ವಿರಾಜಪೇಟೆ ನ.27 NEWS DESK : ಶ್ರೇಷ್ಠವಾದ ರಾಷ್ಟ್ರ ಗ್ರಂಥವಾಗಿರುವ ಭಾರತದ ಸಂವಿಧಾನವೇ ಜನರ ಹಕ್ಕುಗಳಿಗೆ ಮೂಲವಾಗಿದೆ. ದೇಶ ಸ್ವಾತಂತ್ರ್ಯಗೊಂಡು ಮೂರು ವರ್ಷಗಳ ನಂತರ ಗಣರಾಜ್ಯವಾಗಿ ಗುರುತಿಸಿಕೊಂಡು ಪ್ರಪಂಚದ ನಕ್ಷೆಯಲ್ಲಿ ಭಾರತ ತನ್ನದೇ ಆದ ಅಸ್ತಿತ್ವವನ್ನು ಕಾಪಾಡಿಕೊಳ್ಳುವಲ್ಲಿ ದೇಶದ ಸಂವಿಧಾನ ಭದ್ರಬುನಾದಿಯನ್ನು ಕಲ್ಪಿಸಿದೆ ಎಂದು ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ಅಧ್ಯಕ್ಷರಾದ ದುದ್ದಿಯಂಡ ಹೆಚ್. ಸೂಫಿ ಹಾಜಿ ಹೇಳಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ಕೊಡವ ಮುಸ್ಲಿಂ ಶಿಕ್ಷಣ ನಿಧಿಯ ಸಹಯೋಗದಲ್ಲಿ ವಿರಾಜಪೇಟೆಯ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಸಂವಿಧಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ದೇಶದ ಸಂವಿಧಾನಕ್ಕೆ ವಿಶೇಷವಾದ ಘನತೆಯಿದೆ. ನಮ್ಮ ಸಂವಿಧಾನ ವಿಶ್ವದಲ್ಲೆ ಅತ್ಯಧಿಕ ಹಕ್ಕುಗಳನ್ನು ಆಧರಿಸಿ ರಚನೆಯಾಗಿರುವ ಅತಿ ದೀರ್ಘವಾದ ಲಿಖಿತ ಸಂವಿಧಾನ ಎಂಬ ಗರಿಮೆಗೆ ಪಾತ್ರವಾಗಿದೆ ಎಂದು ಅವರು ಸ್ಮರಿಸಿದರು. ಭಾರತದ ಸಂವಿಧಾನವು ದೇಶದ ಪ್ರತಿಯೊಬ್ಬ ಪ್ರಜೆಗೂ ಸಮಾನತೆ, ನ್ಯಾಯ ಮತ್ತು ಸ್ವಾತಂತ್ರ್ಯ ಒದಗಿಸಿದ ವಿಶ್ವದ ಶ್ರೇಷ್ಠ ಸಂವಿಧಾನಗಳಲ್ಲಿ ಒಂದಾಗಿದ್ದು, ಜಗತ್ತಿನ ಎಲ್ಲಾ ಧರ್ಮಗ್ರಂಥಗಳ ಶ್ರೇಷ್ಠ ಚಿಂತನೆಯ ಸಾರವನ್ನು ಭಾರತದ ಸಂವಿಧಾನ ಹೊಂದಿದ್ದು, ವಿವಿಧ ಸಂಸ್ಕೃತಿ, ಭಾಷೆಗಳನ್ನು ಒಳಗೊಂಡ ಭಾರತೀಯರನ್ನು ಒಗ್ಗೂಡಿಸುವ ಜತೆಗೆ ಭಾರತೀಯರಲ್ಲಿ ಮಾನವೀಯ ಗುಣಗಳನ್ನು ಮೂಡಿಸುವ ಹೊಣೆಗಾರಿಕೆಯನ್ನು ಸಂವಿಧಾನ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಅಭಿಪ್ರಾಯಪಟ್ಟ ಸೂಫಿ ಹಾಜಿ, ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಗು ದೇಶದ ಸಂವಿಧಾನವೇ ಅಡಿಪಾಯವಾಗಿದೆ. ನಮ್ಮ ದೇಶವನ್ನು ಕೊಂಡೊಯ್ಯಬೇಕಾದ ಮಾರ್ಗದ ದಿಕ್ಸೂಚಿಯಂತಿರುವ ಸಂವಿಧಾನದ ಪ್ರಸ್ತಾವನೆಯಲ್ಲಿ ಹೇಳಿರುವಂತೆ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಹಾಗೂ ಭ್ರಾತೃತ್ವ ಭಾವಗಳು ನಿಜವಾದ ಪ್ರಜಾಸತ್ತಾತ್ಮಕ ವ್ಯವಸ್ಥೆಯ ಅವಿಭಾಜ್ಯ ಗುಣ ಲಕ್ಷಣಗಳಾಗಿವೆ. ವ್ಯಕ್ತಿಗೆ ಘನತೆಯಿಂದ ಬಾಳುವ ಅವಕಾಶವನ್ನು ಕಲ್ಪಿಸುವುದು ಹಾಗೂ ರಾಷ್ಟ್ರದ ಐಕ್ಯತೆಯನ್ನು ಕಾಪಾಡುವುದೇ ಸಂವಿಧಾನದ ಅಂತಿಮ ಉದ್ದೇಶವಾಗಿರುವುದನ್ನು ಪ್ರತಿಯೊಬ್ಬರು ಅರಿತುಕೊಳ್ಳಬೇಕಿದೆ ಎಂದು ಕರೆ ನೀಡಿದರು. ಕಾರ್ಯಕ್ರಮದ ಆರಂಭದಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಲಾಯಿತು. ನಂತರ ಇದುವರೆಗೂ ಒಟ್ಟು 106 ಬಾರಿ ತಿದ್ದುಪಡಿಗೊಂಡ ಸಂವಿಧಾನದ ವಿಧಿ, ಭಾಗ ಮತ್ತು ಅನುಸೂಚಿಗಳ ಕುರಿತು ಸಂವಾದ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಹಿರಿಯ ನಿರ್ದೇಶಕರಾದ ಪುದಿಯತ್ತಂಡ ಎಚ್. ಶಂಸುದ್ದೀನ್, ಪದಾಧಿಕಾರಿಗಳಾದ ಪೊಯಕೆರ ಎಸ್. ರಫೀಕ್, ಮಂಡೇಂಡ ಎ. ಮೊಯ್ದು, ಪುದಿಯಾಣೆರ ಎಂ. ಹನೀಫ್, ಕೆಂಗೋಟಂಡ ಎಸ್. ಸೂಫಿ, ಆಲೀರ ಹೆಚ್. ಅಬ್ದುಲ್ ಲತೀಫ್, ಕೆ.ಎಂ.ಎ. ಮಾಜಿ ನಿರ್ದೇಶಕರಾದ ಕುರಿಕಡೆ ಅಬ್ದುಲ್ ಸಮ್ಮದ್ ಮೊದಲಾದವರು ಭಾಗವಹಿಸಿದ್ದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಈತಲತಂಡ ರಫೀಕ್ ತೂಚಮಕೇರಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರ್ವಹಿಸಿದರು. ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ವಂದಿಸಿದರು.