ವಿರಾಜಪೇಟೆ ಅ.29 NEWS DESK : ವಿರಾಜಪೇಟೆ ತಾಲ್ಲೂಕಿನ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುದುಕೋಟೆ ಭಾಗದಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದೆ. ಗದ್ದೆಗಳಿಗೆ ನುಗ್ಗಿರುವ ಕಾಡಾನೆಗಳ ಹಿಂಡು ಫಸಲನ್ನು ನಾಶಪಡಿಸಿವೆ. ಸ್ಥಳೀಯ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳು ತೋಟ ಮತ್ತು ಗದ್ದೆಗಳಲ್ಲಿನ ಫಸಲನ್ನು ತಿಂದು ತೇಗುತ್ತಿವೆ. ಗ್ರಾಮದ ಬೆಳೆಗಾರರಾದ ಕೆ.ಕುಮಾರ್, ಪೋರ್ಕಂಡ ನಾಚಪ್ಪ, ಮಂಡೇಪಂಡ ಜಾಲಿ ಮತ್ತಿತರರ ಗದ್ದೆಗಳಿಗೆ ಕಾಡಾನೆಗಳು ಹಾನಿ ಮಾಡಿವೆ. ನಿರಂತರ ಕಾಡಾನೆಗಳ ಹಾವಳಿಯಿಂದ ನೆಮ್ಮದಿ ಇಲ್ಲದಂತ್ತಾಗಿದೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿದರೂ ಕಾಡಾನೆಗಳು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸ್ಥಳಾಂತರಗೊಳ್ಳುತ್ತಿವೆಯೇ ಹೊರತು ಕಾಡಿಗೆ ಮರಳುತ್ತಿಲ್ಲ. ಪ್ರತಿವರ್ಷ ಈ ಗ್ರಾಮಗಳಲ್ಲಿ ಕಾಡಾನೆಗಳು ಉಪಟಳ ನೀಡುತ್ತಿವೆ. ನಾಟಿ ಮಾಡಿದ ಮರುದಿನೇ ಕಾಡಾನೆಗಳು ದಾಳಿ ಮಾಡುತ್ತಿವೆ. ಮರುನಾಟಿ ಮಾಡಿ ಫಸಲಿಗಾಗಿ ಎದುರು ನೋಡುತ್ತಿರುವಾಗಲೇ ಮತ್ತೆ ಕಾಡಾನೆಗಳು ಹಾನಿ ಪಡಿಸುತ್ತಿವೆ. ಬೆಳೆಹಾನಿಗಾಗಿ ಕೃಷಿಕರು ಅರ್ಜಿ ಸಲ್ಲಿಸಿ ಒಂದು ವರ್ಷ ಕಳೆದರೂ ಪರಿಹಾರ ದೊರೆತ್ತಿಲ್ಲ ಎನ್ನುವ ಆರೋಪವಿದೆ. ಕಾಡಾನೆಗಳ ಉಪಟಳ ತಡೆಗೆ ಶಾಶ್ವತವಾದ ವೈಜ್ಞಾನಿಕ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಬೆಳೆಗಾರರ ಸಂಕಷ್ಟ ದೂರವಾಗುವುದಿಲ್ಲವೆಂದು ಕೃಷಿಕರು ತಿಳಿಸಿದ್ದಾರೆ.