗಡೆ ಮಾಡಲು ಮುಂದಾಗಿದ್ದು, ಮತ್ತಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವಂತಾಗಲಿ ಎಂದು ಹಾರೈಸಿದರು. ಪುಸ್ತಕದ ಲೇಖಕಿ ಡಾ.ದೀಪ ನರೇಂದ್ರ ಬಾಬು ಮಾತನಾಡಿ, ಗುಳೆ ಎನ್ನುವುದು ಆಳವಾದ ವಿಚಾರ. ಪ್ರತಿಯೊಬ್ಬರು ಒಂದಲ್ಲ ಒಂದು ರೀತಿಯಲ್ಲಿ ವಲಸೆ ಹೊದವರು. ವಿಜ್ಞಾನ, ಆಧುನಿಕತೆ, ತಂತ್ರಜ್ಞಾನ ಬೆಳೆದಂತೆ ಎಲ್ಲಿ ಅವಕಾಶಗಳಿದೆ ಅಲ್ಲಿಗೆ ವಲಸೆ ಹೋಗುವಂತಾಗಿದೆ. ಆಧುನಿಕತೆ ಬೆಳೆದಂತೆ ಹಿಂದಿನ ಪದಬಳಕೆಗಳು ಮರೆಯಾಗುತ್ತಿದ್ದು, ಅವುಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಪುಸ್ತಕಕ್ಕೆ ಗುಳೆ ಎಂಬ ಹೆಸರಿಡಲಾಗಿದೆ ಎಂದರು. ಕೊಡಗಿನ ಕಾಫಿ ಮತ್ತು ಟೀ ಎಸ್ಟೇಟ್‍ಗಳಲ್ಲಿ ಕೆಲಸ ಮಾಡಲು ವಲಸೆ ಬಂದ ಕೆಲಸಗಾರರು ತಮ್ಮ ಕೆಲಸದ ನಡುವೆಯೂ ಅವರ ದೈವಾಚಾರಗಳ ಬಗ್ಗೆ ತೋರುವ ಆಸಕ್ತಿ ಹಾಗೂ ಅವರ ಪುಟ್ಟ ಮಕ್ಕಳೂ ಅದನ್ನು ಪಾಲಿಸಿಕೊಂಡು ಹೋಗುವ ರೀತಿಯನ್ನು “ಗುಳೆ” ಕಾದಂಬರಿಯಲ್ಲಿ ಪ್ರತಿಬಿಂಬಿಸಲಾಗಿದೆ ಎಂದು ಹೇಳಿದರು. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಪ್ರೊ.ಬಿ.ರಾಘವ ಮಾತನಾಡಿ, ಸಾಮಾಜಿಕ ಕಳಕಳಿ ಹೊಂದಿರುವ ಪುಸ್ತಕವಾಗಿದ್ದು, ಅತ್ಯುತ್ತಮ ಕೃತಿಯಾಗಿದೆ. ಇದರಲ್ಲಿ ಬರುವ ಪಾತ್ರಗಳು ಇತಿಹಾಸದ ಅರಿವನ್ನು ಮೂಡಿಸುತ್ತದೆ. ಅಲ್ಲದೇ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲಾಗಿದೆ. ಸಾಹಿತಿಗಳು ವಿಜ್ಞಾನಿಗಳಿದ್ದಂತೆ. ಸಾಮಾಜಿಕ ಸಮಸ್ಯೆಯ ಬಗ್ಗೆ ಕೃತಿಗಳ ಮೂಲಕ ಅರಿವು ಮೂಡಿಸಲಾಗುತ್ತಿದೆ. ಸಮಾಜದ ಅಂಕು-ಡೊಂಕುಗಳನ್ನು ತಿದ್ದಿ ಸದೃಢ ಸಮಾಜವನ್ನ ರೂಪಿಸುವ ಕೆಲಸವನ್ನು ಸಾಹಿತಿಗಳು ಮಾಡುತ್ತಾರೆ ಎಂದರು. ಕೊಡವ ಮಕ್ಕಡ ಕೂಟ 98 ಕೃತಿಗಳನ್ನು ಬಿಡುಗಡೆಗೊಳಿಸಿರುವುದು ಬಹುದೊಡ್ಡ ಸಾಧನೆ. ಸಾಮಾಜಿಕ ಕಳಕಳಿಯ ಮೂಲಕ ಉತ್ತಮ ತಮ್ಮ ಪ್ರಯತ್ನ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಅತ್ಯುತ್ತಮ ಕೃತಿಗಳು ಬರುವಂತಾಗಲಿ ಎಂದು ಹಾರೈಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಡಗು ಜಿಲ್ಲಾ ಸಂಸ್ಥೆಯ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯು ಮಾತನಾಡಿ, ಸುವರ್ಣ ಕರ್ನಾಟಕದ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡದ ಕೃತಿಗಳನ್ನು ಬಿಡುಗಡೆಗೊಳಿಸುತ್ತಿರುವುದು ಕನ್ನಡಕ್ಕೆ ಕೊಟ್ಟ ಕೊಡುಗೆ ಎಂದರು. ಪ್ರಕೃತಿದತ್ತವಾಗಿ ಬಂದ ಸಂಸ್ಕೃತಿ ಉಳಿಯತ್ತದೆ ಮತ್ತು ಬೆಳೆಯುತ್ತಿದೆ ಎಂಬುದಕ್ಕೆ ನಿದರ್ಶನವಾಗಿದೆ. ಇಂತಹ ಕೃತಿ ಸಿನಿಮಾ ಯೋಗ್ಯತೆಯನ್ನು ಪಡೆದುಕೊಂಡಿದೆ. ಆಧುನಿಕತೆ ಬೆಳೆಯುತ್ತಿದ್ದಂತೆ ನಮ್ಮ ಪರಂಪರೆಗಳು ಮರೆತುಹೋಗುತ್ತವೆ. ಆದರೆ ಇಂತಹ ಕೃತಿಗಳು ಮಕ್ಕಳಿಗೆ ಇತಿಹಾಸವಾಗಿದೆ. ಶರೀರಕ್ಕೆ ಅಳಿವಿದೆ. ಕೃತಿಗೆ ಅಳಿವಿಲ್ಲ. ಮುಂದಿನ ದಿನಗಳಲ್ಲಿ ಮತ್ತಷ್ಟು ಪುಸ್ತಕ ಬಿಡುಗಡೆಯಾಗಲಿ ಎಂದರು. ಕೊಡವ ಮತ್ತು ಕನ್ನಡ ಚಲನಚಿತ್ರದ ನಿರ್ದೇಶಕಿ ಹಾಗೂ ನಿರ್ಮಾಪಕಿ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ಮಾತನಾಡಿ, ಲೇಖಕಿ ಡಾ.ದೀಪ ನರೇಂದ್ರ ಬಾಬು ಕಾರ್ಮಿಕರ ಬದುಕನ್ನು ಪುಸ್ತಕದ ಮೂಲಕ ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಕಾರ್ಮಿಕರ ಸುಖ, ದುಖಃಗಳನ್ನು ಸ್ವಾರಸ್ಯಕರವಾಗಿ ರಚಿಸಿದ್ದಾರೆ ಎಂದರು. ಕೊಡವ ಮಕ್ಕಡ ಕೂಟದಿಂದ ಬರಹಗಾರರನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದು, ಮತ್ತಷ್ಟು ಹೊಸ ಪ್ರತಿಭೆಗಳು ಹೊರಬರುವಂತಾಗಲಿ ಆ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಲಿ ಎಂದು ಹಾರೈಸಿದರು.
:: ಪರಿಚಯ ::
ಡಾ.ದೀಪ ನರೇಂದ್ರ ಬಾಬು :: ಸಾಮಾನ್ಯ ಕೃಷಿ ಕುಟುಂಬದಲ್ಲಿ ಶ್ರೀ ಚಿಕ್ಕಪ್ಪಯ್ಯ ಮತ್ತು ಶ್ರೀಮತಿ ವೆಂಕಟಲಕ್ಷ್ಮಿ ದಂಪತಿಯ ದ್ವಿತೀಯ ಪುತ್ರಿಯಾಗಿ ಜನಿಸಿದ ದೀಪ ನರೇಂದ್ರ ಬಾಬು ಪೋಷಕರ ಅಭಿಲಾಷೆಯಂತೆ ದಂತವೈದ್ಯಕೀಯ ಪದವಿಯನ್ನು ಪಡೆದು ಅಲ್ಪಕಾಲ ಈ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸಿದ್ದರು.
ಗುಳೆ ಎಂಬ ಕಾದಂಬರಿಯ ಮೂಲಕ ಸಾಹಿತ್ಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿರುವ ದೀಪ ನರೇಂದ್ರ ಬಾಬು ಅವರು ಹುತ್ತನ ಹಳ್ಳಿ ಮುನಿಯಪ್ಪ ನರೇಂದ್ರ ಬಾಬು ಅವರ ಪತ್ನಿ. ಇವರಿಗೆ ಮಹಾಲಕ್ಷ್ಮಿ ಹಾಗೂ ರುಶಿಲ್ ನರೇಂದ್ರ ಬಾಬು ಎಂಬ ಇಬ್ಬರು ಮಕ್ಕಳಿದ್ದಾರೆ.