ಮಡಿಕೇರಿ ನ.27 NEWS DESK : ಸೋಮವಾರಪೇಟೆ ಮತ್ತು ಕುಶಾಲನಗರ ತಾಲೂಕಿನ ರೈತರು 2024ರ ಮುಂಗಾರು ಹಂಗಾಮಿನಲ್ಲಿ ಬೆಳೆದಂತಹ ಬೆಳೆಗಳ ವಿವರಗಳನ್ನು ಫೋಟೋ ಸಹಿತ ಖಾಸಗಿ ನಿವಾಸಿಗಳ ಮುಖಾಂತರ ಬೆಳೆ ಸಮೀಕ್ಷೆ ಕಾರ್ಯವನ್ನು ಕೈಗೊಳ್ಳಲಾಗಿದೆ.
ರೈತರು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಬೆಳೆದರ್ಶಕ್ 2024 ಅನ್ನು ಡೌನ್ಲೋಡ್ ಮಾಡಿಕೊಂಡು ತಮ್ಮ ವಿವಿಧ ಪಹಣಿಯಲ್ಲಿ ಯಾವ ಬೆಳೆಯನ್ನು ಬೆಳೆಯಲಾಗಿದೆ ಹಾಗೂ ಯಾವ ಬೆಳೆ ಹೆಸರು ನಮೂದಾಗಿದೆ ಎಂದು ತಿಳಿದುಕೊಳ್ಳಬಹುದು. ಒಂದು ವೇಳೆ ತಾವು ಬೆಳೆದಿರುವ ಬೆಳೆಗೂ ಬೆಳೆ ಸಮೀಕ್ಷೆಯಲ್ಲಿ ನಮೂದಾಗಿರುವ ಬೆಳೆಗೂ ವ್ಯತ್ಯಾಸವಿದ್ದಲ್ಲಿ ಅಥವಾ ಯಾವುದೇ ಬೆಳೆ ಸಮೀಕ್ಷೆಯನ್ನು ಮಾಡದೆ ಇದ್ದಲ್ಲಿ ತಾವುಗಳು ಬೆಳೆ ಸಮೀಕ್ಷೆ ಆಪ್ ಮುಖಾಂತರ ಆಕ್ಷೇಪಣೆಯನ್ನು ಸಲ್ಲಿಸಬಹುದಾಗಿದೆ. ಈ ಆಕ್ಷೇಪಣೆಯನ್ನು ನವೆಂಬರ್, 30 ರೊಳಗೆ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದೇ ಆಕ್ಷೇಪಣೆ ಮಾಡದಿದ್ದಲ್ಲಿ ಪ್ರಸ್ತುತ ಸಮೀಕ್ಷೆ ಆಗಿರುವ ಬೆಳೆಯೇ ನಿಮ್ಮ ಪಹಣಿಯಲ್ಲಿ ನಮೂದಾಗುತ್ತದೆ ಅಥವಾ ಯಾವುದೇ ಬೆಳೆ ಸಮೀಕ್ಷೆ ಆಗದೆ ಇದ್ದಲ್ಲಿ ನಿಮ್ಮ ಪಹಣಿಯಲ್ಲಿ ಯಾವುದೇ ಬೆಳೆಯ ವಿವರ ನಮೂದಾಗುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಬೆಳೆ ವಿಮಾ ಯೋಜನೆಯಲ್ಲಿ ಪರಿಹಾರ ಬಂದಲ್ಲಿ ತಮಗೆ ತೊಂದರೆಯಾಗುತ್ತದೆ ಅಥವಾ ಯಾವುದೇ ಪ್ರಕೃತಿ ವಿಕೋಪದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ಸರ್ಕಾರದಿಂದ ಯಾವುದೇ ಪರಿಹಾರ ಧನ ಲಭ್ಯವಾಗುವುದಿಲ್ಲ ಎಂಬ ಅಂಶವನ್ನು ಎಲ್ಲಾ ರೈತ ಬಾಂಧವರ ಗಮನಕ್ಕೆ ತರಲಾಗಿದೆ. ಹೆಚ್ಚಿನ ಮಾಹಿತಿ ಬೇಕಾದಲ್ಲಿ ಹೋಬಳಿ ಮಟ್ಟದ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬಹುದು ಎಂದು ಸೋಮವಾರಪೇಟೆ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರಾದ ಕೆ.ಪಿ.ವೀರಣ್ಣ ತಿಳಿಸಿದ್ದಾರೆ.