ವಿರಾಜಪೇಟೆ ನ.26 NEWS DESK : ರಾಷ್ಟ್ರದ ಮೂಲಭೂತ ಕಾನೂನು ಆದ ಸಂವಿಧಾನವನ್ನು ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಸಂತ ಅನ್ನಮ್ಮ ಪದವಿ ಕಾಲೇಜಿನ ವ್ಯವಸ್ಥಾಪಕರು ಹಾಗೂ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ. ಮದಲೈ ಮುತ್ತು ಅಭಿಪ್ರಾಯಪಟ್ಟರು. ಪದವಿ ಕಾಲೇಜಿನ ಐಕ್ಯೂಎಸಿ ಘಟಕ, ಎನ್. ಎಸ್. ಎಸ್ ಘಟಕ ಹಾಗೂ ಸಂತ ಅನ್ನಮ್ಮ ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಕಾಲೇಜಿನಲ್ಲಿ ನಡೆದ ಸಂವಿಧಾನ ದಿನಾಚರಣೆಯ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು. ನಮ್ಮ ಸಂವಿಧಾನವು ನಮಗೆ ಅನೇಕ ಹಕ್ಕನ್ನು ನೀಡಿದ್ದು ಕರ್ತವ್ಯ ಪ್ರತಿಪಾದನೆಯು ಅತೀ ಮುಖ್ಯವಾಗಿದೆ. ಸ್ವತಂತ್ರ, ಸಮಾನತೆ, ಬ್ರಾತೃತ್ವ, ನ್ಯಾಯ ನಮ್ಮ ಸಂವಿಧಾನದ ಮೂಲ ಆಶಯಗಳಾಗಿದ್ದು ಸಂವಿಧಾನಕ್ಕೆ ಬದ್ಧರಾಗಿ ರಾಷ್ಟ್ರೀಯ ಐಕ್ಯತೆಯನ್ನು ಎತ್ತಿ ಹಿಡಿಯಿರಿ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಸಂವಿಧಾನದ ಪೂರ್ವ ಪೀಠಿಕೆಯ ಪ್ರತಿಜ್ಞಾವಿಧಿಯನ್ನು ಭೋದಿಸಿದರು. ಪದವಿ ಕಾಲೇಜಿನ ಎನ್.ಎಸ್. ಎಸ್. ಅಧಿಕಾರಿಗಳಾದ ಬಿ.ಎನ್. ಶಾಂತಿಭೂಷಣ್ ಪ್ರಾಸ್ತಾವಿಕವಾಗಿ ದಿನದ ಮಹತ್ವದ ಬಗ್ಗೆ ಮಾತನಾಡಿದರು. ಈ ಸಂದರ್ಭದಲ್ಲಿ ಪದವಿ ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ ಬಿ.ಡಿ., ಉಪನ್ಯಾಸಕರು, ಸಿಬ್ಬಂದಿಗಳು, ಪದವಿ, ಪದವಿಪೂರ್ವ ಹಾಗೂ ಸ್ನಾತಕೋತ್ತರ ಎಂ. ಕಾಂ. ವಿಭಾಗದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.