ಕುಶಾಲನಗರ ನ.5 NEWS DESK : ಕುಶಾಲನಗರ ಮುಳ್ಳುಸೋಗೆ ಶ್ರೀ ಕೋಣ ಮಾರಮ್ಮ ದೇವಾಲಯದ 22ನೇ ವಾರ್ಷಿಕೋತ್ಸವವು ಶ್ರದ್ಧಾಭಕ್ತಿಯಿಂದ ನಡೆಯಿತು. ಶ್ರೀ ಕೋಣ ಮಾರಮ್ಮ ದೇವತಾ ಸೇವ ಟ್ರಸ್ಟ್ ಆಶಯದಲ್ಲಿ ಎರಡು ದಿನಗಳ ಕಾಲ ನಡೆಯುವ ಪೂಜಾ ಕೈಂಕರ್ಯದಲ್ಲಿ ಸಂಪ್ರದಾಯದಂತೆ ಕಾವೇರಿ ನದಿಯಿಂದ ಕಳಸದಲ್ಲಿ ಗಂಗಾಜಲ ತಂದು ಪ್ರತಿಷ್ಠಾಪನೆ ನಡೆಯಿತು. ದೇವಿ ಸನ್ನಿಧಿಯಲ್ಲಿ ಗಣಪತಿ ಹೋಮ, ತೀರ್ಥ ಪ್ರಸಾದ ವಿನಿಯೋಗ ನಂತರ ಮಂಗಳಾರತಿ ಮತ್ತಿತರ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮರುದಿನ ಮಕರ ಲಗ್ನದಲ್ಲಿ ಮಹಾಪೂಜೆ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನೆರವೇರಿತು. ಸಂಜೆ ಪಟಾಕಿ ಸಿಡಿಮದ್ದುಗಳೊಂದಿಗೆ ವಿದ್ಯುತ್ ಅಲಂಕೃತ ಮಂಟಪದಲ್ಲಿ ವಾದ್ಯಗೋಷ್ಠಿಯೊಂದಿಗೆ ದೇವಿಯ ವಿಗ್ರಹದ ಮೆರವಣಿಗೆ ನಡೆಯಿತು. ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಫಲ ತಾಂಬೂಲದೊಂದಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಸಾವಿರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಪಾಲ್ಗೊಂಡು ಪೂಜೆ ಸಲ್ಲಿಸಿದರು. ದೇವತಾ ಸೇವಾ ಟ್ರಸ್ಟ್ ಅಧ್ಯಕ್ಷ ಬಿ.ಕೆ.ಚೆಲುವರಾಜು, ಉಪಾಧ್ಯಕ್ಷ ಎಂ.ಸಿ.ಮಂಜುನಾಥ, ಕಾರ್ಯದರ್ಶಿ ಬಿ.ಜೆ.ಸತೀಶ್ ಕುಮಾರ್, ಸಹ ಕಾರ್ಯದರ್ಶಿ ಎಂ.ಮಂಜುನಾಥ್, ಖಜಾಂಚಿ ಎಚ್.ಜೆ.ಲೋಕೇಶ್, ಮಾಜಿ ಅಧ್ಯಕ್ಷರುಗಳಾದ ಎಂ.ಬಿ.ಸುರೇಶ್, ಎಂ.ಎಸ್.ಶಿವಾನಂದ, ಜಯವರ್ಧನ್, ಆರ್.ಸುರೇಶ್ ಮತ್ತಿತರರು ಇದ್ದರು.