
ಮಡಿಕೇರಿ NEWS DESK ಡಿ.11 : ಭಾರತೀಯ ಸೇನೆಯ ಅಪ್ರತಿಮ ವೀರಸೇನಾನಿಗಳಾದ ಫೀ.ಮಾ.ಕೆ.ಎಂ.ಕಾರ್ಯಪ್ಪ ಹಾಗೂ ಜನರಲ್ ಕೆ.ಎಸ್.ತಿಮ್ಮಯ್ಯ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವ ವ್ಯಕ್ತಿಯನ್ನು ತಕ್ಷಣ ಗಡಿಪಾರು ಮಾಡಬೇಕೆಂದು ಒತ್ತಾಯಿಸಿ ಡಿ.12 ರಂದು ಕೊಡಗು ಸರ್ವ ಜನಾಂಗಗಳ ಒಕ್ಕೂಟ ಕರೆ ನೀಡಿರುವ ಆರು ಗಂಟೆಗಳ ಕೊಡಗು ಬಂದ್ ಗೆ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಬೆಂಬಲ ಸೂಚಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ಅಸೋಸಿಯೇಷನ್ ನ ಅಧ್ಯಕ್ಷ ಹಂಚೆಟ್ಟಿರ ಮನು ಮುದ್ದಪ್ಪ ಅವರು, ವೀರರ ನಾಡು ಕೊಡಗಿನ ಹೆಮ್ಮೆಯ ವೀರಪುತ್ರರಾದ ಫೀ.ಮಾ.ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರುಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಯನ್ನು ಪೋಸ್ಟ್ ಮಾಡಿರುವುದಲ್ಲದೆ ಕೊಡವರ ಬಗ್ಗೆಯೂ ಅಗೌರವದ ಮಾತುಗಳನ್ನಾಡಿರುವ ಆರೋಪಿಯ ವಿರುದ್ಧ ಕಠಿಣ ಶಿಕ್ಷೆ ವಿಧಿಸಬೇಕೆಂದು ಒತ್ತಾಯಿಸಿದ್ದಾರೆ. ಶಕ್ತಿಶಾಲಿ ಭಾರತೀಯ ಸೇನೆಗೆ ಅಪಾರ ಕೊಡುಗೆಯನ್ನು ನೀಡುವ ಮೂಲಕ ದೇಶವನ್ನು ಸುಭದ್ರಗೊಳಿಸಿದ ವೀರ ಸೇನಾನಿಗಳಿಗೆ ತೋರಿದ ಅಗೌರವವನ್ನು ಖಂಡಿಸಿ ಗುರುವಾರ ಬೆಳಿಗ್ಗೆ 6ಗಂಟೆಯಿಂದ ಮಧ್ಯಾಹ್ನ 12 ರವರೆಗೆ ನಡೆಯುವ ಕೊಡಗು ಬಂದ್ ಗೆ ವ್ಯಾಲಿಡ್ಯೂ ಕೊಡವ ಕಲ್ಚರಲ್ ಅಸೋಸಿಯೇಷನ್ ಸಂಪೂರ್ಣ ಬೆಂಬಲ ನೀಡುತ್ತದೆ ಮತ್ತು ಜಿಲ್ಲೆಯ ಸರ್ವ ಜನರು ಬೆಂಬಲ ನೀಡಬೇಕೆಂದು ಕೋರುವುದಾಗಿ ಹಂಚೆಟ್ಟಿರ ಮನು ಮುದ್ದಪ್ಪ ತಿಳಿಸಿದ್ದಾರೆ.








