ಮಡಿಕೇರಿ ಅ.25 NEWS DESK : ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಅ.27 ರಂದು ಸುಂಟಿಕೊಪ್ಪ ಹೋಬಳಿ ಮಟ್ಟದಲ್ಲಿ ಅಂಬೇಡ್ಕರ್ ಜಯಂತಿಯನ್ನು ಆಯೋಜಿಸಲಾಗಿದ್ದು, ಸಮಾರಂಭದಲ್ಲಿ ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಗೆ “ಕೊಡಗು ಭೂಷಣ” ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮೀಣ ಭಾಗಗಳಲ್ಲಿ ಡಾ.ಅಂಬೇಡ್ಕರ್ ಚಿಂತನೆಗಳನನ್ನು, ಸಂವಿಧಾನದ ಮಹತ್ವವನ್ನು ಸಾರುವ ಚಿಂತನೆಗಳಡಿ ಸುಂಟಿಕೊಪ್ಪ ಹೋಬಳಿ ಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಂಬರುವ ದಿನಗಳಲ್ಲಿ ವಿರಾಜಪೇಟೆ, ಸೋಮವಾರಪೇಟೆ ವಿಭಾಗಗಳಲ್ಲಿಯೂ ಇಂತಹ ಕಾರ್ಯಕ್ರಮಗಳನ್ನು ನಡೆಸುವುದರೊಂದಿಗೆ ಜಿಲ್ಲಾ ಕೇಂದ್ರದಲ್ಲಿ ಬೃಹತ್ ಸಮಾವೇಶ ನಡೆಸುವ ಉದ್ದೇಶ ತಮ್ಮದೆಂದು ಹೇಳಿದರು.
::: ಗರಗಂದೂರಿನಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ನಮನ :::
ಸುಂಟಿಕೊಪ್ಪ ಶ್ರೀ ರಾಮ ಮಂದಿರ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ಜಯಂತಿ ನಡೆಯಲಿದೆ. ಇದಕ್ಕೂ ಮುನ್ನ 9.30 ಗಂಟೆಗೆ ಗರಗಂದೂರು ಗ್ರಾಮದ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಸುಂಟಿಕೊಪ್ಪದವರೆಗೆ ಬೈಕ್ ಜಾಥ ನಡೆಸಲಾಗುತ್ತದೆ ಎಂದರು. ಬಳಿಕ ಸುಂಟಿಕೊಪ್ಪ ಶಾಲಾ ಮೈದಾನದಿಂದ ಕಾರ್ಯಕ್ರಮ ನಡೆಯಲಿರುವ ಶ್ರೀ ರಾಮ ಮಂದಿರದ ಸಭಾಂಗಣದವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದೆ. ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮವನ್ನು ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ರಾಜ್ಯ ವನ್ಯಜೀವಿ ಮಂಡಳಿ ಸದಸ್ಯರಾದ ಸಂಕೇತ್ ಪೂವಯ್ಯ ಮತ್ತು ಸಕಲೇಶಪುರದ ಬ್ಯಾಕರವಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರಾದ ಶತೇಂದ್ರ ಕುಮಾರ್ ಪಟ್ಲ ಪಾಲ್ಗೊಳ್ಳಲಿದ್ದಾರೆ. ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರಿಗೆ ಇದೇ ಸಂದರ್ಭ ದಸಂಸದಿಂದ ಕೊಡಮಾಡುವ ‘ಕೊಡಗು ಭೂಷಣ’ ಪ್ರಶಸ್ತಿಯನ್ನು ಜಿಲ್ಲಾ ಆಸ್ಪತ್ರೆಯ ಉಪ ಮುಖ್ಯ ವೈದ್ಯಾಧಿಕಾರಿಗಳಾದ ಹೆಚ್.ವಿ. ದೇವದಾಸ್ ಪ್ರದಾನ ಮಾಡಲಿದ್ದಾರೆ.
ಪ್ರತಿಭಾ ಪುರಸ್ಕಾರ :: ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಹೋಬಳಿಯ ದಲಿತ ಸಮುದಾಯಕ್ಕೆ ಸೀಮಿತವಾಗಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಗುತ್ತದೆಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ದಸಂಸ ವಿಭಾಗೀಯ ಸಂಚಾಲಕ ಎನ್.ವೀರಭದ್ರಯ, ಸಂಚಾಲಕರಾದ ಪ್ರೇಮಾ ಕೃಷ್ಣಪ್ಪ ಹಾಗೂ ಸುಂಟಿಕೊಪ್ಪ ಹೋಬಳಿ ಸಂಚಾಲಕ ರಮೇಶ್ ಗರಗಂದೂರು ಉಪಸ್ಥಿತರಿದ್ದರು.