ಮಡಿಕೇರಿ ಡಿ.23 NEWS DESK : ಕೊಡವ ಮಕ್ಕಡ ಕೂಟದ 106ನೇ ಮತ್ತು ನಟ, ನಿರ್ದೇಶಕ, ನಿರ್ಮಾಪಕ, ಸಾಹಿತಿ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ರಚಿತ 11ನೇ ಪುಸ್ತಕ “ಗಮ್ಯ” ಇಂದು ಬಿಡುಗಡೆಗೊಂಡಿತು. ನಗರದ ಪತ್ರಿಕಾ ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪುಸ್ತಕವನ್ನು ಬಿಡುಗಡೆಗೊಳಿಸಿ ಮಾತನಾಡಿದ ವಿಧಾನ ಪರಿಷತ್ ಮಾಜಿ ಸದಸ್ಯ ಮಂಡೇಪಂಡ ಸುನಿಲ್ ಸುಬ್ರಮಣಿ ಅವರು ಸಮಾಜದ ಸುಧಾರಣೆಯಲ್ಲಿ ಪುಸ್ತಕಗಳು ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪುಸ್ತಕಗಳು ಸಾಮಾಜಿಕ ಕಾಳಜಿಯೊಂದಿಗೆ ಉತ್ತಮ ಸಂದೇಶವನ್ನು ನೀಡಬೇಕು, ಬಿಡುಗಡೆಗೊಳ್ಳುವ ಪುಸ್ತಕಗಳಿಗೆ ಹೆಚ್ಚಿನ ಪ್ರಚಾರ ನೀಡುವ ಮೂಲಕ ಓದುಗರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಬೇಕು ಎಂದರು. ಅರ್ಜಿ ಹಾಕಿ ಯಾವುದೇ ಜಾತಿಯಲ್ಲಿ ಹುಟ್ಟಲು ಸಾಧ್ಯವಿಲ್ಲ, ಹುಟ್ಟಿದ ಮೇಲೆ ಜಾತಿಯ ಬಗ್ಗೆ ಸ್ವಾಭಿಮಾನ, ಅಭಿಮಾನವಿರಬೇಕು. ಹುಟ್ಟಿದ ಮಣ್ಣಿನ ಮೇಲೆ ಪ್ರೀತಿ ಇರಬೇಕು. ಕೊಡವರಾಗಿ ಹುಟ್ಟಿರುವ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರು ಕೊಡಗಿನ ನೆಲ, ಜಲ, ಸಂಸ್ಕೃತಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇವರ ಸಿನಿಮಾಗಳಲ್ಲಿ ಇದನ್ನು ಕಾಣಬಹುದಾಗಿದೆ. ಸಿನಿಮಾ ಕ್ಷೇತ್ರದೊಂದಿಗೆ ಸಾಹಿತ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವೆಂದರು. ಹಿರಿಯ ಸಾಹಿತಿ ಬಾಚರಣಿಯಂಡ ಪಿ.ಅಪ್ಪಣ್ಣ ಅವರು ಮಾತನಾಡಿ ಸಾಹಿತ್ಯದ ಮೂಲಕ ಕನ್ನಡ ನಾಡು, ನುಡಿಯನ್ನು ಶ್ರೀಮಂತಗೊಳಿಸಬೇಕು. ಬರಹಗಾರರ ಸಂಖ್ಯೆ ಹೆಚ್ಚಾಗುತ್ತಿದೆ, ಆದರೆ ಓದುಗರ ಸಂಖ್ಯೆ ಕಡಿಮೆ ಇದೆ. ಓದುಗರನ್ನು ಹೆಚ್ಚಸಿಕೊಳ್ಳುವುದಕ್ಕೆ ಹೊಸ ಸ್ಕೀಂವೊಂದನ್ನು ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು. “ಗಮ್ಯ” ಪುಸ್ತಕ ಹೃದಯವನ್ನು ಮುಟ್ಟುತ್ತದೆ, ಇದರಲ್ಲಿರುವ ಕನ್ನಡ ಪದ ಬಳಕೆ ಚಾಕಲೇಟ್ ನಷ್ಟು ಸಿಹಿಯಾಗಿದೆ. ಈ ಸಿಹಿಯನ್ನು ಸವಿಯಲು ಪ್ರತಿಯೊಬ್ಬರು ಪುಸ್ತಕವನ್ನು ಓದಬೇಕು. ಸಾಹಿತ್ಯಯಾಗ ಮಾಡುತ್ತಿರುವ ಕೊಡವ ಮಕ್ಕಡ ಕೂಟ 106 ಪುಸ್ತಕಗಳನ್ನು ಬಿಡುಗಡೆ ಮಾಡುವ ಮೂಲಕ ದೊಡ್ಡ ಸಾಧನೆಯನ್ನೇ ಮಾಡಿದೆ. ಬರಹಗಾರರಿಗೆ ಪ್ರೋತ್ಸಾಹ ನೀಡಿದಂತೆ ಓದುಗರನ್ನು ಆಕರ್ಷಿಸಲು ಏನಾದರು ಉಪಾಯ ಮಾಡಲೇಬೇಕು ಎಂದರು. ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಪ್ರಾಂಶುಪಾಲ ಪ್ರೊ.ಮೇಜರ್ ಬಿ.ರಾಘವ ಅವರು ಮಾತನಾಡಿ ಅತಿಯಾದ ನಾಗರೀಕತೆ ಮತ್ತು ಆಧುನೀಕತೆಯ ನಡುವೆ ಮಾನವೀಯತೆಗೆ ಬೆಲೆ ಇಲ್ಲದಾಗಿದೆ. ಸಾಮಾಜಿಕ ಕಳಕಳಿಯ ಅಂಶಗಳಿಂದ ಸಾಮಾಜಿಕ ಪಿಡುಗುಗಳ ನಿರ್ಮೂಲನೆಯಾಗಬೇಕಾಗಿದೆ. ಸಾಹಿತಿಗಳು ಸಮಾಜದ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ, ಸಾಹಿತ್ಯ ಸೇವೆಯ ಮೂಲಕ ಜನರಿಗೆ ಭೌಗೋಳಿಕ ಜ್ಞಾನವನ್ನು ನೀಡುತ್ತಾರೆ ಎಂದು ತಿಳಿಸಿದರು. ಕೊಡವ ಮಕ್ಕಡ ಕೂಟ ಬರವಣಿಗೆಯ ಕ್ರಾಂತಿಯನ್ನೇ ಮಾಡುತ್ತಿದ್ದು, ಕೂಟಕ್ಕೂ ಪ್ರೋತ್ಸಾಹದ ಅಗತ್ಯವಿದೆ ಎಂದು ಹೇಳಿದರು. ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ನ ನಿವೃತ್ತ ಪಾಂಶುಪಾಲರಾದ ಕಲ್ಲುಮಾಡಂಡ ಸರಸ್ವತಿ ಸುಬ್ಬಯ್ಯ ಮಾತನಾಡಿ ಸಮಾಜದಲ್ಲಿ ಮಹಿಳಾ ಶೋಷಣೆ ಇನ್ನೂ ಕೂಡ ಜೀವಂತವಾಗಿರುವುದು ಬೇಸರದ ವಿಚಾರವಾಗಿದೆ. ಸರಕಾರ ಯಾವುದೇ ಯೋಜನೆ ಅಥವಾ ಕಠಿಣ ಕಾನೂನು ಜಾರಿಗೆ ತಂದರೂ ಬಾಲಕಿಯರ ಮೇಲೆಯೂ ನಿರಂತರ ದೌರ್ಜನ್ಯ ನಡೆಯುತ್ತಿರುವುದು ವಿಷಾದನೀಯ. ಹೆಣ್ಣಿನಿಂದ ಹೆಣ್ಣಿನ ಮೇಲೆಯೇ ದೌರ್ಜನ್ಯ ಹೆಚ್ಚಾಗುತ್ತಿದೆ. ಸಮಾಜದಲ್ಲಿ ನಡೆಯುತ್ತಿರುವ ಸ್ತ್ರೀಶೋಷಣೆಯನ್ನು ಕೊನೆಗಾಣಿಸಬೇಕಾಗಿದೆ ಎಂದರು. “ಗಮ್ಯ” ಪುಸ್ತಕ ಹೃದಯಸ್ಪರ್ಶಿಯಾಗಿದ್ದು, ಮಹಿಳೆಯರ ಬದುಕಿನ ಕುರಿತು ಮನಮುಟ್ಟುವಂತೆ ಬರೆಯಲಾಗಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. “ಗಮ್ಯ” ಪುಸ್ತಕದ ರಚನೆಕಾರ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ಸಾಹಿತ್ಯ ರಚನೆ ಜವಾಬ್ದಾರಿಯುತವಾಗಿರಬೇಕು, ಓದುಗರನ್ನು ಸೆಳೆಯುವ ಮತ್ತು ಸಮಾಜವನ್ನು ಪರಿವರ್ತಿಸುವ ಶಕ್ತಿ ಅದರಲ್ಲಿರಬೇಕು. ಸಿನಿಮಾ ಸಾಹಿತ್ಯ ಹಾಗೂ ಪುಸ್ತಕಗಳ ರಚನೆ ಅತ್ಯಂತ ಹಿಡಿತದಿಂದ ಕೂಡಿದ್ದರೆ ಜನಪ್ರಿಯತೆ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು. ಕೊಡವ ಮಕ್ಕಡ ಕೂಟದ ಸ್ಥಾಪಕಾಧ್ಯಕ್ಷ ಹಾಗೂ ಪ್ರಕಾಶಕ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಮಾತನಾಡಿ ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 105 ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಅದ್ದೂರಿಯಾಗಿ ಸಮರ್ಪಿಸಲಾಗಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ ಎಂದು ತಿಳಿಸಿದರು.
ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ :: ಕೊಡಗಿನ ಚೇರಂಬಾಣೆ ಕೋಪಟ್ಟಿ ಗ್ರಾಮದ ಸಾಮಾನ್ಯ ಮನೆತನದಲ್ಲಿ ಹುಟ್ಟಿದ ವ್ಯಕ್ತಿ ತನ್ನ ಕಾಯಕ ಶ್ರದ್ಧೆಯಿಂದ 1983ರಲ್ಲಿ ಭಾರತೀಯ ಸೇನೆಗೆ ಸೇರಿ 17 ವರ್ಷಗಳ ಕಾಲ ದೇಶ ಸೇವೆಮಾಡಿ ನಿವೃತ್ತಿಯಾದ ನಂತರದ ಜೀವನವನ್ನು ಬಹು ವೈವಿಧ್ಯಮಯವಾಗಿ ರೂಪಿಸಿಕೊಂಡವರು ಪ್ರಕಾಶ್ ಕಾರ್ಯಪ್ಪ. ಒಂದು ಕಡೆ ತಮ್ಮದೇ ಆದ ಉದ್ಯಮ & ಕಾಂಕ್ರೀಟ್ ಪ್ರೊಡಕ್ಟ್ಸ್, ಇನ್ನೊಂದೆಡೆ ಚಲನಚಿತ್ರ ಕ್ಷೇತ್ರದಲ್ಲಿ ಕೂರ್ಗ್ ಕಾಫಿ ವುಡ್ ಮೂವಿಸ್ ಸಂಸ್ಥೆಯ ಮೂಲಕ ಚಲನ ಚಿತ್ರಗಳ ನಿರ್ಮಾಣ, ನಿರ್ದೇಶನದ ಜೊತೆಗೆ 24 ಚಲನ ಚಿತ್ರದಲ್ಲಿ ನಟನೆ, ಸಾಹಿತ್ಯ ಕೃಷಿ ಹೀಗೆ ಒಬ್ಬ ವ್ಯಕ್ತಿ ಹಲವಾರು ಕಾಯಕದಲ್ಲಿ ತೊಡಗಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಎಲ್ಲ ಕೆಲಸಗಳಿಗೂ ಸಮಯ ನೀಡಿ ಸಮಯಕ್ಕೆ ಸರಿಯಾಗಿ ಮಾಡುವುದು ಪ್ರಕಾಶ್ ಕಾರ್ಯಪ್ಪ ಅವರ ಕರ್ತವ್ಯಪ್ರಜ್ಞೆಯಾಗಿದೆ. ಇವರು ಕೊಡಗಿನಲ್ಲಿಯೇ ಅತ್ಯಧಿಕ ಚಲನಚಿತ್ರಗಳನ್ನು ನಿರ್ಮಿಸಿದ ಹಾಗೂ ನಿರ್ದೇಶಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪ್ರಕಾಶ್ ಕಾರ್ಯಪ್ಪ ಅವರ “ಶೇಷತೆ ಎಂದರೆ ಕೊಡವ ಭಾಷೆಯ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸುವುದರ ಜೊತೆಗೆ ಕನ್ನಡದ ಕಥೆ, ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಅವುಗಳಲ್ಲಿ ‘ಬಾಕೆಮನೆ’, ‘ಕೊಡಗ್‍ರ ಸಿಪಾಯಿ’, ‘ಸ್ಮಶಾನ ಮೌನ’, ‘ನಾಡ ಪೆದ ಆಶಾ’ ‘ಮೇಷ್ಟ್ರು ದೇವ್ರು”, ‘ಪರ್ಜನಿಯ’ ‘ಪೊಮ್ಮಲೆ ಕೊಡಗ್’ ‘ಅಂತರ್ ಮುಖ’, ಅಬ್ದುಲ್ಲಾ ಪಾಲುದಾರರು, ‘ಸತ್ತ ಸೂತಕದ ಸುತ್ತ’, ಬೇರ್, ‘ಕಂಗಾತ ಮೂಡ್’ ಚಲನಚಿತ್ರಗಳು ಪ್ರಮುಖವಾಗಿವೆ. ಇವರು ಬರೆದ ‘ಸತ್ತ ಸೂತಕದ ಸುತ್ತ’ ಮತ್ತು ‘ವಿಧೀರ ಕಳಿಲ್’ (ಪೊಮ್ಮಾಲೆ ಕೊಡಗ್), ‘ಕಾಂಗತ ಮೂಡ್’, ‘ಬೇರ್’ (The Root) ಕಾದಂಬರಿಗಳಾಗಿ ಚಲನಚಿತ್ರವಾಗಿ ತೆರೆ ಕಂಡಿದೆ. ಬಾಕೆಮನೆ, ಕೊಡಗ್‍ರ ಸಿಪಾಯಿ, ಸ್ಮಶಾನಮೌನ, ದೀಕ್ಷ, ನಾಡ ಪೆದ ಆಶಾ, ಸತ್ತ ಸೂತಕದ ಸುತ್ತ ಮತ್ತು ಪೊಮ್ಮಾಲೆ ಕೊಡಗ್, ಕಂದಿಲು (ಪಾಲುಗಾರ ನಿರ್ಮಾಪಕರು) ಚಲನಚಿತ್ರಗಳು ಅಂತಾರ್ಟ್ರಾಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು ಅಪಾರ ಜನಮನ್ನಣೆಗಳಿಸಿವೆ. ‘ಆಶ್ರಯದಾಮ’ ಕ್ಕೆ ಅತ್ಯುತ್ತಮ ಮಕ್ಕಳ ಚಿತ್ರ 2017 ಪ್ರಶಸ್ತಿ ಲಭಿಸಿದೆ. ಸಾಹಿತ್ಯ ಮತ್ತು ಚಲನಚಿತ್ರ ಮಾಧ್ಯಮ ಬೇರೆಯೇ ಪ್ರಾಕಾರಗಳು ಆದರೂ, ಅವೆರಡನ್ನು ಒಂದಾಗಿಸಿ ನಮ್ಮ ನಾಡು ನುಡಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಪರಿಚುಸುವ ಉದ್ದೇಶದಿಂದ ಸದಾ ಒಂದಿಲ್ಲೊಂದು ಕಾಯಕದಲ್ಲಿ ತೊಡಗಿರುವ ಪ್ರಕಾಶ್ ಕಾರ್ಯಪ್ಪ ಅವರ ಹತ್ತು ಪುಸ್ತಕಗಳು ಈಗಾಗಲೇ ಪ್ರಕಟವಾಗಿವೆ. ‘ಗಮ್ಯ ಹನ್ನೊಂದನೇ ಕೃತಿಯಾಗಿದೆ.
ಕೊಡವ ಮಕ್ಕಡ ಕೂಟದ ಕೃತಿ ಪ್ರಕಾಶನದ ಸಾಧನೆ :: ಕೊಡವ ಮಕ್ಕಡ ಕೂಟ ಪ್ರಕಟಿಸಿರುವ 105 ಪುಸ್ತಕಗಳಲ್ಲಿ ನಾಲ್ಕು ಪುಸ್ತಕಗಳಿಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು, ಚಿಗುರೆಲೆಗಳು ಪುಸ್ತಕಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ. ನಾಲ್ಕು ಪುಸ್ತಕಗಳು ಕೊಡವ ಸಿನಿಮಾವಾಗಿದೆ. ಈಗಾಗಲೇ ಮಹತ್ವಾಕಾಂಕ್ಷೆಯ 100ನೇ ಪುಸ್ತಕವನ್ನು ಅದ್ದೂರಿಯಾಗಿ ಸಮರ್ಪಿಸಲಾಗಿದ್ದು, ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಕೊಡವರು ಹಾಗೂ ಕಾವೇರಿ, ಮಾವೀರ ಅಚ್ಚುನಾಯಕ, ಕೊಡಗಿನ ಗಾಂಧಿ ಪಂದ್ಯಂಡ ಐ.ಬೆಳ್ಯಪ್ಪ, 1965ರ ಯುದ್ಧ ಹಾಗೂ ಕೊಡಗಿನ ಮಹಾವೀರ, ಆಟ್‍ಪಾಟ್ ಪಡಿಪು (ನಾಲ್ಕು ಸಾವಿರ ಪುಸ್ತಕವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗಿದೆ.), ಕೊಡವ ಕ್ರೀಡಾ ಕಲಿಗಳು, Kodagu Principality V/s British Emipire, The Major who kept his cool, ಪುಣ್ಯಕ್ಷೇತ್ರ ಪರಿಚಯ ಸೇರಿದಂತೆ ಹಲವು ದಾಖಲೀಕರಣ ಪುಸ್ತಕ, ಸಾಧಕರ ವಿವರದ ಪುಸ್ತಕ ಕೊಡಗಿನ ಹಾಗೂ ಕೊಡವ ಆಚಾರ, ವಿಚಾರ ಸಂಬಂಧಪಟ್ಟಂತ ಪುಸ್ತಕ, ಕೊಡಗಿನ ಎರಡು ಮಹಾವೀರ ಚಕ್ರ ಪುರಸ್ಕೃತ ವೀರ ಯೋಧರ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲಾಗಿದೆ. ಕೊಡವ ಸಾಂಸ್ಕೃತಿಯ ಬಗ್ಗೆ ಯುವಕರಲ್ಲಿ ಜಾಗೃತಿ ಹಾಗೂ ಆಸಕ್ತಿಯನ್ನು ನಿರಂತರವಾಗಿ ಮೂಡಿಸುತ್ತಾ ಸ್ತುತ್ಯಾರ್ಹವಾದ ಕಾರ್ಯವನ್ನು ಮಾಡಿಕೊಂಡು ಬರುತ್ತಿದ್ದು, ಮಕ್ಕಳು ಸಂಸ್ಕೃತಿಯಿಂದ ದೂರವಾಗುತ್ತಿದ್ದಾರೆ ಎನ್ನುವ ಹಿರಿಯರ ಟೀಕೆಯನ್ನು ದೂರ ಮಾಡಿ ಹಿರಿಯರೇ ಅಚ್ಚರಿ ಪಡುವಂತ ಕಾರ್ಯಕ್ರಮಗಳನ್ನು ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದೆ. ಹಲವು ಕಡೆಗಳಲ್ಲಿ ಕೊಡವ ಜಾನಪದ ಕಲಾ ಪ್ರಕರಗಳು ತರಬೇತಿ ಕಾರ್ಯಕ್ರಮವನ್ನು ನಡೆಸಿ, ಯುವ ಜನರಿಗೆ ಕಲಿಸುತ್ತಾ ಬರುತ್ತಿರುವ ಕೊಡವ ಮಕ್ಕಡ ಕೂಟವು ಎಲ್ಲಾ ಕಾರ್ಯಕ್ರಮಗಳಲ್ಲಿ ದಕ್ಷಿಣ ಭಾರತದ ಮೊದಲ ಜಾನಪದ ಕೃತಿಯಾಗಿರುವ “ಪಟ್ಟೋಲೆ ಪಳಮೆ”ಯನ್ನು ಹಂಚುತ್ತಿದೆ. ಆ ಮೂಲಕ ಕೊಡವ ಸಂಸ್ಕೃತಿಯ ಬೆಳವಣಿಗೆಗೂ ಕಾರಣವಾಗಿದೆ. ಮರೆತು ಹೋಗಿದ್ದ ಹಿರಿಯರನ್ನು ನೆನಪು ಮಾಡಿಕೊಡುವುದು, ಅವರ ಹುಟ್ಟು ಹಬ್ಬ ಆಚರಿಸುವುದು, ಅವರ ಪ್ರತಿಮೆಗಳನ್ನು ಅನಾವರಣಗೊಳಿಸುವುದು ಸೇರಿದಂತೆ ಹಿರಿದಾದ ಕಾರ್ಯವನ್ನು ಹಮ್ಮಿಕೊಂಡಿರುವುದು ಪ್ರಶಂಸೆಗೆ ಪಾತ್ರವಾಗಿದೆ. ಮಡಿಕೇರಿಯ ಹಲವು ರಸ್ತೆಗಳಿಗೆ ಕೊಂಗಂಡ ಗಣಪತಿ, ಹರಿದಾಸ ಅಪ್ಪನೆರವಂಡ ಅಪ್ಪಚ್ಚಕವಿ, ಕೊರವಂಡ ನಂಜಪ್ಪ, ಪಂದ್ಯಂಡ ಬೆಳ್ಯಪ್ಪ ಅವರ ಹೆಸರುಗಳನ್ನು ಮರು ನಾಮಕರಣ ಮಾಡಲಾಗಿದೆ. 4,000 ಆಟ್‍ಪಾಟ್ ಪಡಿಪು ಪುಸ್ತಕವನ್ನು ಮುದ್ರಿಸಿ ಉಚಿತವಾಗಿ ಶಾಲಾ ಕಾಲೇಜು ಸೇರಿದಂತೆ ಹಲವು ಮಕ್ಕಳಿಗೆ ನೀಡಲಾಗಿದೆ. ಕೊಡವ ಸಾಧಕ ಯುವಕ-ಯುವತಿಯರನ್ನು ಸೇರಿದಂತೆ ಹಲವು ಸಾಧಕರನ್ನು ಸನ್ಮಾನಿಸಿ, ಗೌರವಿಸಿದೆ. ಕೊಡವ ಮಕ್ಕಡ ಕೂಟದ ನಿರಂತರ ಪ್ರಯತ್ನದಿಂದ ಮಡಿಕೇರಿಯ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ವೃತ್ತದಲ್ಲಿ “ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ” ಅವರ ವೃತ್ತವನ್ನ ನಿರ್ಮಿಸಿ, ಅದೇ ಜಾಗದಲ್ಲಿ ಅಜ್ಜಮಾಡ ಕುಟುಂಬಸ್ಥರ ಸಹಕಾರದೊಂದಿಗೆ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸುವ ಮೂಲಕ ಅವರ ನೆನಪನ್ನು ಚಿರಾಯುವಾಗಿಸಿರುವ ಹೆಗ್ಗಳಿಗೆ ಕೊಡವ ಮಕ್ಕಡ ಕೂಟಕ್ಕಿದೆ. ಅಲ್ಲದೇ ಕಳೆದ 11 ವರ್ಷಗಳಿಂದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ (ಮಹಾವೀರ ಚಕ್ರ ಪುರಸ್ಕೃತ) ಇವರ ಸ್ಮರಣೆ ದಿನದ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ.