ಮಡಿಕೇರಿ ಡಿ.26 NEWS DESK : ಕೊಡಗು ಗೌಡ ವಿದ್ಯಾ ಸಂಘ ಹಾಗೂ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸಹಯೋಗದಲ್ಲಿ ಡಿ.29 ರಂದು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಲಿದೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ಲು ನವೀನ್ ನಗರದ ಕೊಡಗು ಗೌಡ ಸಮಾಜದಲ್ಲಿ ಬೆಳಿಗ್ಗೆ 10 ಗಂಟೆಗೆ ತಮ್ಮ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಉದ್ಘಾಟಿಸಲಿದ್ದಾರೆ ಎಂದರು. ಮುಖ್ಯ ಅತಿಥಿಗಳಾಗಿ ಸೋಮವಾರಪೇಟೆ ಸಾಂದೀಪನಿ ಪ್ರೌಢಶಾಲೆಯ ಅಧ್ಯಕ್ಷ ಹಾಗೂ ಜಿ.ಪಂ ಮಾಜಿ ಸದಸ್ಯ ಮೂಡಗದ್ದೆ ದಾಮೋದರ, ಅತಿಥಿಗಳಾಗಿ ವಿದ್ಯಾನಿಧಿಯ ದಾನಿಗಳಾದ ಕಾಫಿ ಬೆಳೆಗಾರ ಅಚ್ಚುಡ ಅನಂತ ಕುಮಾರ್, ತಳೂರು ಮುತ್ತಮ್ಮ ರಾಜಗೋಪಾಲ, ಮದೆನಾಡು ನಿವೃತ್ತ ಮುಖ್ಯೋಪಾಧ್ಯಾಯ ಬಾರಿಯಂಡ ಜೋಯಪ್ಪ ಹಾಗೂ ಕಾಫಿ ಮಂಡಳಿಯ ನಿವೃತ್ತ ಸಂಪರ್ಕಾಧಿಕಾರಿ ಬಾರಿಕೆ ಎನ್.ಅಯ್ಯಪ್ಪ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಕೊಡಗು ಗೌಡ ವಿದ್ಯಾ ಸಂಘ ಕಳೆದ 50 ವರ್ಷಗಳಿಂದ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಇದೇ ಮೊದಲ ಬಾರಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸಹಯೋಗವನ್ನು ಪಡೆಯಲಾಗಿದೆ. ಹತ್ತನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಶೇ.80 ಕ್ಕಿಂತ ಹೆಚ್ಚು ಮತ್ತು ಆಂಗ್ಲ ಮಾಧ್ಯಮದಲ್ಲಿ ಶೇ.90 ಕ್ಕಿಂತ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಪ್ರೋತ್ಸಾಹಿಸಲಾಗುವುದು. ಪಿಯುಸಿ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ ನೀಡಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಅರೆಭಾಷೆ ಬಂಧುಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ವಿವರಿಸಿದರು.
ಗೌಡ ಸಮುದಾಯದ ಶೈಕ್ಷಣಿಕ ಪ್ರಗತಿಗಾಗಿ 1908 ರಲ್ಲಿ ರಚನೆಗೊಂಡ ಕೊಡಗು ಗೌಡ ವಿದ್ಯಾ ಸಂಘ ಇದೀಗ 117 ನೇ ವರ್ಷದ ಸಂಭ್ರಮದಲ್ಲಿದೆ. ವಿದ್ಯಾ ಸಂಘದ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳುತ್ತಿದ್ದು, ಇದರಲ್ಲಿ ವಿವಾಹ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಸಭಾಂಗಣ, ವಿದ್ಯಾರ್ಥಿಗಳಿಗಾಗಿ ತರಗತಿಗಳು, ಕೋಚಿಂಗ್ ಸೆಂಟರ್, ಗ್ರಂಥಾಲಯ ಮತ್ತು ವಿಶಾಲ ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಕಟ್ಟಡದ ಯೋಜನೆಯನ್ನು ಪೂರ್ಣಗೊಳಿಸಲು ದಾನಿಗಳು ಕೈಜೋಡಿಸಬೇಕೆಂದು ಅಂಬೆಕಲ್ಲು ನವೀನ್ ಮನವಿ ಮಾಡಿದರು. ವಿದ್ಯಾ ಸಂಘದ ಉಪಾಧ್ಯಕ್ಷ ಅಮೆ ಸಿ.ಸೀತಾರಾಮ್ ಮಾತನಾಡಿ ಪ್ರತಿ ವರ್ಷ ವಿದ್ಯಾ ಸಂಘ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದು, ಭಾನುವಾರ ನಡೆಯುವ ಸಮಾರಂಭದಲ್ಲಿ ಅರೆಭಾಷೆ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ತಿಳಿಸಿದರು. ಕಾರ್ಯದರ್ಶಿ ಪೇರಿಯನ ಕೆ.ಉದಯಕುಮಾರ್ ಮಾತನಾಡಿ ವಿದ್ಯಾ ಸಂಘದ ನೂತನ ಕಟ್ಟಡ 2 ಕೋಟಿ ರೂ.ಗಳಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಕಾಮಗಾರಿ ಭರದಿಂದ ಸಾಗಿದೆ. ದಾನಿಗಳು ಸಹಕಾರ ನೀಡಿದರೆ ನಿಗಧಿಯಂತೆ 2025 ಮಾರ್ಚ್ ತಿಂಗಳಿನಲ್ಲಿ ಕಟ್ಟಡ ಉದ್ಘಾಟನೆಗೊಳ್ಳಲಿದೆ ಎಂದರು. ನಿರ್ದೇಶಕರಾದ ಪುದಿಯನೆರವನ ರೇವತಿ ರಮೇಶ್ ಮಾತನಾಡಿ 117 ವರ್ಷಗಳ ಇತಿಹಾಸ ಹೊಂದಿರುವ ಕೊಡಗು ಗೌಡ ವಿದ್ಯಾ ಸಂಘ ಅರೆಭಾಷೆ ಸಂಸ್ಕೃತಿ, ಆಚಾರ, ವಿಚಾರ, ಸಂಪ್ರದಾಯವನ್ನು ಉಳಿಸಿ ಬೆಳೆಸಲು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬಂದಿದೆ. ಸಮಾಜದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುತ್ತಾ ಬಂದಿದ್ದು, ಸಂಘ ನಡೆಸುವ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳು ಪಾಲ್ಗೊಳ್ಳಬೇಕೆಂದು ಕರೆ ನೀಡಿದರು. ಮತ್ತೊಬ್ಬ ನಿರ್ದೇಶಕರಾದ ಚೊಕ್ಕಾಡಿ ಎನ್.ಅಪ್ಪಯ್ಯ ಅವರು ಮಾತನಾಡಿ ಇತ್ತೀಚೆಗೆ ನಡೆದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಬಹುಮಾನ ವಿತರಿಸಲಾಗುವುದು. ವಿದ್ಯಾ ಸಂಘ ಗ್ರಾಮೀಣ ಪ್ರತಿಭೆಗಳಿಗೆ ಹೆಚ್ಚು ಪ್ರೋತ್ಸಾಹ ನೀಡುತ್ತಾ ಬಂದಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಖಜಾಂಚಿ ಕಾಳೇರಮ್ಮನ ಲತಾ ನಂದಕುಮಾರ್ ಉಪಸ್ಥಿತರಿದ್ದರು.