ಮಡಿಕೇರಿ NEWS DESK ಡಿ.10 : ಪೊಲೀಸ್ ಮತ್ತು ಸೈನ್ಯದ ಸಮವಸ್ತçದಲ್ಲಿ ಭಿನ್ನತೆ ಇದ್ದರೂ ಕರ್ತವ್ಯವೇ ಪ್ರಧಾನವಾಗಿದೆ. ಸಮವಸ್ತ್ರ ಧರಿಸಿದಾತ ಕರ್ತವ್ಯ ನಿಷ್ಠೆಯಿಂದ ಜನಸೇವೆಯ ತನ್ನ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಲೆಫ್ಟಿನೆಂಟ್ ಜನರಲ್ ಡಾ.ಪ್ರೊ.ಬಿ.ಎನ್.ಬಿ.ಎಂ.ಪ್ರಸಾದ್ ಎಸ್‌ಎಂ., ವಿಎಸ್‌ಎಂ ಕರೆ ನೀಡಿದ್ದಾರೆ.
ನಗರದ ಪೊಲೀಸ್ ಸಮುದಾಯ ಭವನ ಮೈತ್ರಿಯಲ್ಲಿ ನಡೆದ ಕೊಡಗು ಜಿಲ್ಲಾ ನಿವೃತ್ತ ಪೊಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ‘ಬೆಳ್ಳಿ ಹಬ್ಬ’ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಜನರ ಸೇವೆಯನ್ನು ಸಮವಸ್ತ್ರ ತೊಟ್ಟು ಇಲ್ಲವೆ ಸಮವಸ್ತ್ರವಿಲ್ಲದೆಯೂ ಮಾಡಬಹುದು. ಹೀಗಿದ್ದೂ ಸಮವಸ್ತç ಧರಿಸಿದಾತ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನಿರ್ವಹಿಸುತ್ತಲೆ ಅದಕ್ಕೆ ತಕ್ಕ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳುವುದು ಅತ್ಯವಶ್ಯ. ತಮ್ಮ ಜವಾಬ್ದಾರಿಗಳ ನಿರ್ವಹಣೆಯಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವಂತೆ ಕಿವಿಮಾತುಗಳನ್ನಾಡಿದ ಅವರು, ಜನಸೇವೆಯ ಮೂಲಕ ರಾಷ್ಟç ಸೇವೆಯಲ್ಲಿ ತೊಡಗಿಸಿಕೊಂಡಾತನ ಮೊದಲ ಆದ್ಯತೆ ದೇಶಸೇವೆಯೇ ಆಗಿರುತ್ತದೆ ಎಂದರು. ಪೊಲೀಸ್, ಸೈನ್ಯದ ಯಾವುದೇ ಹಂತಗಳಲ್ಲಿ ಕೆಲಸ ಮಾಡುವವರು ತಮ್ಮ ಗೌರವವನ್ನು ಕಾಪಾಡಿಕೊಳ್ಳಬೇಕೆಂದು ತಿಳಿಸಿದ ಅವರು, ಫೀ.ಮಾ.ಮಾಣಿಕ್ ಷಾ ಅವರು ತಾವೇ ಕಾರನ್ನು ಚಲಾಯಿಸಿಕೊಂಡು ಹೋಗುವಾಗ, ಅವರನ್ನು ತಡೆದ ಸೈನಿಕನೊಬ್ಬಾತ ಅರಿಯದೆ ಅವರ ಪರಿಚಯ ಪತ್ರವನ್ನು ಕೇಳುತ್ತಾನೆ. ಈ ಹಂತದಲ್ಲಿ ಉನ್ನತ ಸ್ಥಾನದಲ್ಲಿದ್ದ ಮಾಣಿಕ್ ಷಾ ಅವರು ಆ ಸೈನಿಕನ ಕರ್ತವ್ಯ ಪ್ರಜ್ಞೆಯನ್ನು ಬಹುವಾಗಿ ಮೆಚ್ಚಿಕೊಳ್ಳುತ್ತಾರೆ. ಇಂತಹ ಕರ್ತವ್ಯನಿಷ್ಠೆ ಸಮವಸ್ತ್ರ ಧರಿಸಿದ ಪ್ರತಿಯೊಬ್ಬರದ್ದು ಆಗಿರಬೇಕು ಎಂದು ತಿಳಿಸಿದರು. ನಿವೃತ್ತರಾದವರು ಮೊದಲಾಗಿ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಈ ನಿಟ್ಟಿನಲ್ಲಿ ಹಿತಮಿತವಾದ ಆಹಾರ, ಒಳ್ಳೆಯ ಚಿಂತನೆಗಳನ್ನು ಮಾಡಬೇಕೆಂದು ಕಿವಿ ಮಾತು ಹೇಳಿದರು.
::: ಗಾಂಭೀರ್ಯ ಬಿಡಬೇಡಿ :::
ನಿವೃತ್ತ ಎಡಿಜಿಪಿ ಭಾಸ್ಕರ ರಾವ್ ಮಾತನಾಡಿ, ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು ಎಂದಿಗೂ ತಮ್ಮ ಗತ್ತು ಗಾಂಭೀರ್ಯವನ್ನು ಬಿಡಕೂಡದೆಂದು ತಿಳಿಸಿದರು. ಸುಮಾರು ಇಪ್ಪತ್ತೊಂದು ವರ್ಷಗಳ ಹಿಂದೆ ತಾವು ಕೊಡಗಿನಲ್ಲಿ ಎಸ್‌ಪಿಯಾಗಿ ಕಾರ್ಯನಿರ್ವಹಿಸಿದ ದಿನಗಳನ್ನು ಮೆಲುಕು ಹಾಕುತ್ತಾ, 1999ರಲ್ಲಿ ಕಾರ್ಗಿಲ್ ಯುದ್ಧದ ಸಂದರ್ಭ ಹುತಾತ್ಮರಾದ ಸುಮಾರು 18 ವೀರ ಯೋಧರ ಪಾರ್ಥಿವ ಶರೀರಗಳನ್ನು ಕೊಡಗಿಗೆ ತಂದ ಸಂದರ್ಭ ಗೌರವ ಸಲ್ಲಿಸುವ ಸುಯೋಗ ತಮಗೆ ದೊರಕಿತ್ತೆಂದು ಸ್ಮರಿಸಿಕೊಂಡರು. ತಾವು ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಸಂದರ್ಭ ಜಿಲ್ಲೆಯ ದಾನಿಗಳ ಸಹಕಾರದಿಂದ ಪೊಲೀಸ್ ಎಲ್ಲಾ ಅಧಿಕಾರಿ ಸಿಬ್ಬಂದಿಗಳ ಸಹಕಾರದೊಂದಿಗೆ 19.50ಲಕ್ಷ ವೆಚ್ಚದಲ್ಲಿ ಪೊಲೀಸರಿಗಾಗಿ ‘ಮೈತ್ರ‍್ರಿ’ ಭವನವನ್ನು ನಿರ್ಮಿಸಲಾಯಿತು. ಈ ಕಟ್ಟಡದಲ್ಲಿ ಪೊಲೀಸರ ಪರಿಶ್ರಮದ ಬೆವರು ಅಡಗಿದೆಯೆಂದು ನುಡಿದರು. ಪೊಲೀಸ್ ಸೇವೆ ಎನ್ನುವುದು ಅತ್ಯದ್ಭುತವಾದ ಕೆಲಸ. ಇಂತಹ ಪವಿತ್ರ ಸೇವೆಯ ಅಧಿಕಾರ ದೊರಕಿದ ಸಂದರ್ಭ ಜನ ಸಾಮಾನ್ಯರಿಗೆ ತಮ್ಮಿಂದ ಸಾಧ್ಯವಾದಷ್ಟು ನೆರವನ್ನು ನೀಡಿ. ಅಧಿಕಾರವೆನ್ನುವುದು ಜನರ ಅಭ್ಯುದಯಕ್ಕೆ ಮೀಸಲಾಗಿರಲೆಂದು ಹಾರೈಸಿದರು. ನಿವೃತ್ತ ಜಾಯಿಂಟ್ ಕಂಟ್ರೋಲರ್ ಫೈನಾನ್ಸ್ ಬಿ.ಜಿ.ಮಾದಪ್ಪ ಮಾತನಾಡಿ, ನಿವೃತ್ತಿಯ ಬಳಿಕ ಯಾರೂ ಮೌನವಾಗಿ ಇರಬೇಡಿ. ಮನಸ್ಸಿಗೆ ಕೆಲಸ ಕೊಡಿ, ಬದುಕಿನುದ್ದಕ್ಕು ಏನಾದರೊಂದು ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಬದುಕಿನಲ್ಲಿ ಸಾಫಲ್ಯತೆಯನ್ನು ಕಾಣುವಂತೆ ಕರೆ ನೀಡಿದರು. ::: ಸ್ಮರಣ ಸಂಚಿಕೆ ಅನಾವರಣ ::: ಬೆಳ್ಳಿ ಮಹೋತ್ಸವದ ಅಂಗವಾಗಿ ಹೊರ ತರಲಾದ ‘ಸ್ಮರಣ ಸಂಚಿಕೆ’ಯನ್ನು ಜಿಲ್ಲಾ ಪೊಲಿಸ್ ವರಿಷ್ಟಾಧಿಕಾರಿ ಕೆ. ರಾಮರಾಜನ್ ಅನಾವರಣಗೊಳಿಸಿ ಮಾತನಾಡಿ, ಅಧಿಕಾರವೆಂದರೆ ಮತ್ತೊಬ್ಬರನ್ನು ಶಿಕ್ಷಿಸುವಂತಹದ್ದಲ್ಲ. ಬದಲಾಗಿ, ಇಲಾಖೆಯ ಸಹ ಉದ್ಯೋಗಿಗಳಿಗೆ, ಸಾರ್ವಜನಿಕರಿಗೆ ಅಗತ್ಯ ನೆರವನ್ನು ನೀಡುವುದೇ ಆಗಿದೆಯೆಂದು ತಿಳಿಸಿದರು. ಕೊಡಗು ಜಿಲ್ಲೆಯು ಕಾನೂನು ಪಾಲನೆಯೊಂದಿಗೆ, ಶಿಸ್ತು ಬದ್ಧವಾದ ಜನರ ಬದುಕು ಮತ್ತು ನಡವಳಿಕೆಗಳ ಮೂಲಕ ರಾಜ್ಯದ ಇತರೆ ಜಿಲ್ಲೆಗಳಿಗಿಂತ ಕನಿಷ್ಟ ಇಪ್ಪತ್ತು ವರ್ಷಗಳಷ್ಟು ಮುಂದಿದೆಯೆಂದು ಹೆಮ್ಮೆಯಿಂದ ನುಡಿದ ಅವರು, ಜಿಲ್ಲೆಯ ಪೊಲೀಸ್ ಇಲಖೆಯಲ್ಲಿರುವ ಪ್ರತಿಯೊಬ್ಬರು ಅತ್ಯಂತ ವಿಶ್ವಾಸ ಮತ್ತು ಪ್ರಾಮಾಣಿಕವಾಗಿ ಗೌರವಯುತವಾಗಿ ಕಾರ್ಯನಿರ್ವಹಿಸುತ್ತಾರೆಂದು ಮೆಚ್ಚುಗೆಯ ನುಡಿಗಳನ್ನಾಡಿ, ಇತ್ತೀಚಿನ ವರ್ಷಗಳಲ್ಲಿ ಕೊಡಗಿನಿಂದ ಪೊಲೀಸ್ ಇಲಾಖೆಗೆ ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮೂಹಕ್ಕೆ ಅಗತ್ಯ ಪ್ರೇರಣೆ ನೀಡುವ ಕಾರ್ಯವಾಗಬೇಕೆಂದು ಅಭಿಪ್ರಾಯಿಸಿದರು. ಕೊಡಗು ಜಿಲ್ಲಾ ನಿವೃತ್ತ ಪೊಲಿಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ಎಂ.ಕೆ.ಉತ್ತಪ್ಪ ಮಾತನಾಡಿ, ನಿವೃತ್ತ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು, ನಿವೃತ್ತಿಯ ತಮ್ಮ ಜೀವನದಲ್ಲಿ ಹೆಚ್ಚಿನ ಸಮಯವನ್ನು ಕುಟುಂಬಕ್ಕೆ ನೀಡುವುದರೊಂದಿಗೆ ಆರೋಗ್ಯ ಸಂರಕ್ಷಣೆಗೆ ಒತ್ತು ನಿಡುವಂತೆ ಮನವಿ ಮಾಡಿದರು. ::: ಸನ್ಮಾನ ::: ಸಂಘದ ವತಿಯಿಂದ ಲೆ.ಜ.ಡಾ.ಪ್ರೊ.ಬಿ.ಎನ್.ಬಿ.ಎಂ. ಪ್ರಸಾದ್, ಬಿ.ಜಿ.ಮಾದಪ್ಪ, ನಿವೃತ್ತ ಎಡಿಜಿಪಿ ಭಾಸ್ಕರ್ ರಾವ್, ಎಸ್‌ಪಿ ಕೆ. ರಾಮರಾಜನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇದೇ ಸಂದರ್ಭ ಬೆಳ್ಳಿ ಹಬ್ಬಕ್ಕೆ ನೆರವನ್ನು ನೀಡಿದವರನ್ನು ಗೌರವಿಸಲಾಯಿತು.
ಸಮಾರಂಭವನ್ನು ಕರ್ನಾಟಕ ರಾಜ್ಯ ನಿವೃತ್ತ ಪೊಲೀಸ್ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಮಾಜಿ ಅಧ್ಯಕ್ಷರಾದ ಬಿ.ಕೆ. ಶಿವರಾಂ ಜ್ಯೋತಿ ಬೆಳಗುವ ಮೂಲಕ ಉದ್ಘಾಟಿಸಿದರು. ವೇದಿಕೆಯಲ್ಲಿ ರಾಜ್ಯ ಸಂಘದ ಕೆ.ಹೆಚ್.ಜಗದೀಶ್, ವೆಂಕಟರಮಣ, ಮಾಜಿ ಜಿಲ್ಲಾಧ್ಯಕ್ಷರಾದ ವೈ.ಡಿ.ಕೇಶವಾನಂದ, ಎಎಸ್‌ಪಿ ಸುಂದರರಾಜ್ ಸೇರಿದಂತೆ ಹಲ ಗಣ್ಯರು ಉಪಸ್ಥಿತರಿದ್ದರು.ಸಂಘದ ಮಾಜಿ ಅಧ್ಯಕ್ಷರು ಹಾಗೂ ಹಾಲಿ ಗೌರವಾಧ್ಯಕ್ಷರಾದ ಮುಕ್ಕಾಟಿರ ಎ.ಅಪ್ಪಯ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು.









