ಮಡಿಕೇರಿ NEWS DESK ನ.4 : ರಾಜ್ಯ ಕಾಂಗ್ರೆಸ್ ಸರ್ಕಾರ ವಕ್ಫ್ ಮಂಡಳಿಯನ್ನು ಬಳಸಿಕೊಂಡು ರಾಜ್ಯ ವ್ಯಾಪಿ ಬಡವರ್ಗದ ಮಂದಿಯ ಭೂಮಿಯನ್ನು ಕಬಳಿಸುವ ಪ್ರಯತ್ನಕ್ಕೆ ಮುಂದಾಗಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಬಿಜೆಪಿ ನಗರದ ಜನರಲ್ ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟನೆ ನಡೆಸಿತು. ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಕಾರ್ಯಕರ್ತರು ವಕ್ಫ್ ನಿಯಮಗಳನ್ನು ಬದಲಿಸಬೇಕೆಂದು ಒತ್ತಾಯಿಸಿದರು. ಹಲವಾರು ವರ್ಷಗಳಿಂದ ಕೃಷಿ ಚಟುವಟಿಕೆಗಳನ್ನು ನಡೆಸಿಕೊಂಡು ಬಂದಿರುವ ಜಾಗದ ಆರ್‌ಟಿಸಿಯಲ್ಲಿ “ವಕ್ಫ್ ಆಸ್ತಿ” ಎಂದು ನಮೂದಿಸಿ ಬಡ ರೈತರಿಗೆ ನೋಟಿಸ್ ನೀಡುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಹಿಂದೆಂದೂ ಕಾಣದಷ್ಟು ಇಂಧನ ಬೆಲೆ ಹೆಚ್ಚಳವಾಗಿದೆ. ವಿವಿಧ ತೆರಿಗೆಗಳನ್ನು ಹೆಚ್ಚಿಸುವ ಮೂಲಕ ಜನರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ. ಬಡವರ್ಗದ ಹಿತಕ್ಕಾಗಿ ಇರುವ ವಾಲ್ಮೀಕಿ ಕಲ್ಯಾಣ ನಿಗಮದ ಹಗರಣ ಸೇರಿದಂತೆ, ಸ್ವತಃ ಸಿಎಂ ಅವರೆ ಸಿಲುಕಿಕೊಂಡಿರುವ ಮುಡಾ ಹಗರಣಗಳೊಂದಿಗೆ ಈ ಸರ್ಕಾರದಲ್ಲಿ ಭ್ರಷ್ಟಾಚಾರದ ಸರಮಾಲೆಯೆ ನಡೆಯುತ್ತಿದೆ. ಬಿಜೆಪಿಯನ್ನು ಶೇ.40 ಕಮಿಷನ್ ಪಕ್ಷವೆನ್ನುತ್ತಿದ್ದ ಕಾಂಗ್ರೆಸ್ ಇದೀಗ ಶೇ.100ರಷ್ಟು ಭ್ರಷ್ಟಾಚಾರದಲ್ಲಿ ತೊಡಗಿದೆ. ಈ ಎಲ್ಲಾ ಹಗರಣಗಳ ನಡುವೆ ಇದೀಗ ವಕ್ಫ್ ಮಂಡಳಿಯ ಮೂಲಕ ಬಡವರ್ಗದ ಜಾಗವನ್ನು ಕಬಳಿಸುವ ಹುನ್ನಾರಕ್ಕೆ ಸರ್ಕಾರ ಮುಂದಾಗಿದೆಯೆಂದು ಆರೋಪಿಸಿದರು. ಜಿಲ್ಲಾ ಬಿಜೆಪಿ ಚುನಾವಣಾ ಉಸ್ತುವಾರಿ ಸುಲೋಚನಾ ಭಟ್ ಮಾತನಾಡಿ, ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿರುವ ಜಮೀನಿನನ್ನು ಅವರದೇ ಸಮೂಹದ ಮಂದಿ ಒತ್ತುವರಿ ಮಾಡಿದ್ದಾರೆ, ಅದನ್ನು ಬಿಡಿಸಿ ಬಡ ಮಂದಿಗೆ ಕೊಡುವ ಬದಲಾಗಿ, ಬಡ ವರ್ಗದ ಮಂದಿಯ ಬಳಿಯಲ್ಲಿರುವ ಜಾಗವನ್ನು ಕಬಳಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು. ಕೊಡಗು ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಲ್ಲಿಂದ ಒಂದು ಸಮೂಹದ ತುಷ್ಟೀಕರಣ ಮಾಡುತ್ತಲೇ ಬಂದಿದೆ. ಅದರ ಭಾಗವಾಗಿ ಇದೀಗ ವಕ್ಫ್ ಮೂಲಕ ಜಾಗ ಕಬಳಿಸುವ ಪ್ರಯತ್ನ ನಡೆದಿದೆ. ರೈತರ ಆರ್‌ಟಿಸಿಯಲ್ಲಿ ವಕ್ಫ್ ಆಸ್ತಿ ಎನ್ನುವುದನ್ನು ತೆಗೆದು ಹಾಕುವವರೆಗೆ ರಾಜ್ಯ ವ್ಯಾಪಿ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಕೆ ನೀಡಿದರು. ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮೆರವಣಿಗೆಯ ಮೂಲಕ ತೆರಳಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಬಿಜೆಪಿ ಪ್ರಮುಖರಾದ ರಾಬಿನ್ ದೇವಯ್ಯ, ಶಾಂತೆಯಂಡ ರವಿ ಕುಶಾಲಪ್ಪ, ಅನಿತಾ ಪೂವಯ್ಯ, ಸುವಿನ್ ಗಣಪತಿ, ವಿ.ಕೆ.ಲೋಕೇಶ್, ಮಹೇಶ್ ಜೈನಿ, ಕಾಂಗೀರ ಸತೀಶ್, ಕನ್ನಂಡ ಸಂಪತ್, ಕೆ.ಎಸ್.ರಮೇಶ್, ತಳೂರು ಕಿಶೋರ್ ಕುಮಾರ್, ಉಮೇಶ್ ಸುಬ್ರಮಣಿ, ಬಿ.ಬಿ.ಭಾರತೀಶ್, ಡೀನ್ ಬೋಪಣ್ಣ, ಅರುಣ್ ಶೆಟ್ಟಿ, ಬಿ.ಕೆ.ಜಗದೀಶ್, ಬಿ.ಕೆ.ಅರುಣ್ ಕುಮಾರ್, ಮನು ಮಂಜುನಾಥ್, ಕನ್ನಿಕೆ, ಬಿ.ಪಿ.ಡಿಶು, ಎಸ್.ಸಿ.ಸತೀಶ್, ಸವಿತಾ ರಾಕೇಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.