ಮಡಿಕೇರಿ ನ.21 NEWS DESK : ಪತ್ರಕರ್ತ ಹಾಗೂ ಮಾಧ್ಯಮ ಕ್ಷೇತ್ರಕ್ಕೆ ಕಾಲಿಡುವ ತುಡಿತ ಉಳ್ಳವರು ಸಾಮಾಜಿಕ ಬದ್ಧತೆ, ಕಳಕಳಿಯನ್ನು ಹೊಂದಿರುವುದು ಅತ್ಯಗತ್ಯ ಎಂದು ಕೊಡಗು ವಿಶ್ವ ವಿದ್ಯಾನಿಲಯದ ಕುಲಪತಿ ಪ್ರೊ. ಅಶೋಕ್ ಸಂಗಪ್ಪ ಆಲೂರ ಪ್ರತಿಪಾದಿಸಿದರು. ನಗರದ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಸಭಾಂಗಣದಲ್ಲಿ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಎಫ್.ಎಂ.ಕೆ.ಎಂ.ಸಿ. ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ಮಾಧ್ಯಮ ಮಾಹಿತಿ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಕಲೆ, ಕೌಶಲ್ಯ, ವಿಶೇಷ ಆಸಕ್ತ್ತಿ ಇದ್ದರೆ ಮಾತ್ರ ಪತ್ರಿಕೋದ್ಯಮ ಕ್ಷೇತ್ರದಲ್ಲಿ ನೆಲೆಯೂರಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವಾಗಲೇ ಕ್ಷೇತ್ರದ ಕುರಿತು ಅಭಿರುಚಿ ಬೆಳೆಸಿಕೊಳ್ಳಬೇಕು. ನಿತ್ಯ ಪತ್ರಿಕೆ ಓದಬೇಕು. ಸುದ್ದಿ ವಾಹಿನಿಗಳನ್ನು ಗಮನಿಸಬೇಕು. ಜಾಗತಿಕ ವಿದ್ಯಮಾನಗಳ ಬಗ್ಗೆ ಅರಿತುಕೊಳ್ಳಬೇಕು. ಈ ರೀತಿಯ ಕಾರ್ಯಾಗಾರ ಹಾಗೂ ಪ್ರಾಯೋಗಿಕ ಕಲಿಕೆ ವಿದ್ಯಾರ್ಥಿಗಳ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಿಸಿದರು. ಕೊಡಗು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ ಪ್ರೊ. ಸುರೇಶ್ ಮಾತನಾಡಿ, ಪತ್ರಕರ್ತರ ಇರುವಿಕೆಯಿಂದ ಸಮಾಜ ಸದೃಢ ಹಾಗೂ ಆರೋಗ್ಯವಂತವಾಗಿದೆ. ವಿಷಯದ ಬಗ್ಗೆ ಅಧ್ಯಯನ ನಡೆಸಿ ಅದರ ಸಾಧಕ-ಬಾಧಕಗಳನ್ನು ಕಲಿಯುವ ಕೆಲಸ ಪತ್ರಿಕೋದ್ಯಮ ವಿದ್ಯಾರ್ಥಿಗಳಿಂದ ಆಗಬೇಕು. ಪ್ರಶ್ನಿಸುವ ಗುಣವೂ ಇರಬೇಕು ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷೆ ಬಿ.ಆರ್.ಸವಿತಾ ರೈ ಮಾತನಾಡಿ, ಪತ್ರಕರ್ತ ವೃತ್ತಿ ನೋಡಿದಷ್ಟು ಸುಲಭವಲ್ಲ. ದಿನನಿತ್ಯ ಸವಾಲುಗಳನ್ನು ಮೈಮೇಲೆ ಎಳೆದುಕೊಳ್ಳುತ್ತೇವೆ. ಸೂಕ್ಷ್ಮ ವಿಚಾರಗಳ ಬಗ್ಗೆಯೂ ಗಮನ ನೀಡಬೇಕು. ನಮ್ಮಿಂದ ಯಾವುದೇ ತಪ್ಪಾಗಬಾರದು. ದಾಖಲೆ ರಹಿತ ಅಥವಾ ಸುಳ್ಳು ಸುದ್ದಿಗಳಿಂದ ನ್ಯಾಯಾಂಗ ಸುಳಿಗೂ ಸಿಲುಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಸುದ್ದಿಯ ಸತ್ಯಾಸತ್ಯತೆಯನ್ನು ಗಮನಿಸಬೇಕು ಎಂದು ತಿಳಿ ಹೇಳಿದ ಅವರು, ಪತ್ರಕರ್ತ ವೃತ್ತಿ ಆಯ್ಕೆ ಮಾಡಿಕೊಳ್ಳುವವರು ಬದ್ಧತೆಯಲ್ಲಿ ಕಾರ್ಯನಿರ್ವಹಿಸಬೇಕು. ಮಾನಸಿಕ ಕ್ಷಮತೆಯೂ ಅತೀ ಮುಖ್ಯ ಎಂದು ಹೇಳಿದರು.
ಕಾಲೇಜಿನ ಪ್ರಭಾರ ಪ್ರಾಶುಪಾಲ ಫ್ರೋ. ಶ್ರೀದರ್ ಹೆಗ್ಗಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗಾಗಿ ಈ ರೀತಿ ಕಾರ್ಯಕ್ರಮ ಆಯೋಜಿಸಿ ಆತ್ಮಸ್ಥೈರ್ಯ ತುಂಬುವ ಕೆಲಸವಾಗಿದೆ. ಕಲಿತ ವಿಚಾರವನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯುವಂತೆ ಕರೆ ನೀಡಿದರು.
ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತನಿಗೆ ಸಮಾಜದಲ್ಲಿ ಉತ್ತಮ ಸ್ಥಾನಮಾನಗಳು ದೊರೆಯುತ್ತವೆ. ಅದನ್ನು ದುರ್ಬಳಕೆ ಮಾಡಿಕೊಳ್ಳದೆ ಸಮಾಜಕ್ಕೆ ಒಳ್ಳೆಯ ಕೆಲಸವನ್ನು ಮಾಡಬೇಕು. ಪತ್ರಕರ್ತ ಮನಸ್ಸು ಮಾಡಿದರೆ ಸಮಾಜವನ್ನು ಬದಲಾಯಿಸಬಹುದು ಎಂದ ಅವರು, ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡಲು ವಿಪುಲ ಅವಕಾಶಗಳಿದ್ದು, ವಿದ್ಯಾರ್ಥಿಗಳು ಅದನ್ನು ಬಳಸಿಕೊಂಡು ಉನ್ನತ ಸ್ಥಾನಕ್ಕೆ ಹೋಗಬೇಕು ಎಂದರು. ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಸಂಯೋಜಕಿ ಡಾ. ನಯನ ಕಾಶ್ಯಪ್ ಮಾತನಾಡಿ, ಕಾರ್ಯಕ್ರಮದ ಅಂಗವಾಗಿ ಮಾಧ್ಯಮ ಕಾರ್ಯಾಲಯಕ್ಕೆ ವಿದ್ಯಾರ್ಥಿಗಳು ಭೇಟಿ ನೀಡಿ ಪ್ರಾಯೋಗಿಕ ಕಲಿಕೆ ಪಡೆದಿದ್ದಾರೆ. ಇದು ಮುಂದಿನ ಭವಿಷ್ಯಕ್ಕೆ ಪ್ರಯೋಜನಕಾರಿ ಎಂದರು. ‘ಮಾಧ್ಯಮ ಕ್ಷೇತ್ರದ ಸ್ವರೂಪ ಬದಲಾವಣೆ’ ಎಂಬ ವಿಷಯ ಕುರಿತು ವಿಜಯವಾಣಿಯ ಜಿಲ್ಲಾ ವರದಿಗಾರ ಸುನಿಲ್ ಪೊನ್ನೇಟಿ ಮಾತನಾಡಿ, ದಿನದಿಂದ ದಿನಕ್ಕೆ ಮಾಧ್ಯಮ ಕ್ಷೇತ್ರ ಬದಲಾವಣೆಗೊಳ್ಳುತ್ತ ಹೋಗುತ್ತಿದೆ. ಅದಕ್ಕೆ ಒಗ್ಗಿಕೊಳ್ಳದಿದ್ದಲ್ಲಿ ಇಲ್ಲಿ ಉಳಿಯುವುದು ಕಷ್ಟ ಸಾಧ್ಯ. ಸಾಮಾಜಿಕ ಜಾಲತಾಣಗಳು ಪ್ರವರ್ಧಮಾನಕ್ಕೆ ಬರುತ್ತಿದೆ. ಇದಕ್ಕೂ ಪತ್ರಿಕಾ ರಂಗ ಹೊಂದಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಓದುಗರ ವಿವಿಧ ಅಭಿರುಚಿಯಡಿ ಸುದ್ದಿ ನೀಡಬೇಕಾದ ಸಂದಿಗ್ದತೆಯೂ ಇರುತ್ತದೆ. ಇ-ಪೇಪರ್, ಡಿಜಿಟಲ್ ಪ್ರಪಂಚ ಹಾಗೂ ಇಷ್ಟೆಲ್ಲ ಬದಲಾವಣೆಗಳ ನಡುವೆ ಸಾಂಪ್ರದಾಯಕ ಮಾಧ್ಯಮಗಳು ತನ್ನ ಗೌರವ ಕಾಯ್ದುಕೊಂಡಿದೆ ಎಂದ ಅವರು, ಪತ್ರಿಕೆ ಓದುಗರ ಸಂಖ್ಯೆ ಕ್ಷೀಣಿಸುತ್ತಿದ್ದು, ಪ್ರತಿಯೊಬ್ಬರು ಓದುವ ಅಭ್ಯಾಸ ಮೈಗೂಡಿಸಿಕೊಳ್ಳುವಂತೆ ಹೇಳಿದರು. ‘ಕಾಂಟೆಂಟ್ ಕ್ರಿಯೇಷನ್’ ಕುರಿತು ಟಿವಿ-9 ಜಿಲ್ಲಾ ವರದಿಗಾರ ಐಮಂಡ ಗೋಪಾಲ್ ಸೋಮಯ್ಯ ಮಾತನಾಡಿ, ಕೃತಕ ಬುದ್ದಿಮತ್ತೆ ಯುಗದಲ್ಲಿ ‘ಕಾಂಟೆಂಟ್ ಕ್ರಿಯೇಷನ್’ ಹೊಸ ಮಜಲು ಸೃಷ್ಟಿಸಿದೆ. ಸಾಮಾಜಿಕ ಜಾಲತಾಣ ವೇದಿಕೆ ಬಳಸಿಕೊಂಡು ಜನರಿಗೆ ಹತ್ತಿರವಾಗುವ ಅವಕಾಶಗಳಿವೆ. ಸಮಸ್ಯೆಗಳ ಪರಿಹಾರ, ಜಾಗತಿಕ ವಿದ್ಯಮಾನ, ವಿಮರ್ಶೆಗಳನ್ನು ಮಾಡಿ ಸಮಾಜವನ್ನು ಎಚ್ಚರಿಸಬಹುದು. ಸುದ್ದಿಯೊಂದಿಗೆ ತಮ್ಮ ಅಭಿರುಚಿಗಳನ್ನು ಜನರಿಗೆ ಪರಿಚಯಿಸಿ ಸೆಳೆಯುವ ಕೆಲಸವನ್ನೂ ಯೂಟ್ಯೂಬ್ ಮೂಲಕ ಮಾಡಬಹುದಾಗಿದೆ. ಇದರಿಂದ ಆರ್ಥಿಕವಾಗಿಯೂ ಮುಂದು ಬರಲು ಸದಾವಕಾಶಗಳಿದ್ದು, ಸಮರ್ಪಕವಾಗಿ ಇದನ್ನು ಬಳಸಿಕೊಂಡರೆ ಸಾಧನೆ ಮಾಡಲು ಸಾಧ್ಯವಿದೆ. ‘ಕಂಟೆಂಟ್ ಕ್ರಿಯೇರ‍್ಸ್’ ಈ ಕಾಲಘಟ್ಟಕ್ಕೆ ಬೇಕಾಗಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬಹುಮಾನ ವಿತರಣೆ : ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗ್ರೀಷ್ಮ ಪ್ರಥಮ, ರುಕ್ಮಿಣಿ ದ್ವಿತೀಯ, ದೀಪಿಕಾ ತೃತೀಯ ಸ್ಥಾನ ಪಡೆದುಕೊಂಡರು. ಇದರೊಂದಿಗೆ ಉತ್ತಮ ವರದಿ ಪ್ರಶಸ್ತಿಯನ್ನು ಪತ್ರಿಕೋದ್ಯಮ ವಿದ್ಯಾರ್ಥಿನಿ ಗ್ರೀಷ್ಮಾ ತನ್ನದಾಗಿಸಿಕೊಂಡಳು. ಈ ಸಂದರ್ಭ ಉಪನ್ಯಾಸಕರುಗಳಾದ ರವಿಶಂಕರ್, ಭೈರವಿ, ಪ್ರದೀಪ್, ಡೀನಾ, ಹಳೇ ವಿದ್ಯಾರ್ಥಿ ಸಂಘದ ನಿರ್ದೇಶಕರುಗಳಾದ ಮಾಗುಲು ಲೋಹಿತ್, ಖುರ್ಷಿದ ಭಾನು ಸೇರಿದಂತೆ ಇನ್ನಿತರರು ಹಾಜರಿದ್ದರು. ಹೆಚ್.ಜೆ ರಾಕೇಶ್, ಆನಂದ್ ಕೊಡಗು ನಿರೂಪಿಸಿ, ಹಳೇ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಚಂದನ್ ನಂದರಬೆಟ್ಟು ಸ್ವಾಗತಿಸಿ, ಪತ್ರಿಕೋದ್ಯಮ ವಿಭಾಗದ ಉಪನ್ಯಾಸಕಿ ಮೋನಿಕಾ ವಂದಿಸಿದರು.