ಮಡಿಕೇರಿ NEWS DESK ಡಿ.22 : ಕ್ರೀಡೆ ಸೇರಿದಂತೆ ಯಾವುದೇ ಕ್ಷೇತ್ರದಲ್ಲಿ ಖ್ಯಾತಿ ಗಳಿಸಿದ ಸಾಧಕರ ಸಾಧನೆ ಪುಸ್ತಕದ ರೂಪದಲ್ಲಿ ದಾಖಲೀಕರಣಗೊಂಡರೆ ಮುಂದಿನ ಯುವ ಪೀಳಿಗೆಗೆ ಅದು ಸ್ಫೂರ್ತಿಯಾಗಿ ಉಳಿದುಕೊಳ್ಳಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚೆಪ್ಪುಡೀರ ಎಂ.ಪೂಣಚ್ಚ ಅಭಿಪ್ರಾಯಪಟ್ಟಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ನಡೆದ ಕೊಡವ ಮಕ್ಕಡ ಕೂಟದ 105ನೇ ಪುಸ್ತಕ, ಹಾಕಿ ಆಟಗಾರ, ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಅವರು ರಚಿಸಿರುವ “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಬಿಡುಗಡೆ ಸಮಾರಂಭದವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಪತ್ರಿಕೆಗಳಲ್ಲಿ ಸಾಧಕರ ಸಾಧನೆ ಪ್ರಕಟಗೊಂಡರೆ ಇಂದು ಓದಿ ನಾಳೆ ಮರೆಯುತ್ತೇವೆ. ಆದರೆ ಪುಸ್ತಕದ ರೂಪದಲ್ಲಿ ಹೊರ ಬಂದರೆ ದಾಖಲೆಯ ರೂಪದಲ್ಲಿ ಸಾಧಕರ ನೆನಪು ಸದಾ ಇರುವುದಲ್ಲದೆ ಯುವ ಸಮೂಹದಲ್ಲಿ ಹೊಸ ಸ್ಫೂರ್ತಿಯನ್ನು ತುಂಬುತ್ತದೆ. ಕ್ರೀಡಾ ಜಿಲ್ಲೆ ಕೊಡಗು ಈಗ ಕೇವಲ ಕ್ರೀಡೆಗೆ ಮಾತ್ರ ಸೀಮಿತವಾಗಿಲ್ಲ, ಎಲ್ಲಾ ಕ್ಷೇತ್ರಗಳಲ್ಲು ಕೊಡಗಿನ ಸಾಧಕರು ಗುರುತಿಸಿಕೊಳ್ಳುತ್ತಿದ್ದಾರೆ. ಶಿಸ್ತಿಗೆ ಹೆಸರಾದ ಕೊಡಗಿನಿಂದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟç ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ. ಇದಕ್ಕೆ÷ಸತತ ಪರಿಶ್ರಮವೇ ಕಾರಣವಾಗಿದ್ದು, “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಪುಸ್ತಕ ರಚನೆಗೂ ಚೆಪ್ಪುಡೀರ ಕಾರ್ಯಪ್ಪ ಅವರು ಶ್ರಮ ವಹಿಸಿದ್ದಾರೆ ಎಂದು ಶ್ಲಾಘಿಸಿದರು. ಈ ಪುಸ್ತಕ ಯುವ ಸಮೂಹಕ್ಕೆ ಸ್ಫೂರ್ತಿ ತುಂಬುವ ರೀತಿಯಲ್ಲಿದ್ದು, ಇದೊಂದು ದಾಖಲೆಯಾಗಿ ಉಳಿದುಕೊಳ್ಳಬೇಕು. ಗ್ರಾಮೀಣ ಪ್ರದೇಶದ ಓದುಗರಿಗೆ ಹೆಚ್ಚು ಹಂಚಿಕೆಯಾಗಬೇಕು. ಇಂದಿನ ಯುವ ಸಮೂಹ ಸಾಮಾಜಿಕ ಜಾಲತಾಣಕ್ಕೆ ಆಕರ್ಷಿತರಾಗಿರುವುದರಿಂದ ಪುಸ್ತಕದಲ್ಲಿರುವ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಂಡರೆ ಸಾಧಕರ ಪರಿಚಯ ಹೆಚ್ಚು ಜನರಿಗೆ ಆಗಲಿದೆ ಎಂದು ಚೆಪ್ಪುಡೀರ ಎಂ.ಪೂಣಚ್ಚ ಅಭಿಪ್ರಾಯಪಟ್ಟರು.
ಕೊಡಗಿನ ಸಂಸ್ಕೃತಿ, ಆಚಾರ, ವಿಚಾರಗಳ ಬೆಳವಣಿಗೆಗಾಗಿ ಶ್ರಮಿಸುತ್ತಿರುವ ಕೊಡವ ಮಕ್ಕಡ ಕೂಟ ಸಂಘಟನೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿದೆ. ದಾಖಲೆಯ 105 ಪುಸ್ತಕಗಳನ್ನು ಪ್ರಕಟಿಸಿರುವುದು ಹೆಮ್ಮೆಯ ವಿಚಾರವೆಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಎಂ.ಸಿ.ನಾಣಯ್ಯ ಅವರು ಹಾಕಿ ಕ್ರೀಡೆಯಲ್ಲಿ ಪಾಲ್ಗೊಳ್ಳಲು ಉತ್ತರ ಭಾರತದವರಿಗೆ ಮಾತ್ರ ಅವಕಾಶ ದೊರೆಯುತ್ತಿದ್ದ ಕಾಲದಲ್ಲೇ ಅದನ್ನು ಮೆಟ್ಟಿನಿಂತು ರಾಷ್ಟ್ರೀಯ ತಂಡದಲ್ಲಿ ಕೊಡಗಿನವರು ಅವಕಾಶ ಪಡೆದುಕೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಕೊಡಗಿನಲ್ಲಿರುವ ಎಲ್ಲರೂ ಒಗ್ಗಟ್ಟಾಗಿ ಹಾಕಿ ಕ್ರೀಡಾಕೂಟವನ್ನು ನಿರಂತರವಾಗಿ ನಡೆಸಿಕೊಂಡು ಹೋಗುವ ಮೂಲಕ ಉತ್ತಮ ಕ್ರೀಡಾಪಟುಗಳ ಆಯ್ಕೆಗೆ ಕಾರಣವಾಗಬೇಕು. ಕೊಡವ ಕೌಟುಂಬಿಕ ಹಾಕಿ ಹಬ್ಬ ಲಿಮ್ಕಾ ಮತ್ತು ಗಿನ್ನಿಸ್ ದಾಖಲೆಯ ಅರ್ಹತೆಯನ್ನು ಪಡೆದುಕೊಂಡಿದೆ. ದೊಡ್ಡ ಮಟ್ಟದ ಈ ಹಾಕಿ ಹಬ್ಬ ಪ್ರತಿವರ್ಷ ಒಂದೇ ಸ್ಥಳದಲ್ಲಿ ನಡೆಯುವಂತ್ತಾಗಬೇಕು, ಇದಕ್ಕಾಗಿ ಶಾಶ್ವತ ಮೈದಾನದ ವ್ಯವಸ್ಥೆಯಾಗಬೇಕು ಎಂದು ತಿಳಿಸಿದರು.
“ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಪುಸ್ತಕದ ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಮಾತನಾಡಿ ಹಾಕಿ ಕ್ರೀಡೆಯ ಸ್ಫೂರ್ತಿ ಕೊಡಗಿನ ಮಕ್ಕಳ ರಕ್ತದಲ್ಲಿ ಶೇ.70 ರಷ್ಟಿದೆ. ಉಳಿದ ಶೇ.30ರಷ್ಟು ಪ್ರೋತ್ಸಾಹ ಪೋಷಕರಿಂದ ಸಿಗಬೇಕಾಗಿದೆ ಎಂದರು. ಕ್ರೀಡಾ ಸಾಧಕರ ಸಾಧನೆಯನ್ನು ಕೊಡಗಿನ ಚರಿತ್ರೆ ಮರೆಯಬಾರದು ಎನ್ನುವ ಕಾರಣಕ್ಕಾಗಿ ಪುಸ್ತಕವನ್ನು ಬರೆದಿದ್ದೇನೆ. ಜಿಲ್ಲೆಯ ಶಾಲಾ ಕಾಲೇಜುಗಳು ಮತ್ತು ಗ್ರಂಥಾಲಯಗಳಿಗೆ ಪುಸ್ತಕವನ್ನು ಉಚಿತವಾಗಿ ನೀಡಲಾಗುತ್ತಿದೆ. ಮಕ್ಕಳು ಈ ಪುಸ್ತಕವನ್ನು ಹೆಚ್ಚು ಓದಬೇಕು, ಸಾಧಕರ ಆದರ್ಶಗಳನ್ನು ಅಳವಡಿಸಿಕೊಂಡು ಕ್ರೀಡಾ ಸಾಧನೆ ಮಾಡಬೇಕು ಎನ್ನುವುದು ನಮ್ಮ ಉದ್ದೇಶ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ.ರಾಜೇಂದ್ರ ಅನೇಕ ಸಂಶೋಧಕರು ಗ್ರಂಥಗಳನ್ನು ಉಲ್ಲೇಖ ಮಾಡಿಯೇ ಸಂಶೋಧನೆಗಳನ್ನು ಮಾಡಿದ್ದಾರೆ. ದಾಖಲೀಕರಣದಿಂದ ಮಾತ್ರ ಸಾಧಕರ ಸಾಧನೆ ನೆನಪಿನಲ್ಲಿ ಉಳಿಯಲು ಸಾಧ್ಯವೆಂದರು. ಎಲ್ಲಾ ಕ್ರೀಡಾ ಸಾಧಕರ ಮಾಹಿತಿಯನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಹೊರ ತಂದಿರುವುದು ದೊಡ್ಡ ಸಾಧನೆಯೇ ಆಗಿದೆ. ನೈಜತೆಯನ್ನು ಹೊಂದಿರುವ ಈ ಪುಸ್ತಕ ಸಂಗ್ರಹಕ್ಕೆ ಯೋಗ್ಯವಾಗಿದ್ದು, ಶಾಲಾ ಕಾಲೇಜುಗಳಿಗೆ ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯವೆಂದು ತಿಳಿಸಿದರು. ಮತ್ತೊಬ್ಬ ಅತಿಥಿ ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷ ಪಾಂಡAಡ ಕೆ.ಬೋಪಣ್ಣ ಮಾತನಾಡಿ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಮತ್ತಷ್ಟು ಬೆಳೆಸಬೇಕು. “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಪುಸ್ತಕ ಮುಂದಿನ ಪೀಳಿಗೆಗೆ ಸ್ಫೂರ್ತಿದಾಯಕವಾಗಿದೆ ಎಂದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಕೊಡಗು ಸಣ್ಣ ಜಿಲ್ಲೆಯಾದರೂ ಕ್ರೀಡೆ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲಿ ದೊಡ್ಡ ಮಟ್ಟದ ಸಾಧನೆ ಮಾಡಿದ್ದಾರೆ. ಮತ್ತಷ್ಟು ಸಾಧಕರು ಬರಬೇಕಾಗಿದೆ, ಯುವ ಸಮೂಹ ಹಾದಿ ತಪ್ಪಬಾರದು. ಹಿಂದೆ ಅವಕಾಶದ ಕೊರತೆ ಇತ್ತು, ಆದರೆ ಇಂದು ಎಲ್ಲಾ ಅವಕಾಶಗಳೊಂದಿಗೆ ಪೋಷಕರ ಪ್ರೋತ್ಸಾಹವೂ ಸಿಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಸೇನೆ ಮತ್ತು ಕ್ರೀಡಾ ಕ್ಷೇತ್ರಕ್ಕೆ ಸೇರುತ್ತಿರುವ ಯುವ ಸಮೂಹದ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕೊಡವ ಮಕ್ಕಡ ಕೂಟ ಸಂಘಟನೆ ಇನ್ನು ಮುಂದೆಯೂ ಸಾಹಿತ್ಯದ ಬೆಳವಣಿಗೆಗೆ ಪ್ರೋತ್ಸಾಹ ನೀಡಲಿದೆ ಎಂದರು. “ಕೊಡಗಿನ ಕ್ರೀಡಾಪಟುಗಳ ಜೀವನ ಚರಿತ್ರೆ” ಪುಸ್ತಕದ 1500 ಪ್ರತಿಗಳನ್ನು ಹೊರ ತರಲಾಗಿದ್ದು, 613 ಶಾಲೆಗಳಿಗೆ, 67 ಪದವಿ ಪೂರ್ವ ಕಾಲೇಜುಗಳಿಗೆ, 26 ಪದವಿ ಕಾಲೇಜುಗಳಿಗೆ, 102 ಗ್ರಾ.ಪಂ ಗಳಿಗೆ, 5 ತಾ.ಪಂ ಮತ್ತು 1 ಜಿ.ಪಂ ಗೆ ಉಚಿತವಾಗಿ ಹಂಚಿಕೆ ಮಾಡಲಾಗುತ್ತಿದೆ ಎಂದು ಬೊಳ್ಳಜಿರ ಅಯ್ಯಪ್ಪ ತಿಳಿಸಿದರು. ಕ್ರೀಡಾಪಟು ಬಾಳೆಯಡ ಕಾಳಪ್ಪ ಹಾಗೂ ಲೆ.ಕ.ಬಾಳೆಯಡ ಸುಬ್ರಮಣಿ ಮಾತನಾಡಿದರು.
ವಿವಿಧ ಶಾಲೆಗಳಿಗೆ ವಿತರಣೆ ಮಾಡಲು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಗುರುರಾಜ್ ಕೆ.ಪಿ ಹಾಗೂ ಮದೆ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸಿದ್ದರಾಜು ಬೆಳ್ಳಯ್ಯ ಅವರಿಗೆ ಇದೇ ಸಂದರ್ಭ ಪುಸ್ತಕಗಳನ್ನು ವಿತರಿಸಲಾಯಿತು. 1975ರ ವಿಶ್ವಕಪ್ ಹಾಕಿ ಪಂದ್ಯಾವಳಿಯ ವಿಜೇತ, ಹಿರಿಯ ಕ್ರೀಡಾಪಟು ಪೈಕೇರ ಇ.ಕಾಳಯ್ಯ ಉಪಸ್ಥಿತರಿದ್ದರು. ಚೀಯಕ್ ಪೂವಂಡ ಶ್ವೇತನ್ ಚಂಗಪ್ಪ ಅವರು ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಅವರ ಪರಿಚಯ ಮಾಡಿದರು. ಚೋಕಿರ ಅನಿತಾ ನಿರೂಪಿಸಿ, ತೆನ್ನೀರ ಟೀನಾ ಚಂಗಪ್ಪ ಪ್ರಾರ್ಥಿಸಿ, ಐಚಂಡ ರಶ್ಮಿ ಮೇದಪ್ಪ ಸ್ವಾಗತಿಸಿ, ಪೇರಿಯಂಡ ಯಶೋಧ ವಂದಿಸಿದರು. ::: ಯುವ ಆಟಗಾರರಿಗೆ ಸ್ಫೂರ್ತಿ ::: ಕ್ರೀಡಾಪಟು ಹಾಗೂ ಬರಹಗಾರ ಚೆಪ್ಪುಡೀರ ಎ.ಕಾರ್ಯಪ್ಪ ಅವರು ತೀರ್ಪುಗಾರರಾಗಿ, ವೀಕ್ಷಕ ವಿವರಣೆಗಾರರಾಗಿ ಕಾರ್ಯನಿರ್ವಹಿಸಿದ್ದು, ಯುವ ಆಟಗಾರರಿಗೆ ಸ್ಫೂರ್ತಿ ತುಂಬುವ ಸಲುವಾಗಿ ರಾಷ್ಟಿçÃಯ ಕ್ರೀಡೆ ಮತ್ತು ಒಲಂಪಿಕ್ಸ್ ನಲ್ಲಿ ಪದಕ ಗೆದ್ದ ಆಟಗಾರರ ಜೀವನ ಚರಿತ್ರೆಯನ್ನು ಪುಸ್ತಕದ ರೂಪದಲ್ಲಿ ಹೊರತಂದಿದ್ದಾರೆ. ತೆರೆಮರೆಯ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ, ಅಲ್ಲದೇ ಕಷ್ಟಪಟ್ಟು ಸಾಧನೆ ಮಾಡಿದ ಮಹಾನ್ ಹಾಕಿ ಆಟಗಾರರ ಪರಿಚಯವನ್ನು ಕೂಡ ನೀಡಿದ್ದಾರೆ. ಈ ಪುಸ್ತಕದಲ್ಲಿ ಹಾಕಿ ಮಾತ್ರವಲ್ಲದೇ ಕುದುರೆ ಸವಾರಿ, ಕ್ರಿಕೆಟ್, ಕರಾಟೆ, ವಾಲಿಬಾಲ್, ಅಥ್ಲೆಟಿಕ್ಸ್, ಬಾಕ್ಸಿಂಗ್, ಗಾಲ್ಫ್ ಹಾಗೂ ಬ್ಯಾಡ್ಮಿಂಟನ್ ಆಟಗಾರರ ಜೀವನ ಚರಿತ್ರೆಯನ್ನು ಕೂಡ ವಿವರಿಸಲಾಗಿದೆ.
Breaking News
- *ದಕ್ಷಿಣ ಕೊಡಗಿನಲ್ಲಿ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ : 50 ಏಕರೆ ಭೂಮಿ ಮಂಜೂರಾತಿಗೆ ಆಪ್ ಮನವಿ*
- *ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜು : 8ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ಕೊಡಗಿನ ವಿಶ್ವಜಿತ್ ಹಾಗೂ ಪೂಜಿತ್ ಆಯ್ಕೆ*
- *ರಾಷ್ಟ್ರೀಯ ಜೂನಿಯರ್ ಹಾಕಿ ತಂಡಕ್ಕೆ ದೃಶ್ಯ ಅಚ್ಚಪ್ಪ ಆಯ್ಕೆ*
- *ಹೆಬ್ಬಾಲೆ : ಜ.23 ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ*
- *ಶ್ರೀ ರಾಮ ಜನ್ಮಭೂಮಿ ಸೇವಾ ಸಮಿತಿಯಿಂದ ಮಡಿಕೇರಿಯಲ್ಲಿ ಅನ್ನದಾನ*
- *ಜ.26 ರಂದು ಲೋಕಾಪ೯ಣೆಯಾಗಲಿದೆ ಮತ್ತೆ ವಸಂತ*
- *ಹೆಗ್ಗಳ ಗ್ರಾಮದ ಸರ್ಕಾರಿ ಶಾಲೆಗೆ ಕಂಪ್ಯೂಟರ್ ಕೊಡುಗೆ*
- *ಎನ್.ಯು.ನಾಚಪ್ಪ ವಿರುದ್ಧ ಪ್ರಕರಣ : ಮಡಿಕೇರಿ ಕೊಡವ ಸಮಾಜ ಖಂಡನೆ*
- *ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿಗೆ ಪಿ.ಹೆಚ್.ಡಿ ಪದವಿ*