ಕುಶಾಲನಗರ ಡಿ.17 NEWS DESK : ಕೊಡಗಿನ ಸೈನಿಕ ಶಾಲೆಯಲ್ಲಿ 28ನೇ ಸ್ಥಳೀಯ ಆಡಳಿತ ಮಂಡಳಿ (ಎಲ್.ಬಿ.ಎ) ಸಭೆ ನಡೆಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಶಾಲೆಯು ಮುಂದಿನ ದಿನಗಳಲ್ಲಿ ಹೊಂದಬೇಕಾದ ಬೆಳವಣಿಗೆ ಮತ್ತು ಅಭಿವೃದ್ಧಿಯ ಗುರಿಯನ್ನು ನಿರ್ಧರಿಸಿ ಹಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಯಿತು. ಹಿರಿಯ ಅಧಿಕಾರಿ-ಪ್ರಭಾರ ಆಡಳಿತ, ತರಬೇತಿ ಕಮಾಂಡ್, ಬೆಂಗಳೂರು ಭಾರತೀಯ ವಾಯುಪಡೆಯ ಹಿರಿಯ ಅಧಿಕಾರಿ-ಪ್ರಭಾರ ಆಡಳಿತ, ತರಬೇತಿ ಕಮಾಂಡ್ ಏರ್ ವೈಸ್ ಮಾರ್ಷಲ್ ಪಿ.ಸಿ.ಪಿ.ಆನಂದ್, ವಿ ಎಸ್ ಎಂ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಶಾಲೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣಕರ್ತರಾದ ಕರ್ನಾಟಕ ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತದ ಅಭೂತಪೂರ್ವವಾದ ಆರ್ಥಿಕ ಬೆಂಬಲವನ್ನು ಸ್ಮರಿಸುತ್ತಾ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಎಸ್ ಎಸ್ ಬಿ ತರಬೇತಿಯ ಕುರಿತು ಶಾಲೆಯು ಹೊಂದಿರುವ ನಿಖರವಾದ ಮಾರ್ಗವನ್ನು ಪ್ರಶಂಸಿಸಿದರು. ಇದರೊಂದಿಗೆ ಶಾಲೆಯು ಹೊಂದಿರುವ ಶೈಕ್ಷಣಿಕ, ಕ್ರೀಡೆ, ಸಹಪಠ್ಯ ಚಟುವಟಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಶಾಲೆಯ ಗಮನಾರ್ಹ ಸಾಧನೆಗಳನ್ನು ಶ್ಲಾಘಿಸಿದರು. ಜೊತೆಗೆ ಶಾಲೆಯ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ಅವರ ಸಾಧನೆಗಳನ್ನು ಶ್ಲಾಘಿಸಿದರು. ಯು ಪಿ ಎಸ್ ಸಿ, ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ಯಶಸ್ವಿಯಾಗಿ ತೇರ್ಗಡೆಯಾಗುವ ಮೂಲಕ ಶಾಲೆಯ ಇತಿಹಾಸದಲ್ಲಿ ಹೊಸ ಮೈಲಿಗಲ್ಲನ್ನು ದಾಖಲಿಸಿದ 19 ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಶಾಲೆಯ ಪ್ರಾಂಶುಪಾಲರಾದ ಕರ್ನಲ್ ಅಮರ್ ಜೀತ್ ಸಿಂಗ್, ಕಳೆದ ಆರು ತಿಂಗಳ ಶಾಲೆಯ ತರಬೇತಿ ಮತ್ತು ಆಡಳಿತಾತ್ಮಕ ಪ್ರಗತಿಯನ್ನು ಸದಸ್ಯರಿಗೆ ವಿವರಿಸಿದರು. ಸಂಸ್ಥೆಯ ಸಾಧನೆಗಳನ್ನು, ಭವಿಷ್ಯದ ದಿನಗಳಲ್ಲಿ ಶಾಲೆಯು ಹಮ್ಮಿಕೊಂಡಿರುವ ಶೈಕ್ಷಣಿಕ ಮತ್ತು ಆಡಳಿತಾತ್ಮಕ ಕ್ರಮಗಳನ್ನು ವಿವರಿಸಿದರು. ಸಭೆಯಲ್ಲಿ ಆಡಳಿತಾಧಿಕಾರಿ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್, ಉಪ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ, ಕೊಡಗು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (ಡಿಡಿಪಿಐ) ರಂಗಧಾಮಪ್ಪ ಸಿ, ಮೈಸೂರು ವಿಶ್ವವಿದ್ಯಾನಿಲಯದ ಉಪ ಕುಲಸಚಿವ ಬಿ.ಶಂಕರ್, ಸಿ.ಪಿ.ಡಬ್ಲ್ಯೂ.ಡಿ ಯ ಕಾರ್ಯನಿರ್ವಾಹಕ ಇಂಜಿನಿಯರ್ (ಸಿವಿಲ್) ಆರ್.ಎನ್.ಮಂಜುನಾಥ್, ಕೊಡಗು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆಯ(ಡಯಟ್) ಹಿರಿಯ ಉಪನ್ಯಾಸಕ ಶಿವಕುಮಾರ್, ಪೋಷಕ ಸದಸ್ಯ ಸಂಪತ್ ಕುಮಾರ್ ಶರ್ಮಾ, ಹಿರಿಯ ಶಿಕ್ಷಕ ವಿಬಿನ್ ಕುಮಾರ್, ಕಚೇರಿ ಅಧೀಕ್ಷಕ ರಿದಮ್ ಗಂಗೂಲಿ, ಹಾಗೂ ಲೆಕ್ಕಿಗ ಎನ್ ಸುಧಾಕರ್ ಭಾಗವಹಿಸಿದ್ದರು. ಸಭೆಗೂ ಮುನ್ನ ಏರ್ ವೈಸ್ ಮಾರ್ಷಲ್ ಪಿಸಿಪಿ ಆನಂದ್ ಶಾಲೆಯ ಆವರಣದಲ್ಲಿರುವ ಯುದ್ಧ ವೀರರ ಸ್ಮಾರಕಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ಸಮರ್ಪಿಸಿದರು. ನಂತರ ಶಾಲೆಯ ಕುವೆಂಪು ವಿವಿದೊದ್ದೇಶ ಸಭಾಂಗಣದಲ್ಲಿ ಗೌರವಾರ್ಥ ನಡೆದ ಸಭಾ ಕಾರ್ಯಕ್ರಮದಲ್ಲಿ ಕೆಡೆಟ್ ವೈಷ್ಣವಿ ಮತ್ತು ತಂಡದವರು ಸ್ವಾಗತ ನೃತ್ಯ ಮಾಡಿದರು. ಹತ್ತನೇ ತರಗತಿಯ ವಿದ್ಯಾರ್ಥಿಗಳು ಕರ್ನಾಟಕದ ಪ್ರಸಿದ್ಧ ಜಾನಪದ ನೃತ್ಯವಾದ ಡೊಳ್ಳು ಕುಣಿತ ನಡೆಸಿಕೊಟ್ಟರು. ಇದರೊಂದಿಗೆ ಕೆಡೆಟ್ ಪ್ರಿಯಾಂಕಾ ಜಿಎನ್ ಮತ್ತು ಅವರ ತಂಡದವರು ಗೋವಿನ ಹಾಡು ರೂಪಕವನ್ನು ಪ್ರಸ್ತುತಪಡಿಸಿದರು.