ನಾಪೋಕ್ಲು ಡಿ.12 NEWS DESK : ಸದಸ್ಯರ ಒಗ್ಗಟ್ಟು ಮತ್ತು ಆರ್ಥಿಕ ಸಹಕಾರದಿಂದ ಸಮಾಜವನ್ನು ಅಭಿವೃದ್ಧಿಪಡಿಸಲು ಸಾಧ್ಯ ಎಂದು ಮೂರ್ನಾಡು ಗೌಡ ಸಮಾಜದ ಅಧ್ಯಕ್ಷ ಪಾಣತ್ತಲೆ ಟಿ. ಹರೀಶ್ ಹೇಳಿದರು. ಮೂರ್ನಾಡು ಗೌಡ ಸಮಾಜದ ಸಭಾಂಗಣದಲ್ಲಿ ಆಯೋಜಿಸಿದ ಮೂರ್ನಾಡು ಗೌಡ ಸಮಾಜದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ಉತ್ತಮ ಗುಣನಡತೆಯನ್ನು ಮೈಗೂಡಿಸಿಕೊಳ್ಳುವುದರ ಜೊತೆಗೆ ಕಠಿಣ ಶ್ರಮವಹಿಸಿ ಕ್ರೀಡೆ, ಕೃಷಿ ಮತ್ತು ವಿದ್ಯಾ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಕೀರ್ತಿಯನ್ನು ತರುವಂತಾಗಬೇಕು .ಈ ನಿಟ್ಟಿನಲ್ಲಿ ಪೋಷಕರ ಜವಾಬ್ದಾರಿ ಅತಿ ಮುಖ್ಯವಾಗಿದೆ ಎಂದರು. ಸಭೆಯಲ್ಲಿ ಸಮಾಜದ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಚರ್ಚಿಸಿ ಸದಸ್ಯರ ಸಲಹೆ ಸೂಚನೆಗಳನ್ನು ಪರಿಗಣಿಸಿ ಆಡಳಿತ ಮಂಡಳಿ ಅಂತಿಮ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭ ದಾನಿ ಉಳುವಾರನ ಎಸ್.ವಸಂತಕುಮಾರ್ (ಬೆಂಗಳೂರು) ಅವರನ್ನು ಸಮಾಜದ ವತಿಯಿಂದ ಫಲಪುಷ್ಪ ತಾಂಬೂಲ ನೀಡಿ ಸನ್ಮಾನಿಸಲಾಯಿತು. ಹತ್ತನೇ ತರಗತಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ಮಕ್ಕಳನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಈ ಸಂದರ್ಭ ಸಮಾಜದ ಆಡಳಿತ ಮಂಡಳಿ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದದಲ್ಲಿ ಕುವೇಂಡ್ರ ಸುನ್ನಂದಿನಿ ಪ್ರಾರ್ಥನೆ ಮಾಡಿ ಪಾಣತ್ತಲೆ ಟಿ. ಹರೀಶ್ ಸ್ವಾಗತಿಸಿದರು. ದಂಬೆಕೋಡಿ ಸುಬ್ರಹ್ಮಣ್ಯ ಕಾರ್ಯಕ್ರಮವನ್ನು ನಿರೂಪಿಸಿ ಖಜಾಂಚಿ ಕೋರನ ಪ್ರಕಾಶ್ ವಂದನೆ ಸಲ್ಲಿಸಿದರು.
ವರದಿ : ದುಗ್ಗಳ ಸದಾನಂದ