ಕುಶಾಲನಗರ ಡಿ.24 NEWS DESK : ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ರೈತರ ಕಲ್ಯಾಣಕ್ಕಾಗಿ ಜಾರಿಗೊಳಿಸಿದ ಹಲವು ಸುಧಾರಣೆಗಳು ಹಾಗೂ ಕಲ್ಯಾಣ ಕಾರ್ಯಕ್ರಮಗಳ ಸ್ಮರಣೆಗಾಗಿ ಕೂಡಿಗೆ ಕೃಷಿ ಫಾರಂ ನಲ್ಲಿ ರೈತ ದಿನಾಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಕೃಷಿ ಇಲಾಖೆ ಜಂಟಿ ನಿರ್ದೇಶಕ ಚಂದ್ರಶೇಖರ್, ಮಣ್ಣು ಹಾಗೂ ನೀರನ್ನು ಸಂರಕ್ಷಿಸುವ ಮೂಲಕ ಮುಂದಿನ ಪೀಳಿಗೆಗೆ ಹಸ್ತಾಂತರ ಮಾಡಬೇಕಿದೆ. ಇತ್ತೀಚಿನ ದಿನಗಳಲ್ಲಿ ರೈತರು ಬೆಳೆವ ಬೆಳೆಗಳಿಗೆ ಕೀಟ ಬಾಧೆ ಕಾಡುತ್ತಿದ್ದು ಅದರ ಹತೋಟಿಗೆ ಕೃಷಿ ವಿಜ್ಞಾನಿಗಳು ನೀಡುವ ಸಲಹೆಗಳನ್ನು ರೈತರು ಪಾಲಿಸಬೇಕಿದೆ. ಪ್ರಧಾನ ಮಂತ್ರಿ ಸಣ್ಣ ಆಹಾರ ಸಂಸ್ಕರಣೆ ಹಾಗೂ ಉದ್ಯಮಗಳ ನಿಯಮ ಬದ್ಧಗೊಳಿಸುವಿಕೆ ಯೋಜನೆಯಡಿ ಸಿಗುವ ಸವಲತ್ತುಗಳನ್ನು ರೈತರಿಗೆ ಒದಗಿಸಲಾಗುತ್ತಿದೆ. ಈಗಾಗಲೇ 7.50 ಕೋಟಿ ರೂಗಳ ಸಹಾಯ ಧನದಲ್ಲಿ ಕೊಡಗಿನಲ್ಲಿ 107 ಕೃಷಿಕರು ಪ್ರಯೋಜನ ಪಡೆದುಕೊಂಡಿದ್ದಾರೆ. ಅಲ್ಲದೇ ಬ್ಯಾಂಕುಗಳಲ್ಲಿ ಸಾಲ ಸೌಲಭ್ಯ ಕಾಫಿ, ಜೇನು, ಮೀನು, ಚಪಾತಿ ಸಂಸ್ಕರಣೆ, ಎಣ್ಣೆಯ ಗಾಣಗಳು ಸೇರಿದಂತೆ ವಿವಿಧ ಆಹಾರಗಳ ಸಂಸ್ಕರಣೆಯತ್ತ ರೈತರು ತೊಡಗಿಸಿಕೊಂಡಿದ್ದಾರೆ ಎಂದು ಕೃಷಿ ಜಂಟಿ ನಿರ್ದೇಶಕ ಚಂದ್ರಶೇಖರ್ ತಿಳಿಸಿದರು. ಇಲಾಖೆಯಲ್ಲಿ ಯಾವೆಲ್ಲಾ ಯೋಜನೆಗಳಿವೆ. ಎಷ್ಟು ಸಹಾಯ ಧನ ದೊರಕುತ್ತಿದೆ. ಆ ಯೋಜನೆಗಳ ಕುರಿತು ಉಪ ಕೃಷಿ ನಿರ್ದೇಶಕ ಸೋಮಶೇಖರ್ ಮಾಹಿತಿ ನೀಡಿದರು. ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷ ಭಾಸ್ಕರ ನಾಯಕ್, ಕೊಡಗು ಜಿಲ್ಲಾ ಪಂಚಾಯಿತಿಯ ಮಾಜಿ ಸದಸ್ಯ ಬಿ.ಬಿ.ಭಾರತೀಶ್, ಹಾಸನ ಹಾಲು ಒಕ್ಕೂಟದ ಕೊಡಗು ನಿರ್ದೇಶಕ ಕೆ.ಕೆ.ಹೇಮಂತಕುಮಾರ್ ಮಾತನಾಡಿದರು. ಇದೇ ಸಂದರ್ಭ ಕೃಷಿ ಪಂಡಿತ ಪ್ರಶಸ್ತಿ ವಿಜೇತ ರೈತರಾದ ಮರಗೋಡಿನ ಕೆ.ಜಿ.ಪ್ರೇಮ, ಉದಯೋನ್ಮುಖ ಕೃಷಿ ಪ್ರಶಸ್ತಿ ಪಡೆದ ಹಾಲಗುಂದ ಪಿ.ಬಿ.ಬೋಪಣ್ಣ, ಕಿರಗೂರು ರೇವತಿ, ರಾಜ್ಯ ಮಟ್ಟದ ಕೃಷಿ ಪ್ರಶಸ್ತಿ ವಿಜೇತ ರೈತರಾದ ಕಾಂತೂರಿನ ವಿ.ಎಂ.ಧನಂಜಯ, ಕಿಗ್ಗಾಲು ಪಿ.ಎಂ. ವೇಣುಕುಮಾರ್, ಕೆ.ಬಾಡಗದ ಬೋಪಣ್ಣ, ನಾಲ್ಲೇರಿಯ ಅಲ್ಲೂಮಾಡ ಲೀಲಾ ಇವರನ್ನು ಸನ್ಮಾನಿಸಲಾಯಿತು. ಚೆಟ್ಟಳ್ಳಿ ಕೃಷಿ ಸಂಶೋಧನಾ ಸಂಸ್ಥೆಯ ಕೃಷಿ ವಿಜ್ಞಾನಿಗಳಾದ ಡಾ.ರಾಣಿ, ಡಾ.ರಾಜೇಂದ್ರನ್ ಅವರು ರೈತರಿಗೆ ಉಪಯುಕ್ತ ಮಾಹಿತಿ ನೀಡಿದರು. ಸಹಾಯಕ ಕೃಷಿ ನಿರ್ದೇಶಕರಾದ ಶಿವಮೂರ್ತಿ, ವೀರಣ್ಣ ಇದ್ದರು.











