ಮಡಿಕೇರಿ ಡಿ.25 NEWS DESK : ಇತಿಹಾಸ ಪ್ರಸಿದ್ಧ ಕಕ್ಕಬ್ಬೆಯ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯಕ್ಕೆ ಕೊಡಗು-ಮೈಸೂರು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದ ನೂತನ ಪ್ರವೇಶದ್ವಾರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನ ಕುಲದೇವರಾದ ಮಳೆದೇವರು ಎಂದೇ ಪ್ರಸಿದ್ಧಿ ಪಡೆದಿರುವ ಶ್ರೀ ಇಗ್ಗುತ್ತಪ್ಪ ದೇವರ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ನೂತನ ಪ್ರವೇಶದ್ವಾರ ಸಹಕಾರಿಯಾಗಲಿದೆ. ಪುರಾತನ ಕಾಲದಿಂದಲೂ ಪ್ರಸಿದ್ಧಿ ಪಡೆದಿರುವ ಪಾಡಿ ಶ್ರೀ ಇಗ್ಗುತ್ತಪ್ಪ ದೇವಾಲಯ ಅಭಿವೃದ್ಧಿಗೊಳ್ಳುತ್ತಿರುವುದು ಸಂತಸದ ವಿಷಯ, ಈ ದೇವಾಲಯವು ಇನ್ನೂ ಹೆಚ್ಚಿನ ಕಾಯಕಲ್ಪ ಪಡೆಯುವುದರ ಮೂಲಕ ಭಕ್ತಾದಿಗಳಿಗೆ ಸದುಪಯೋಗವಾಗಲಿ ಎಂದು ಹೇಳಿದರು. ಜೊತೆಗೆ ಶ್ರೀ ಪಾಡಿ ಇಗ್ಗುತ್ತಪ್ಪ ದೇವರ ಆಶೀರ್ವಾದ ನಾಡಿನ ಸಮಸ್ತ ಜನರ ಮೇಲೆ ಇರುವುದರೊಂದಿಗೆ ನಾಡು ಸುಭಿಕ್ಷವಾಗಿರಲಿ ಎಂದು ಹಾರೈಸಿದರು. ಇದೇ ಸಂದರ್ಭ ದೇವಾಲಯ ಸಮಿತಿ ವತಿಯಿಂದ ಸಂಸದರನ್ನು ಸನ್ಮಾನಿಸಿ, ಗೌರವಿಸಲಾಯಿತು. ವಿಧಾನ ಪರಿಷತ್ ಸದಸ್ಯ ಸುಜ ಕುಶಾಲಪ್ಪ, ಮುಖಂಡರುಗಳು, ಆಡಳಿತ ಮಂಡಳಿ ಸಮಿತಿಯವರು, ಭಕ್ತಾದಿಗಳು ಉಪಸ್ಥಿತರಿದ್ದರು.