ಮಡಿಕೇರಿ ಡಿ.3 NEWS DESK : ಮಹಿಳೆಯರು ಆತ್ಮಸ್ಥೈರ್ಯ ¨ಬೆಳೆಸಿಕೊಳ್ಳುವ ಮೂಲಕ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರುತಿಸಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜೆಂಡರ್ ಸ್ಪೆಷಲಿಸ್ಟ್ ಎಸ್.ಆರ್.ಕೇಶಿನಿ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಹಿಳೋದಯ ಮಹಿಳಾ ಒಕ್ಕೂಟ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಒಡಿಪಿ ಸಂಸ್ಥೆಯ ಮಹಿಳೆಯರಿಗೆ ಮಾಲ್ದಾರೆ ಕೃಷಿ ಪತ್ತಿನ ಸಹಕಾರ ಸಂಘದ ಸಮುದಾಯ ಭವನದಲ್ಲಿ ಆಯೋಜಿತ ‘ಲಿಂಗಾಧಾರಿತ ದೌರ್ಜನ್ಯ ನಿವಾರಿಸುವ ಅರಿವು ಶಿಬಿರ ಹಾಗೂ ಏಡ್ಸ್ ದಿನಾಚರಣೆ’ಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ಮಹಿಳೆಯರು ನೀಡುವುದರೊಂದಿಗೆ, ಸಾಮಾಜಿಕ ಸಮಸ್ಯೆಯನ್ನು ಅರಿತುಕೊಂಡು ತಮ್ಮ ಸಮಸ್ಯೆಯನ್ನು ತಾವೇ ಗುರುತಿಸಿಕೊಂಡು ಸಮಸ್ಯೆಯನ್ನು ಬಗೆಹರಿಸುವಷ್ಟರ ಮಟ್ಟಿಗೆ ಮಹಿಳೆ ಸಬಲೀಕರಣ ಹೊಂದಬೇಕು. ಕುಟುಂಬದಲ್ಲಿ ದೌರ್ಜನ್ಯಕ್ಕೆ ಒಳಗಾದ ಸಂದರ್ಭದಲ್ಲಿ 181 ಮಹಿಳಾ ಸಹಾಯವಾಣಿಗೆ ದೂರನ್ನು ಸಲ್ಲಿಸಬಹುದು ಹಾಗೂ ಕಾನೂನು ಸೇವಾ ಪ್ರಾಧಿಕಾರದಲ್ಲಿ ಮಹಿಳೆಯರು ದೂರನ್ನು ದಾಖಲಿಸಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದೆಂದರು. ಒಡಿಪಿ ಸಂಸ್ಥೆಯ ಜಿಲ್ಲಾ ಸಂಯೋಜಕರಾದ ಜಾಯ್ಸ್ ಮನೇಜಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಒಡಿಪಿ ಸಂಘದ ಮುಖಾಂತರ ಮಹಿಳೆಯರು ಸಬಲೀಕರಣ ಹೊಂದುವುದರೊಂದಿಗೆ ಲಿಂಗ ಸಮಾನತೆ ಸಾಧಿಸಬೇಕೆಂದು ಕರೆ ನೀಡಿದರು. ಆರೋಗ್ಯ ಇಲಾಖೆಯ ಸಮುದಾಯ ಸುರಕ್ಷ್ಷಾಧಿಕಾರಿ ಜ್ಯೋತಿ, ಎಚ್ಐವಿ-ಏಡ್ಸ್ ಕುರಿತು ಜನರು ಜಾಗೃತರಾಗಬೇಕು ಹಾಗೂ ಈ ಸೋಂಕಿಗೆ ತುತ್ತಾಗದಂತೆ ಎಚ್ಚರ ವಹಿಸಬೇಕೆಂದು ತಿಳಿಸಿ, ಪ್ರಮಾಣ ವಚನ ಬೋಧಿಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ, ಮಹಿಳಾ ಸಬಲೀಕಣ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಸಂಯೋಜಕಕಿ ಮಮತ ಬಿ.ಎಸ್. ಮಾತನಾಡಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ದೊರೆಯುವ ಯೋಜನೆಗಳಾದ ಮಾತೃವಂದನಾ, ಸಖಿ ಒನ್ ಸ್ಟಾಪ್ ಸೆಂಟರ್, ಮಹಿಳಾ ಸಾಂತ್ವನ, ಮಹಿಳಾ ಸಹಾಯವಾಣಿ, ಮಕ್ಕಳ ಸಹಾಯವಾಣಿ, ಭಾಗ್ಯಲಕ್ಷಿ, ಬೇಟಿ ಬಚಾವೋ ಬೇಟಿ ಪಡವೋ ಯೋಜನೆ ಬಗ್ಗೆ ಸಂಘದ ಮಹಿಳೆಯರಿಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮಾಲ್ದಾರೆ ಗ್ರಾಪಂ ಉಪಾಧ್ಯಾಕ್ಷರು, ಆಶಾ ಕಾರ್ಯಕರ್ತರು, ಸಂಘದ ಮಹಿಳೆಯರು, ಒಡಿಪಿ ಸಂಸ್ಥೆಯ ಸಿಬ್ಬಂದಿಗಳು ಹಾಜರಿದ್ದರು.











