
ಮಡಿಕೇರಿ NEWS DESK ಸೆ.8 : ಕೊಡವರ ನ್ಯಾಯಯುತ ಹಕ್ಕೊತ್ತಾಯಗಳನ್ನು ವಿರೋಧಿಸಿ ಅರೆಭಾಷೆ ಗೌಡ ಜನಾಂಗದ ವತಿಯಿಂದ ಮಡಿಕೇರಿಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಬೇಂಗ್ ನಾಡ್ ಕೊಡವ ಸಮಾಜ ತೀವ್ರವಾಗಿ ಖಂಡಿಸಲಿದೆ ಎಂದು ಸಮಾಜದ ಅಧ್ಯಕ್ಷ ಬಾಚರಣಿಯಂಡ ದಿನೇಶ್ ಗಣಪತಿ, ಆಡಳಿತ ಮಂಡಳಿ ಹಾಗೂ ಸದಸ್ಯರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡವ ಜನಾಂಗದ ಜಮ್ಮಾ ಕೋವಿಯ ಹಕ್ಕು, ಪರಿಶಿಷ್ಟ ಪಂಗಡ ಮತ್ತು ರಾಜಕೀಯ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಹೋರಾಟಗಳಿಗೆ ವಿರೋಧ ವ್ಯಕ್ತಪಡಿಸುವುದನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ. ಇತರ ಸಮುದಾಯಗಳ ಉಡುಗೆ, ತೊಡುಗೆ, ಆಭರಣ, ಸಂಸ್ಕೃತಿ ಹಾಗೂ ಹಬ್ಬಗಳನ್ನು ತಮ್ಮದೇ ಸಂಸ್ಕೃತಿಯೆoದು ಬಿಂಬಿಸುವ ಪ್ರಯತ್ನಗಳ ವಿರುದ್ಧವೂ ಬೇಂಗ್ ನಾಡ್ ಕೊಡವ ಸಮಾಜ ಧ್ವನಿ ಎತ್ತಲಿದೆ. ಕೊಡವ ಜನಾಂಗದ ಹಕ್ಕು, ಅಸ್ತಿತ್ವ ಹಾಗೂ ವಿಶಿಷ್ಟ ಸಂಸ್ಕೃತಿಯನ್ನು ಪ್ರಶ್ನಿಸುವ ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಕ್ರಮವನ್ನು ತೀವ್ರವಾಗಿ ಖಂಡಿಸಲಾಗುವುದು. ಕೊಡವ ಜನಾಂಗದ ನ್ಯಾಯಯುತ ಹಕ್ಕುಗಳ ರಕ್ಷಣೆಗಾಗಿ, ಕೊಡವರ ಅಸ್ತಿತ್ವ ಮತ್ತು ಸಂಸ್ಕೃತಿಯ ಸಂರಕ್ಷಣೆಗಾಗಿ ಕೊಡವ ಸಮಾಜ ಸದಾ ಬದ್ಧವಾಗಿದೆ. ಅಗತ್ಯವಿದ್ದಲ್ಲಿ ಹೋರಾಟ ನಡೆಸಲು ಸಿದ್ಧವಿದೆ ಎಂದು ಚೇರಂಬಾಣೆ ಬೇಂಗ್ ನಾಡ್ ಕೊಡವ ಸಮಾಜದ ಅಧ್ಯಕ್ಷರು, ಆಡಳಿತ ಮಂಡಳಿ ಹಾಗೂ ಸದಸ್ಯರು ಎಚ್ಚರಿಕೆ ನೀಡಿದ್ದಾರೆ.









