ನಾಪೋಕ್ಲು ಡಿ.16 NEWS DESK : ಹಳೇ ತಾಲೂಕಿನಲ್ಲಿ ಕೊಡಗಿನ ಸುಗ್ಗಿಯ ಹಬ್ಬ ಪುತ್ತರಿಯನ್ನು ಕೊಡವರು ಹಾಗೂ ಮುಸ್ಲಿಂ ಬಾಂಧವರು ಪಾಲ್ಗೊಂಡು ಸಂಭ್ರಮದಿಂದ ಆಚರಿಸಿದರು. ವರ್ಷ ಪ್ರತಿ ಇಲ್ಲಿನ ಹಿರಿಯ ಬೊಪ್ಪೇರ ಕಾವೇರಪ್ಪ ಮತ್ತು ಅವರ ಮಗ ಜಯ ಉತ್ತಪ್ಪ ತಮ್ಮ ಮನೆಯಲ್ಲಿ ಪುತ್ತರಿ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾ ಬರುತ್ತಿದ್ದು, ಇಲ್ಲಿನ ಮುಸ್ಲಿಂ ಜನಾಂಗದವರು ಹಲವು ವರ್ಷಗಳಿಂದ ಪುತ್ತರಿ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಸೌರ್ಹಾದತೆ, ಸಾಮರಸ್ಯಕ್ಕೆ ಸಾಕ್ಷಿಯಾದರು. ಎಲ್ಲರ ಆಗಮನದ ನಂತರ ನೆರೆ ಕಟ್ಟಿ, ಕದಿರು ತೆಗೆದು, ಪ್ರಸಾದವನ್ನು ಸ್ವೀಕರಿಸಿ ಊಟ ಉಪಚಾರದೊಂದಿಗೆ ಹಬ್ಬವನ್ನು ಆಚರಿಸಿ ಸಂಭ್ರಮಿಸಿದರು. ಈ ಸಮಯದಲ್ಲಿ ಪೋಲಿ ಪೋಲಿಯೇ ಬಾ ಎಂಬ ಉದ್ಘೋಷ ಹಾಗೂ ಪಟಾಕಿಗಳ ಆರ್ಭಟ ಮುಗಿಲಿಗೇರಿತು. ಈ ಸಂದರ್ಭ ಮಾತನಾಡಿದ ಹಿರಿಯರಾದ ಬೊಪ್ಪೇರ ಕಾವೇರಪ್ಪ, ನಾವು ಪ್ರತಿ ವರ್ಷವು ಹುತ್ತರಿ ಹಬ್ಬವನ್ನು ಆಚರಿಸುತ್ತಾ ಬರುತ್ತಿದ್ದು, ನಮ್ಮ ನೆರೆಯವರಾದ ಮುಸ್ಲಿಂ ಬಾಂಧವರು ಪ್ರತಿ ವರ್ಷವು ನಮ್ಮ ಮನೆಗೆ ಬಂದು ಹಬ್ಬದಲ್ಲಿ ಪಾಲ್ಗುಳ್ಳುತ್ತಾರೆ. ನಾವೇಲ್ಲರು ಸಹೋದರರಂತೆ ಅವರನ್ನು ಬರಮಾಡಿಕೊಂಡು ಹಬ್ಬವನ್ನು ಆಚರಿಸುತ್ತೇವೆ. ಇದು ನಮಗೆ ಸಂತೋಷವನ್ನುಂಟು ಮಾಡಿದೆ ಎಂದರು. ಹಳೇ ತಾಲೂಕಿನ ಜಮಾಯತ್ ಮಾಜಿ ಆಧ್ಯಕ್ಷ ಮಹಮ್ಮದ್ ಆಲಿ ಮಾತನಾಡಿ, ಬೊಪ್ಪೇರ ಕಾವೇರಪ್ಪನವರ ಮನೆ ನಮಗೆಲ್ಲ ಐನ್ ಮನೆ ಇದ್ದಂತೆ. ಅವರ ಮನೆಯಲ್ಲಿ ಸುಮಾರು 35 ವರ್ಷಗಳಿಂದ ಊರವರೆಲ್ಲಾ ಸೇರಿ ಹುತ್ತರಿ ಹಬ್ಬವನ್ನು ಸೌಹಾರ್ದಯುತವಾಗಿ ಆಚರಿಸುತ್ತೇವೆ ಎಂದರು. ಈ ಸಂದರ್ಭ ಜಯ ಉತ್ತಪ್ಪ, ದಿವ್ಯ ಧರಣಿ ಉತ್ತಪ್ಪ, ರಿತೇಶ್, ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಂಸ, ಎಂ.ಎಸ್.ಇಬ್ರಾಹಿಂ, ಅಬೂಬಕ್ಕರ್ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.
ವರದಿ : ದುಗ್ಗಳ ಸದಾನಂದ