ಮಡಿಕೇರಿ NEWS DESK ಅ.30 : ರಾತ್ರಿ ವೇಳೆ ಕೆಎಸ್‌ಆರ್‌ಟಿಸಿ ಬಸ್ ಗಳು ಮಡಿಕೇರಿ ಬಸ್ ನಿಲ್ದಾಣಕ್ಕೆ ಬಾರದೆ ಜನರಲ್ ತಿಮ್ಮಯ್ಯ ವೃತ್ತದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿವೆ ಎಂದು ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಹ ಕಾರ್ಯದರ್ಶಿ ಇಬ್ರಾಹಿಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿ ಪ್ರಯಾಣಿಕರು ಪಡುತ್ತಿರುವ ಕಷ್ಟದ ಕುರಿತು ವಿವರಿಸಿದರು. ರಾತ್ರಿ ವೇಳೆ ಮಂಗಳೂರು, ಬೆಂಗಳೂರು, ಮೈಸೂರು ಕಡೆಯಿಂದ ಬರುವ ಬಸ್ ಗಳು ಮಡಿಕೇರಿ ಬಸ್ ನಿಲ್ದಾಣಕ್ಕೆ ಹೋಗದೆ ಪ್ರಯಾಣಿಕರನ್ನು ಜನರಲ್ ತಿಮ್ಮಯ್ಯ ವೃತ್ತದಲ್ಲೇ ಇಳಿಸಲಾಗುತ್ತಿದೆ. ಮಧ್ಯರಾತ್ರಿಯಲ್ಲಿ ಪ್ರಯಾಣಿಕರು ಭಯದ ವಾತಾವರಣವನ್ನು ಎದುರಿಸಬೇಕಾಗಿದೆ. ನಿಗಧಿತ ಸ್ಥಳಗಳಿಗೆ ತೆರಳಲು ಆಟೋರಿಕ್ಷಾಗಳಿಗೆ ದುಬಾರಿ ದರ ನೀಡಬೇಕಾಗಿದೆ. ಬೀದಿನಾಯಿಗಳು ಪ್ರಯಾಣಿಕರ ಮೇಲೆ ದಾಳಿ ಮಾಡುತ್ತಿವೆ. ಬಸ್ ಸಿಬ್ಬಂದಿಗಳು ಪ್ರಯಾಣಿಕರ ಹಿತ ಕಾಪಾಡದೆ ಹಾರಿಕೆಯ ಉತ್ತರ ನೀಡಿ ಮರಳುತ್ತಿದ್ದಾರೆ ಎಂದು ಇಬ್ರಾಹಿಂ ಆರೋಪಿಸಿದರು. ತಕ್ಷಣ ಸ್ಪಂದಿಸಿದ ಡಿಪೋ ವ್ಯವಸ್ಥಾಪಕರು ಸಂಬಂಧಪಟ್ಟವರಿಗೆ ಕರೆ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.









