ಕಣಿವೆ ಡಿ.23 NEWS DESK : ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನದ ಬೇಸಾಯ ಪದ್ದತಿಯನ್ನು ಅಳವಡಿಸುವ ಮೂಲಕ ಆರ್ಥಿಕವಾಗಿ ಸದೃಢರಾಗಬೇಕು. ಜೊತೆಗೆ ಯುವಜನತೆಯನ್ನು ಕೃಷಿಯತ್ತ ಆಕರ್ಷಿಸಬೇಕೆಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ.ದೇವಗಿರಿ ಕರೆ ನೀಡಿದರು. ಕುಶಾಲನಗರ ತಾಲ್ಲೂಕಿನ ಚಿಕ್ಕನಾಯಕನ ಹೊಸಳ್ಳಿ ಗ್ರಾಮದಲ್ಲಿ ಕೃಷಿ ಇಲಾಖೆಯ ವತಿಯಿಂದ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ರೈತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ರೈತರು ಕೇವಲ ಭತ್ತ, ಜೋಳದಂತಹ ಬೆಳೆಗಳಿಗೆ ಸೀಮಿತವಾಗದೇ ಸಮಗ್ರ ಬೆಳೆಗಳತ್ತ ಮುಂದಾಗಬೇಕು. ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯಡಿ ರೈತರಿಗೆ ಅರಣ್ಯ ಇಲಾಖೆಯಿಂದ ಸಾಕಷ್ಟು ಪ್ರಯೋಜನಗಳಿದ್ದು, ಈ ಯೋಜನೆಗಳ ಬಗ್ಗೆ ರೈತರಿಗೆ ಅರಿವಿಲ್ಲ. ಅತ್ತ ಅರಣ್ಯ ಇಲಾಖೆಯೂ ರೈತರ ಮನೆ ಬಾಗಿಲತ್ತ ತೆರಳಿ ಯೋಜನೆಗಳ ಮಾಹಿತಿಗಳಾಗಲೀ, ಅನುಕೂಲಗಳನ್ನಾಗಲೀ ಒದಗಿಸುತ್ತಿಲ್ಲ ಎಂದು ಡಾ.ದೇವಗಿರಿ ವಿಷಾದಿಸಿದರು. ಕೃಷಿ ಅರಣ್ಯದಲ್ಲಿ ರೈತರಿಗೆ ಸಾಕಷ್ಟು ಪ್ರಯೋಜನಗಳಿದ್ದು, ಹೆಚ್ಚು ಲಾಭದಾಯಕವಾದ ಕೃಷಿಯಾಗಿದೆ. ಜೊತೆಗೆ ಭೂಮಿಯ ಫಲವತ್ತತೆಯೂ ಹೆಚ್ಚುತ್ತದೆ ಎಂದು ಅವರು ಮಾಹಿತಿ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಕೃಷಿ ಇಲಾಖೆ ಉಪನಿರ್ದೇಶಕ ಡಾ.ಸೋಮಶೇಖರ್, ರೈತ ಚಳುವಳಿ ಮೂಲಕ ರೈತರ ಒಳಿತಿಗಾಗಿಯೇ ತಮ್ಮ ಹೋರಾಟ ಹಾಗೂ ಜೀವನವನ್ನು ಮುಡಿಪಾಗಿಟ್ಟ ಮಾಜಿ ಪ್ರಧಾನಿ ಚರಣ್ ಸಿಂಗ್ ಅವರ ಸ್ಮರಣೆಗಾಗಿ ರೈತ ದಿನವಾಗಿ ಆಚರಿಸುತ್ತಿರುವ ಬಗ್ಗೆ ಮಾಹಿತಿ ನೀಡಿದ ಅವರು, ಇತ್ತೀಚಿನ ದಿನಗಳಲ್ಲಿ ಕಾರ್ಮಿಕರ ಕೊರತೆಯಿಂದಾಗಿ ಭತ್ತದ ಕೃಷಿ ಕ್ಷೀಣಿಸುತ್ತಿದೆ. ದೇಶದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಪೂರೈಕೆ ಮಾಡುವ ಸಲುವಾಗಿ ಭತ್ತದ ಬೆಳೆ ಕ್ಷೀಣಿಸಲು ರೈತರು ಬಿಡಬಾರದು. ಜೊತೆಗೆ ರೈತರು ಸುಸ್ಥಿರ ಕೃಷಿಗೆ ಮುಂದಾಗುವ ಮೂಲಕ ಆರ್ಥಿಕ ಸ್ವಾವಲಂಬನೆ ಹೊಂದಲು ಡಾ.ಸೋಮಶೇಖರ್ ಕರೆ ನೀಡಿದರು. ಕೃಷಿ ವಿವಿ ವಿಸ್ತರಣಾ ಘಟಕದ ಮುಖ್ಯಸ್ಥ ಡಾ.ಆರ್.ಎನ್.ಕೆಂಚರೆಡ್ಡಿ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಭತ್ತದ ಕೃಷಿ ಹಾಗೂ ವಿವಿಧ ಬೆಳೆಗಳ ಕುರಿತು ಕೃಷಿ ವಿಜ್ಞಾನಿಗಳಾದ ಡಾ.ಬಸವಲಿಂಗಯ್ಯ ಹಾಗೂ ಡಾ.ದೇವರಾಜು ರೈತರಿಗೆ ಮಾಹಿತಿ ನೀಡಿದರು. ರೈತ ಉತ್ಪಾದಕ ಸಂಸ್ಥೆಯ ಅಧ್ಯಕ್ಷರಾದ ದೇವರಾಜು, ಪ್ರಗತಿಪರ ಕೃಷಿಕರಾದ ಮರೂರು ಗ್ರಾಮದ ಹೆಚ್.ವಿ.ಶಿವರುದ್ರಪ್ಪ, ಟಿ.ಜೆ.ಶೇಷಪ್ಪ, ಮಣಜೂರು ಗ್ರಾಮದ ಗುರುಲಿಂಗಪ್ಪ, ಟಿ.ಕೆ.ಪಾಂಡುರಂಗ, ಟಿ.ಬಿ.ಜಗದೀಶ್, ಎನ್.ಎಸ್.ರಮೇಶ್, ತೊರೆನೂರು ಗ್ರಾಪಂ ಉಪಾಧ್ಯಕ್ಷೆ ರೂಪಮಹೇಶ್, ಕೃಷಿ ಇಲಾಖೆ ತಾಂತ್ರಿಕ ವ್ಯವಸ್ಥಾಪಕರಾದ ಶಾರದಾ, ಸುಪರ್ಣಾ ಇದ್ದರು. ತೊರೆನೂರು ಗ್ರಾಪಂ ಮಾಜಿ ಅಧ್ಯಕ್ಷ ಟಿ.ಕೆ.ವಸಂತ್ ಸ್ವಾಗತಿಸಿದರು. ಕೃಷಿ ಇಲಾಖೆಯ ಮೈಥಿಲಿ ನಿರೂಪಿಸಿದರು. ಅರ್ಪಿತ ವಂದಿಸಿದರು. ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಗುರುತಿಸಿ ಗೌರವಿಸಲಾಯಿತು.