ಮಡಿಕೇರಿ ಅ.29 NEWS DESK : ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರುಕುಂಬಿಯಲ್ಲಿ 2014 ರಲ್ಲಿ ನಡೆದ ದಲಿತ ದೌರ್ಜನ್ಯ ಪ್ರಕರಣದ 98 ಮಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದು, ಇದು ಸಂವಿಧಾನದ ಆಶಯಗಳಿಗೆ ಸಂದ ಜಯವಾಗಿದೆ ಎಂದು ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಂಘಟನೆಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಾಗೂ ಮಾನವ ಬಂಧುತ್ವ ವೇದಿಕೆಯ ಪ್ರಮುಖರು ಅಭಿಪ್ರಾಯಪಟ್ಟಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಸಮಿತಿಯ ಸಂಯೋಜಕ ಜೆ.ಆರ್.ಪಾಲಾಕ್ಷ, ಜಿಲ್ಲಾ ಸಂಚಾಲಕ ಎಂ.ಎಸ್.ವೀರೇಂದ್ರ ಹಾಗೂ ಮಾನವ ಬಂಧುತ್ವ ವೇದಿಕೆಯ ಜಿಲ್ಲಾ ಸಂಚಾಲಕ ಜೆ.ಎಲ್.ಜನಾರ್ಧನ್, ಕಳೆದ 10 ವರ್ಷಗಳಿಂದ ತೀರ್ಪಿಗಾಗಿ ಕಾಯುತ್ತಿದ್ದ ಸಂತ್ರಸ್ತರ ಹಲವು ಕುಟುಂಬಗಳಿಗೆ ನ್ಯಾಯ ಸಿಕ್ಕಿದಂತ್ತಾಗಿದ್ದು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸುವುದಾಗಿ ತಿಳಿಸಿದ್ದಾರೆ. 2014 ರಲ್ಲಿ ಕೊಪ್ಪಳ ಜಿಲ್ಲೆ ಗಂಗಾವತಿ ತಾಲ್ಲೂಕು ಮುರುಕುಂಬಿ ಗ್ರಾಮದಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯವೆಸಗಿ ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಈ ಪ್ರಕರಣವನ್ನು ನ್ಯಾಯಾಲಯವು ಗಂಭೀರವಾಗಿ ಪರಿಗಣಿಸಿತು. ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಸಂವಿಧಾನದ ಅಡಿಯಲ್ಲಿ ವಕೀಲರು ಹೋರಾಟ ನಡೆಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಶೋಷಿತರಿಗೆ ನ್ಯಾಯ ಸಿಗುವಂತೆ ಮಾಡಿದ್ದಾರೆ. ಹೋರಾಟ ನಡೆಸಿದ ವಕೀಲರಿಗೆ, ಸಂಘಟನೆಗಳಿಗೆ, ಹೋರಾಟಗಾರರಿಗೆ ಹಾಗೂ ಐತಿಹಾಸಿಕ ತೀರ್ಪು ನೀಡಿದ ನ್ಯಾಯಾಧೀಶರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಮಾನತೆಯ ಕನಸು ನನಸಾಗಿದೆ. ಸಂವಿಧಾನ, ಪ್ರಜಾಪ್ರಭುತ್ವ ಮತ್ತು ನ್ಯಾಯಾಂಗ ವ್ಯವಸ್ಥೆ ಇನ್ನೂ ಕೂಡ ದೇಶದಲ್ಲಿ ಬಲವಾಗಿರುವುದಕ್ಕೆ ಈ ತೀರ್ಪು ಸಾಕ್ಷಿಯಾಗಿದೆ ಎಂದು ಪಾಲಾಕ್ಷ, ವೀರೇಂದ್ರ ಹಾಗೂ ಜನಾರ್ಧನ ಅಭಿಪ್ರಾಯಪಟ್ಟಿದ್ದಾರೆ.