ಮಡಿಕೇರಿ ನ.5 NEWS DESK : ಕರ್ನಾಟಕ ಜಾನಪದ ಅಕಾಡೆಮಿಯಿಂದ ವರ್ಷಂಪ್ರತಿ ನೀಡಲಾಗುವ ಪ್ರಶಸ್ತಿಗೆ ಕೊಡಗಿನ ಜಾನಪದ ಕಲೆಯಾದ ಉರ್‌ಟಿಕೊಟ್ಟ್ ಕಲಾವಿದೆ ಕುಡಿಯರ ಸಿ.ದೇವಕಿ ಆಯ್ಕೆಯಾಗಿದ್ದಾರೆ. ಮೂಲತಃ ವಿರಾಜಪೇಟೆ ತಾಲೂಕಿನ ತೋರ ಸಮೀಪದ ಕೊರ್ತಿಕಾಡು ನಿವಾಸಿಯಾಗಿರುವ ದೇವಕಿಯವರು ಕಳೆದ 20 ವರ್ಷಗಳಿಂದ ಉರ್‌ಟಿಕೊಟ್ಟ್ ಜಾನಪದ ಪ್ರಾಕಾರವನ್ನು ಪ್ರದರ್ಶಿಸುತ್ತ ಬಂದಿದ್ದಾರೆ. ರಾಜ್ಯದ ಹಲವೆಡೆ ಕಾರ್ಯಕ್ರಮ ನೀಡಿ ಜನಮೆಚ್ಚಿಗೆಗೂ ಪಾತ್ರರಾಗಿದ್ದಾರೆ. ಅಳಿವಿನಂಚಿನಲ್ಲಿರುವ ಈ ಕಲೆಯನ್ನು ದೇವಕಿಯವರು ಯುವಕ-ಯುವತಿಯರಿಗೆ ಕಲಿಸಿಕೊಡುವ ಮೂಲಕ ಕಲಾ ಪೋಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿಂದೆ ಇವರಿಗೆ ಕೊಡವ ಸಾಹಿತ್ಯ ಅಕಾಡೆಮಿಯಿಂದಲೂ ಗೌರವ ಪ್ರಶಸ್ತಿ ಲಭಿಸಿತ್ತು. ಜಾನಪದ ಅಕಾಡೆಮಿ ಈ ಬಾರಿ 30 ಜಿಲ್ಲೆಯ 30 ಕಲಾವಿದರಿಗೆ ವಾರ್ಷಿಕ ಪ್ರಶಸ್ತಿ ಸೇರಿದಂತೆ ಇಬ್ಬರು ಜಾನಪದ ತಜ್ಞರು, 5 ಮಂದಿಗೆ ಪುಸ್ತಕ ಬಹುಮಾನವನ್ನು ಘೋಷಿಸಿದೆ.