ಸೋಮವಾರಪೇಟೆ ನ.30 NEWS DESK : ಸಿ ಆ್ಯಂಡ್ ಡಿ(ವ್ಯವಸಾಯಕ್ಕೆ ಯೋಗ್ಯವಲ್ಲದ ಭೂಮಿ)ಮತ್ತು ಸರ್ಕಾರಿ ಒತ್ತುವರಿ ಭೂಮಿಗೆ ರೈತರಿಗೆ ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಡಿ.20 ರಂದು ಮಡಿಕೇರಿಯಲ್ಲಿ ರೈತರ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ರೈತ ಹೋರಾಟ ಸಮಿತಿ ಅಧ್ಯಕ್ಷ ಸುರೇಶ್ ಚಕ್ರವರ್ತಿ ಹೇಳಿದರು. ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಹಾರಂಗಿ ಅಣೆಕಟ್ಟು ಮುಳುಗಡೆಯಿಂದ 3700 ಎಕರೆ, ಹೇಮಾವತಿ ಅಣೆಕಟ್ಟೆಯಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ 11ಸಾವಿರ ಎಕರೆ ಭೂಮಿಯನ್ನು ಕಳೆದುಕೊಂಡಿದ್ದೇವೆ. ಈಗ ಕೃಷಿ ಮಾಡಿಕೊಂಡಿರುವ 25 ಸಾವಿರ ಎಕರೆ ಭೂಮಿಯನ್ನು ಸಿ ಆ್ಯಂಡ್ ಡಿ ನೆಪದಲ್ಲಿ ಅರಣ್ಯ ಇಲಾಖೆಗೆ ನೀಡಲು ತಯಾರಿ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಕೊಡಗಿನಲ್ಲಿ ಕೃಷಿ ಮಾಡುತ್ತಿರುವ ರೈತರ ಭೂಮಿ ಅಭಯಾರಣ್ಯವಾದರೆ ನೂರಾರು ವರ್ಷಗಳಿಂದ ಬದುಕುತ್ತಿರುವ ರೈತರು ಬೀದಿ ಪಾಲಾಗಬೇಕಾಗುತ್ತದೆ ಎಂದು ನೋವು ತೋಡಿಕೊಂಡರು. ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಹೋರಾಟವಲ್ಲ. ಆದರೆ ರೈತರಿಗೆ ಅನ್ಯಾಯ ಮಾಡುವ ಯಾವುದೇ ಸರ್ಕಾರಗಳು ಉಳಿಯಲು ಸಾಧ್ಯವಿಲ್ಲ. ಕೂಡಲೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಈಗಿನ ಆದೇಶವನ್ನು ಮರುಪರಿಶೀಲನೆ ಮಾಡಬೇಕು ಎಂದು ಆಗ್ರಹಿಸಿದರು. ಸಮಿತಿ ಸಂಚಾಲಕರಾದ ಬಿ.ಜೆ.ದೀಪಕ್ ಮಾತನಾಡಿ, ಶಾಂತಳ್ಳಿ ಅತೀಹೆಚ್ಚು ರೈತರು ಸಿ ಆ್ಯಂಡ್ ಡಿ ಭೂಮಿಯಲ್ಲಿ ಕಳೆದ 50 ವರ್ಷಗಳಿಂದ ಕೃಷಿ ಮಾಡುತ್ತಿದ್ದಾರೆ. ಭತ್ತ, ಕಾಫಿ, ಕಾಳುಮೆಣಸು, ಏಲಕ್ಕಿ ಬೆಳೆಯುತ್ತಿದ್ದಾರೆ. 1987ರಲ್ಲಿ ಸಿ ಆ್ಯಂಡ್ ಡಿ ಭೂಮಿ ಸರ್ವೆಗೆ ಸರ್ಕಾರ ಆದೇಶ ನೀಡಿತ್ತು. ಅಂದಿನ ಕಂದಾಯ ಅಧಿಕಾರಿಗಳು ಸರ್ವೆ ಮಾಡದೆ, ಶಾಂತಳ್ಳಿ ಹೋಬಳಿಯ ಗ್ರಾಮೀಣ ಭಾಗದ ಜಾಗವನ್ನು ಸಿ ಆ್ಯಂಡ್ ಡಿ ಎಂದು ವರದಿ ನೀಡಿದರು. ಈ ಸರ್ವೆ ಅವೈಜ್ಞಾನಿಕ ಎಂದು ಸರ್ಕಾರ ಮತ್ತೊಮ್ಮೆ ಸರ್ವೆಗೆ ಸರ್ಕಾರ ಆದೇಶ ನೀಡಿತು. ಆದರೂ ಕಂದಾಯ ಇಲಾಖೆ, ಅರಣ್ಯ ಇಲಾಖೆ ಜಂಟಿ ಸರ್ವೆ ಮಾಡಲಿಲ್ಲ. ನಂತರ ತೀರ್ಮಾನಗಳು ಅನುಷ್ಠಾನ ಬರಲಿಲ್ಲ. ನಂತರ ಹಕ್ಕುಪತ್ರಕ್ಕಾಗಿ ರೈತರು ಫಾರಂ 50, 52, 53, 57ನಲ್ಲಿ ಅರ್ಜಿ ಸಲ್ಲಿಸಿದರೂ ಸಿ ಆ್ಯಂಡ್ ಡಿ ನೆಪದಲ್ಲಿ ಹಕ್ಕುಪತ್ರ ಕೊಡಲಿಲ್ಲ. ಈಗ ಸುಪ್ರಿಂ ಕೋರ್ಟ್ ಆದೇಶದಂತೆ 25 ಸಾವಿರ ಎಕರೆ ಕೃಷಿ ಭೂಮಿಯನ್ನು ಸಿ ಆ್ಯಂಡ್ ಡಿ ನೆಪದಲ್ಲಿ ಅರಣ್ಯ ಇಲಾಖೆಗೆ ನೀಡಲು ಸರ್ವೆಗೆ ನೋಟೀಸ್ಗಳು ಜಾರಿಯಾಗುತ್ತಿವೆ. ಈಗ ರೈತರ ಬೀದಿಪಾಲಾಗುವ ಆತಂಕ ಎದುರಾಗಿದೆ. ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಿ ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಜಂಟಿ ಸರ್ವೆಗೆ ಆದೇಶ ನೀಡಿ, ಸಿ ಆ್ಯಂಡ್ ಡಿ, ಪೈಸಾರಿ ಒತ್ತುವರಿ ಹಾಗೂ ಅರಣ್ಯ ಜಾಗವನ್ನು ಗುರುತಿಸಿದರೆ ಎಲ್ಲ ಸಮಸ್ಯೆ ಬಗೆಹರಿಯಲಿದೆ ಎಂದರು. ಮಲೆನಾಡು ಜಿಲ್ಲೆಗಳ ರೈತರು ಹಾಗೂ ರೈತ ಪರ ಸಂಘಟನೆ ಸದಸ್ಯರು ನಮ್ಮೊಂದಿಗೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದು, ಕೊಡಗು ಹಾಗೂ ಮಲೆನಾಡು ಜಿಲ್ಲೆಗಳ ಶಾಸಕರುಗಳು, ಅರಣ್ಯ ಮತ್ತು ಕಂದಾಯ ಸಚಿವರುಗಳು, ಲೋಕಸಭಾ ಸದಸ್ಯರುಗಳು ಅಂದು ಮಡಿಕೇರಿಗೆ ಆಗಮಿಸಿ ರೈತರ ಸಮಸ್ಯೆಯನ್ನು ಆಲಿಸಿ ಪರಿಹಾರ ಮಾಡಿಕೊಡಬೇಕು ಎಂದು ಎಂದು ಸಂಚಾಲಕ ಲೋಕೇಶ್ ಕುಮಾರ್ ಹೇಳಿದರು. ರೈತ ಪರ ಹೋರಾಟದಲ್ಲಿ ರಾಜ್ಯ ಎಲ್ಲಾ ಜಿಲ್ಲೆಗಳ ರೈತ ಸಂಘದ ಪದಾಧಿಕಾರಿಗಳು ಭಾಗವಹಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ. ರೈತ ಹೋರಾಟದ ನೇತೃತ್ವವನ್ನು ಜಿಲ್ಲಾಧ್ಯಕ್ಷರಾದ ಕಾಡ್ಯಮಾಡ ಮನು ಸೋಮಯ್ಯ ವಹಿಸಲಿದ್ದಾರೆ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಎಂ.ದಿನೇಶ್ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿ ಚಾಲಕರಾದ ಬಗ್ಗನ ಅನಿಲ್ ಕುಮಾರ್ ಇದ್ದರು.











