ನಾಪೋಕ್ಲು ಅ.30 NEWS DESK : ನಾಲ್ನಾಡ್ ಕಪ್ ಹಾಕಿ ಕ್ರೀಡಾಕೂಟ ಜಿಲ್ಲೆಯಲ್ಲಿ ಹೆಸರುವಾಸಿಯಾಗಿದೆ. 12 ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಕ್ರೀಡಾಕೂಟಕ್ಕೆ ಅಪ್ಪಚೆಟ್ಟೋಳಂಡ ಕುಟುಂಬ ಸಹಾಯಧನ ನೀಡುವುದರ ಮೂಲಕ ಕ್ರೀಡೆಗೆ ಪುನಃ ಚೇತನ ನೀಡಿದೆ ಎಂದು ನಾಪೋಕ್ಲು ಕೊಡವ ಸಮಾಜದ ಉಪಾಧ್ಯಕ್ಷ ಕರವಂಡ ಲವ ನಾಣಯ್ಯ ಹೇಳಿದರು. ಬಲ್ಲಮಾವಟಿ ಗ್ರಾಮದ ನೇತಾಜಿ ವಿದ್ಯಾ ಸಂಸ್ಥೆಯ ಆಟದ ಮೈದಾನದಲ್ಲಿ ನಾಲ್‍ನಾಡು ಹಾಕಿ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಅಂತರ ಗ್ರಾಮ ಹಾಕಿ ಪಂದ್ಯಾವಳಿ ಮತ್ತು ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಕ್ರೀಡೆಯಲ್ಲಿ ತೊಡಗಿಸಿಕೊಂಡ ಹಲವು ಯುವಕರು ಉತ್ತಮ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಗ್ರಾಮ ಗ್ರಾಮದ ನಡುವೆ ಉತ್ತಮ ಸಂಬಂಧ ಇರಿಸಿಕೊಳ್ಳಬೇಕಾಗಿದೆ ಎಂದರು. ಗ್ರಾ.ಪಂ ಉಪಾಧ್ಯಕ್ಷ ಚೊಕೆರ ಬಾಭಿ ಭೀಮಯ್ಯ ಮಾತನಾಡಿ, ಕ್ರೀಡೆಯಲ್ಲಿ ಶಿಸ್ತು ಮುಖ್ಯ ಶಿಸ್ತಿನಿಂದ ಪಾಲ್ಗೊಂಡರೆ ವಿದ್ಯಾರ್ಥಿಗಳು ಯುವಜನರು ಯಶಸ್ಸು ಗಳಿಸಬಹುದು ಎಂದರು. ಗ್ರಾ.ಪಂ ಮಾಜಿ (ಪ್ರಧಾನ) ಅಧ್ಯಕ್ಷ ಮೂವೆರ ನಾಣಪ್ಪ ಮಾತನಾಡಿ, ಹಾಕಿ ಕ್ರೀಡೆಗೆ ಜಿಲ್ಲೆ ಮಹತ್ವದ ಕೊಡುಗೆ ನೀಡಿದ್ದು ನಾಲ್ಕು ನಾಡು ಹಾಕಿ ಪಂದ್ಯಾವಳಿಯು ಗ್ರಾಮೀಣ ಮಟ್ಟದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ ಎಂದರು. ಗ್ರಾಮೀಣ ಮಟ್ಟದಲ್ಲಿ ಹಲವು ಕ್ರೀಡಾಪಟುಗಳು ಕ್ರೀಡೆಯ ಮೂಲಕ ಪ್ರಸಿದ್ಧಿಗೆ ಬಂದಿದ್ದಾರೆ. ಶಾಲೆಯ ವಿದ್ಯಾರ್ಥಿಗಳು ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳುವುದರ ಮೂಲಕ ಉನ್ನತ ಸಾಧನೆ ಮಾಡಬೇಕು ಎಂದರು. ನೇತಾಜಿ ವಿದ್ಯಾ ಸಂಸ್ಥೆಯ ಗೌರವ ಕಾರ್ಯದರ್ಶಿ ಮುಕ್ಕಾಟಿರ ವಿನಯ್ ಮಾತನಾಡಿ, ಕಾಫಿಗೆ ಉತ್ತಮ ಧಾರಣೆ ದೊರೆಯುತ್ತಿದ್ದು, ಕೃಷಿಕರು ಉತ್ತಮ ಸ್ಥಿತಿಯಲ್ಲಿ ಇರುವುದರಿಂದ ಗ್ರಾಮೀಣ ಪ್ರದೇಶದಲ್ಲಿ ದಾನಿಗಳ ಸಂಖ್ಯೆ ಹೆಚ್ಚಾಗಿದೆ. ದಾನಿಗಳ ನೆರವಿನಿಂದ ನಾಲ್ನಾಡು ಕಪ್ ಹಾಕಿ ಸಮಿತಿ ಯಶಸ್ವಿ ಕ್ರೀಡಾಕೂಟ ಆಯೋಜಿಸಿದೆ. ವಿವಿಧ ಗ್ರಾಮಗಳಲ್ಲಿ ಕ್ರೀಡಾಕೂಟಗಳನ್ನು ಆಯೋಜಿಸಲಾಗುತ್ತಿದೆ. ಸಂಘಟನೆಗಳು ಕೇವಲ ಕ್ರೀಡೆಗೆ ಸೀಮಿತವಾಗಿರದೆ ಗ್ರಾಮೀಣ ಅಭಿವೃದ್ಧಿಗೆ ಪೂರಕವಾಗಿರಲಿ ಎಂದರು. ಇದಕ್ಕೂ ಮೊದಲು ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿಥಿಗಳು ಕ್ರೀಡಾಪಟುಗಳನ್ನು ಪರಿಚಯಿಸಿಕೊಂಡು ಶುಭ ಹಾರೈಸಿದರು. ನಾಲ್ನಡ್ ಕಪ್ ಹಾಕಿ ಪಂದ್ಯಾವಳಿಯನ್ನು ಅಪ್ಪಚೆಟ್ಟೋಳಂಡ ಕುಟುಂಬದ ಉಪಾಧ್ಯ ಅಪ್ಪಚೆಟ್ಟೋಳಂಡ ಭೀಮಯ್ಯ ಉದ್ಘಾಟಿಸಿದರು. ನಾಲ್ನಾಡು ಹಾಕಿ ಕ್ಲಬ್ ಅಧ್ಯಕ್ಷ ಕರವಂಡ ಟಿ.ಸುರೇಶ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಾಫಿ ಬೆಳೆಗಾರ ಅಪ್ಪುಮಣಿಯಂಡ ರಘು ಸುಬ್ಬಯ್ಯ, ಕ್ರೀಡಾಕೂಟದ ಸಂಚಾಲಕ ಅಪ್ಪಚೆಟ್ಟೊಳಂಡ ಮನು ಮುತ್ತಪ್ಪ, ಹಾಕಿ ಕ್ಲಬ್ ಖಜಾಂಚಿ ಚಿಯಂಡೀರ ದಿನೇಶ್, ನೇತಾಜಿ ವಿದ್ಯಾ ಸಂಸ್ಥೆಯ ಮುಖ್ಯ ಶಿಕ್ಷಕ ಸಿ.ಎಸ್.ಸುರೇಶ್, ಟ್ರೋಫಿ ದಾನಿಗಳು, ಕ್ಲಬ್ ಪದಾಧಿಕಾರಿಗಳು, ನಿರ್ದೇಶಕರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅಪ್ಪಚೆಟ್ಟೊಳಂಡ ಮನು ವಸಂತ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮದ ವೀಕ್ಷಕ ವಿವರಣೆಯನ್ನು ಮಾಲೇಟಿರ ಶ್ರೀನಿವಾಸ ಮತ್ತು ಕರವಂಡ ಸೀಮಾ ನಿರ್ವಹಿಸಿಕೊಟ್ಟರು. ಬಲ್ಲಮಾವಟಿ (ವೈಟ್) ಮತ್ತು ನಾಪೋಕ್ಲು (ಗ್ರೀನ್) ತಂಡಗಳ ನಡುವೆ ಉದ್ಘಾಟನಾ ಪಂದ್ಯ ನಡೆಯಿತು. ಬಲ್ಲಮಾವಟಿ ತಂಡ 3 -0 ಗೋಲುಗಳ ಅಂತರದಿಂದ ಗೆಲುವು ಸಾಧಿಸಿತು. ಎರಡನೇ ಪಂದ್ಯದಲ್ಲಿ ನಾಲಡಿ ಪುಲಿಕೋಟು ವಿರುದ್ಧ 6-0 ಅಂತರದ ಭರ್ಜರಿ ಜಯ ಸಾಧಿಸಿತು. ಮೂರನೇ ಪಂದ್ಯದಲ್ಲಿ ಪೆರೂರು ತಂಡ ಬಲ್ಲಮಾವಟಿ (ಗ್ರೀನ್ಸ್) ತಂಡದೊಂದಿಗೆ ಸ್ಪರ್ಧಿಸಿತು. ಪೇರೂರು ತಂಡ ನಾಲ್ಕು ಗೋಲು ಗಳಿಸಿದರೆ ಬಲ್ಲಮಾವಟಿ ಒಂದು ಗೋಲಿನೊಂದಿಗೆ ಪರಾಭವಗೊಂಡಿತು. ನಾಲ್ಕನೇ ಪಂದ್ಯದಲ್ಲಿ ಕುಂಜಿಲ ತಂಡವು ನೆಲಜಿ ತಂಡದ ವಿರುದ್ಧ ಭರ್ಜರಿ ಜಯಗಳಿಸಿತು. ಕುಂಜಿಲ ತಂಡವು 6-0 ಅಂತರದಿಂದ ಗೆಲುವು ಸಾಧಿಸಿ ಮುಂದಿನ ಸುತ್ತು ಪ್ರವೇಶಿಸಿತು.
ವರದಿ : ದುಗ್ಗಳ ಸದಾನಂದ.