

ವಿರಾಜಪೇಟೆ ನ.21 NEWS DESK : ಕನ್ನಡ ಕಾರ್ಯಕ್ರಮಗಳು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೆ ಪ್ರತಿದಿನ ಕನ್ನಡ ಪರವಾದ ಕಾರ್ಯಕ್ರಮಗಳು ಜರುಗಬೇಕು. ಕನ್ನಡವನ್ನು ಅಭಿವೃದ್ದಿಪಡಿಸುವಂತಾಗಬೇಕು ಎಂದು ಕೊಡಗು ವಿಶ್ವವಿದ್ಯಾಲಯದ ಕುಲಪತಿ ಡಾ.ಅಶೋಕ ಸಂಗಪ್ಪ ಅಲೂರ ಅಭಿಪ್ರಾಯ ವ್ಯಕ್ತಪಡಿಸಿದರು. ಸೈಂಟ್ ಆನ್ಸ್ ಪದವಿ ಕಾಲೇಜು ಕನ್ನಡ ಭಾಷಾ ವಿಭಾಗ ಸಾಹಿತ್ಯ ಸಂಘ ಕನ್ನಡ ವಿದ್ಯಾರ್ಥಿ ಬಳಗ ಮತ್ತು ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಯುಕ್ತ ಆಶ್ರಯದಲ್ಲಿ ವಿರಾಜಪೇಟೆ ಸಂತ ಅನ್ನಮ್ಮ ಪದವಿ ಕಾಲೇಜು ಸಭಾಂಗಣದಲ್ಲಿ ನಡೆದ ನುಡಿನೃತ್ಯ ಸಂಭ್ರಮ -24 ಮತ್ತು ಪುರಾತನ ವಸ್ತುಗಳ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು, ಮಾತನಾಡಿದರು. ಸಾವಿರಾರು ವರ್ಷಗಳ ಇತಿಹಾಸ ಇರುವ ಕನ್ನಡ ಭಾಷೆಯು ಧೀಮಂತ ಭಾಷೆಯಾಗಿದೆ. ಕನ್ನಡ ಭಾಷೆಗೆ ಹಲವಾರು ಖ್ಯಾತನಾಮ ಕವಿಗಳು ತಮ್ಮದೇಯಾದ ಶೈಲಿಯಲ್ಲಿ ಭಾಷೆಯನ್ನು ಧೀಮಂತಗೊಳಿಸಿದ್ದಾರೆ. ಅದೇ ರೀತಿ ಕನ್ನಡ ಸಾಹಿತ್ಯಕ್ಕೆ ವಿಶ್ವ ಮನ್ನಣೆಯನ್ನು ಗಳಿಸಿಕೊಟ್ಟಿದ್ದಾರೆ. ಪ್ರಸ್ತುತವಾಗಿ ರಾಜ್ಯದ ಬೃಹತ್ ನಗರಗಳಲ್ಲಿ ಕನ್ನಡ ಭಾಷೆಯನ್ನಾಡಲು ಹಿಂಜರಿಕೆ ವ್ಯಕ್ತವಾಗುತ್ತಿದೆ. ಕಾರಣ ಇತರ ಭಾಷೆಗಳ ಪ್ರಭಾವದಿಂದಾಗಿರಬಹುದು. ಕನ್ನಡ ನೆಲ, ಭಾಷೆ, ಎಲ್ಲವನ್ನು ಗೌರವಿಸುವ ನಾವುಗಳು ಅನ್ಯ ಭಾಷೆಗೆ ಗೌರವ ನೀಡುವುದೊಂದಿಗೆ ಮಾತೃ ಭಾಷೆಗೆ ಗೌರವಿಸುವುದನ್ನು ಮರೆಯಬಾರದು. ಕನ್ನಡ ಭಾಷಾ ಕಾರ್ಯಕ್ರಮಗಳು ಒಂದು ತಿಂಗಳ ಅವಧಿಗೆ ಮಾತ್ರ ಸೀಮಿತವಾಗದೆ ಪ್ರತಿದಿನವು ಕಾರ್ಯಕ್ರಮ ಆಚರಣೆಯೊಂದಿಗೆ ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸುವ ಎಂದು ಹೇಳಿದರು. ಕೊಡಗು ವಿಶ್ವವಿದ್ಯಾಲಯದ ಕುಲಸಚಿವ ಡಾ.ಎಂ.ಸುರೇಶ್ ಮಾತನಾಡಿ, ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದೆ. ಮಾತ್ರವಲ್ಲದೆ ಜನಪದ ಸೊಗಡನ್ನು ಹೊಂದಿದೆ. ಪ್ರಾಚೀನ ಕಾಲದಲ್ಲಿಯು ಸಹ ಕನ್ನಡ ಬಗ್ಗೆ ಒಲವಿತ್ತು. ವಿದ್ಯಾರ್ಥಿಗಳು ಭಾಷೆ ಬೆಳವಣಿಗೆಗೆ ಪೂರಕವಾಗಿ ಕನ್ನಡವನ್ನು ಬಳಸಬೇಕು ಎಂದು ಕರೆ ನೀಡಿದರು. ಸಂತ ಅನ್ನಮ್ಮ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ರೆ.ಫಾ. ಜೇಮ್ಸ್ ಡೋಮಿನಿಕ್ ಮಾತನಾಡಿ, ಕನ್ನಡ ಭಾಷೆಯು ನಮ್ಮ ಜೀವಾಳವಾಗಿದೆ. ಕನ್ನಡವು ಸುಮದುರ ಸಾಂಗತ್ಯದ ಭಾಷೆ. ಕರ್ನಾಟಕವು ಜಾನಪದ ಕಲೆಗಳ ತವರಾಗಿದ್ದು, ಎಲ್ಲರೂ ನಮ್ಮ ಮಾತೃ ಭಾಷೆಯನ್ನು ಉಳಿಸಿ ಬೆಳಸಬೇಕು ಎಂದು ಹೇಳಿದರು. ವಿರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ನ ಅಧ್ಯಕ್ಷ ಡಿ.ಪಿ.ರಾಜೇಶ್ ಪದ್ಮನಾಭ ನುಡಿ ಸಂದೇಶವನ್ನು ನೀಡಿ ಪ್ರತಿಜ್ಞಾವಿಧಿ ಭೋದಿಸಿ ಮಾತನಾಡಿ, ಗಡಿನಾಡಿನಲ್ಲಿ ಕನ್ನಡ ಭಾಷೆಯ ಮೇಲೆ ಅನ್ಯ ಭಾಷೆಯ ಪ್ರಭಾವ ಹೆಚ್ಚಾಗಿದೆ. ಆದರೆ ಕನ್ನಡ ರಾಜ್ಯದಲ್ಲಿರುವ ನಾವುಗಳು ಕನ್ನಡ ಭಾಷೆಯನ್ನು ಹೆಚ್ಚಾಗಿ ಬಳಸಿ ಕನ್ನಡ ಭಾಷೆಯನ್ನು ಗೌರವಿಸೋಣ ಎಂದು ಕರೆ ನೀಡಿದರು. ಕಾರ್ಯಕ್ರಮ ಉದ್ದೇಶಿಸಿ ಸಂತ ಅನ್ನಮ್ಮ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಹೆಚ್.ಆರ್.ಅರ್ಜುನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರಾದ ರೆ.ಫಾ. ಮದಲೈ ಮುತ್ತು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಕನ್ನಡ ನಾಡು, ಶಾಂತಿಯ ನೆಲೆವೀಡು. ಕರ್ನಾಟಕ ರಾಜ್ಯ ಉತ್ತರದಿಂದ ದಕ್ಷಿಣದಿಂದ ಹಲವಾರು ಜಾನಪದ ಸಂಸ್ಕೃತಿ ಗಳು ಇಂದಿಗೂ ಜೀವಂತವಾಗಿದೆ. ಕನ್ನಡ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವವಿದ್ದರೂ ಕನ್ನಡ ಭಾಷೆಯನ್ನು ಧೀಮಂತಗೊಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರು ಪ್ರಯತ್ನಿಸಬೇಕು ಎಂದು ಹೇಳಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಪದವಿ ಕಾಲೇಜಿನ ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ನುಡಿ ನೃತ್ಯ ಕಾರ್ಯಕ್ರಮ ನಡೆದು ಜಿಲ್ಲೆಯ ನಾನಾ ಸ್ಥಳಗಳಿಂದ ಒಟ್ಟು 12 ಪದವಿ ಕಾಲೇಜು ವಿದ್ಯಾರ್ಥಿಗಳ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ವಿಧ್ಯಾರ್ಥಿಗಳಿಂದ ಕನ್ನಡ ನಾಡು ನುಡಿ ಸಂಸ್ಕೃತಿಯನ್ನು ಬಿಂಬಿಸುವ ಕಲಾ ಪ್ರಕಾರಗಳು ನಡೆದವು. ನೃತ್ಯ ಸ್ಪರ್ಧೆಯಲ್ಲಿ ಗೊಣಿಕೊಪ್ಪಲು ಕಾವೇರಿ ಪದವಿ ಕಾಲೇಜು ಪ್ರಥಮ ಸ್ಥಾನಗಳಿಸಿತು. ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿರಾಜಪೇಟೆ ದ್ವೀತಿಯ ಸ್ಥಾನ ಪಡೆದುಕೊಂಡಿತ್ತು. ಭಾಗವಹಿಸಿದ ಎಲ್ಲಾ ತಂಡಗಳಿಗೂ ಪ್ರಶಸ್ತಿ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಪುರಾತನ ವಸ್ತುಗಳ ಪ್ರದರ್ಶನ ಕಾಲೇಜಿನ ಆವರಣದಲ್ಲಿ ಏರ್ಪಡಿಸಲಾಗಿತ್ತು. ಕರ್ನಾಟಕ ರಾಜ್ಯ ಜನಪದ ಅಕಾಡೆಮಿ ಪ್ರಶಸ್ತಿ ವಿಜೇತ ಕುಡಿಯರ ದೇವಕ್ಕಿ ಅವರು ಕಾರ್ಯಕ್ರಮ ಉದ್ಘಾಟಿಸಿ ಉರುಟ್ಟಿಕೊಟ್ಟು ಪ್ರದರ್ಶನ ನೀಡಿದರು. ಟೀಂ ಎಂಟೋಪಿಸ್ ನೃತ್ಯ ಸಂಯೋಜಕ ವಿಷ್ಣು, ಮೂರ್ನಾಡು ನೃತ್ಯ ಸಂಯೋಜಕ ಚರಣ್ ರಾಜ್, ನೃತ್ಯ ಸ್ಪರ್ಧೆಯ ತೀರ್ಪುಗಾರರಾಗಿ ಕರ್ತವ್ಯ ನಿರ್ವಹಿಸಿದರು. ವೇದಿಕೆಯಲ್ಲಿ ಪದವಿ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕರಾದ ಬಿ.ಡಿ.ಹೇಮಾ ಮತ್ತು ಕನ್ನಡ ವಿಭಾಗದ ಉಪನ್ಯಾಸಕಿ ಪ್ರತಿಮಾ ಹರೀಶ್ ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಇಂಗ್ಲಿಷ್ ವಿಭಾಗದ ಉಪನ್ಯಾಸಕಿ ಬೀನಾ ರೋಸಿ ಸ್ವಾಗತಿಸಿದರು. ಪ್ರತಿಮಾ ಹರೀಶ್ ರೈ ನಿರೂಪಿಸಿದರು. ಉಪನ್ಯಾಸಕಿ ಶಶಿಕಲಾ ವಂದಿಸಿದರು. ಸಮಾರಂಭದಲ್ಲಿ ಸಂತ ಅನ್ನಮ್ಮ ಪದವಿ ಕಾಲೇಜಿನ ಕನ್ನಡ ಭಾಷ ವಿಭಾಗ ಸಾಹಿತ್ಯ ಸಂಘ ಕನ್ನಡ ವಿದ್ಯಾರ್ಥಿ ಬಳಗದ ಸದಸ್ಯರು, ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ವಿವಿಧ ಕಾಲೇಜಿನ ವಿಧ್ಯಾರ್ಥಿಗಳು, ಉಪನ್ಯಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಿದ್ದರು.