ನಾಪೋಕ್ಲು ಅ.29 NEWS DESK : ಅಧಿಕ ಮಳೆಯಿಂದಾಗಿ ಕಾಫಿ, ಕಾಳು ಮೆಣಸು, ಅಡಿಕೆ ಫಸಲು ನಷ್ಟವಾಗಿದ್ದು, ಸಂಬಂಧಿಸಿದ ಇಲಾಖೆ ಸೂಕ್ತ ಪರಿಹಾರ ನೀಡಬೇಕು ಎಂದು ಕುಂಬಳದಾಳು ಗ್ರಾಮದ ಕೃಷಿಕ ನೆರವಂಡ ಜಯ ಮುತ್ತಪ್ಪ, ಒತ್ತಾಯಿಸಿದರು. ನಾಪೋಕ್ಲುವಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹೊದ್ದೂರು-ಕುಂಬಳದಾಳು ಭಾಗದಲ್ಲಿ ಈ ವರ್ಷ ಅತಿ ಹೆಚ್ಚು ಮಳೆಯಾಗಿದೆ. ಇದುವರೆಗೆ 114 ಇಂಚು ಮಳೆಯಾಗಿದೆ. ಈ ಹಿಂದೆ ನೂರು ಇಂಚಿಗೂ ಅಧಿಕ ಮಳೆಯಾದ ಸಂದರ್ಭದಲ್ಲಿ ಸರ್ಕಾರ ಬೆಳೆಗಾರರಿಗೆ ಪರಿಹಾರ ನೀಡಿದ್ದು, ಈ ವರ್ಷ ಯಾವುದೇ ಪರಿಹಾರ ಇದುವರೆಗೆ ರೈತರಿಗೆ ಲಭಿಸಿಲ್ಲ ಎಂದರು. ಪ್ರತಿದಿನ ಮಳೆಯಾಗುತ್ತಿದ್ದು ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಮಂಡಳಿ ಮೂಲಕ ಉದುರಿರುವ ಕಾಫಿ, ಕಾಳು ಮೆಣಸು ಕೃಷಿ ಬೆಳೆಗಳ ಸರ್ವೆ ನಡೆಸಲು ಮನವಿ ಸಲ್ಲಿಸಲಾಗಿದೆ. ಶಾಸಕರಿಗೆ ಹಾಗೂ ಜಿಲ್ಲಾಧಿಕಾರಿಗೆ ಮನವಿ ಪತ್ರ ನೀಡಲಾಗಿದೆ. ರೈತರಿಗೆ ಶೀಘ್ರ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಕುಂಬಳಗಾಳು ಗ್ರಾಮದ ತೆಕ್ಕಡೆ ಸುಗು ಗಣಪತಿ ಮಾತನಾಡಿ, ಕಾಫಿಗೆ ಕೊಳೆರೋಗ ಕಂಡುಬಂದಿದ್ದು ವಾರ್ಷಿಕ ಆದಾಯ ಕಡಿಮೆಯಾಗಿದೆ. ರೈತರು ಜೀವನ ನಡೆಸುವುದು ಕಷ್ಟಕರವಾಗಿದೆ. ರೈತರಿಗೆ ಸೂಕ್ತ ಪರಿಹಾರವನ್ನು ಒದಗಿಸಬೇಕೆಂದು ಆಗ್ರಹಿಸಿದರು. ಕುಂಬಳದಾಳು ಗ್ರಾಮದ ಕೃಷಿಕರಾದ ತಕ್ಕಡೆ ಪೂರ್ಣೇಶ್ ಸೋಮಣ್ಣ, ಹೊದ್ದೂರು ಗ್ರಾಮದ ಚಟ್ಟಿಮಾಡ ಪ್ರವೀಣ, ಕುಂಬಳದಾಳು ಗ್ರಾಮದ ದೇವಜನ ವಿಖ್ಯಾತ್ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.