ವಿರಾಜಪೇಟೆ ಡಿ.26 NEWS DESK : ಕ್ರಿಸ್‍ಮಸ್ ಹಬ್ಬದ ಪ್ರಯುಕ್ತ ನಗರದ ಯುವಕರೊಬ್ಬರು ಕಳೆದ ಹಲವು ವರ್ಷಗಳಿಂದ ಯೇಸು ಕ್ರಿಸ್ತರ ಬದುಕಿನ ವಿವಿಧ ಹಂತಗಳನ್ನು ಪ್ರತಿಬಿಂಬಿಸುವ ‘ಗೋದಲಿ’ ನಿರ್ಮಿಸಿ ಗಮನ ಸೆಳೆಯುತ್ತಿದ್ದಾರೆ. ನಗರದ ವಿಜಯ ನಗರದ ನಿವಾಸಿ ಜೇಮ್ಸ್ ಸಲ್ಡಾನ ಮತ್ತು ಪೌಲಿನಿ ಸಲ್ಡಾನ ಅವರ ಪುತ್ರ 32ರ ಪ್ರಾಯದ ಡೇನಿಯಲ್ ಸಲ್ಡಾನ ವೈಶಿಷ್ಟ್ಯಪೂರ್ಣವಾದ ಗೋದಲಿಗಳನ್ನು ನಿರ್ಮಿಸುವ ಮೂಲಕ ಪ್ರಸಿದ್ಧರಾಗಿದ್ದಾರೆ. ಪ್ರಭು ಯೇಸು ಕ್ರಿಸ್ತರ ಜಯಂತಿ ಅಂಗವಾಗಿ ಗೋದಲಿ ನಿರ್ಮಾಣ ಮಾಡುವುದು ಕ್ರೈಸ್ತ ಬಾಂಧವರಿಗೊಂದು ಸಂಭ್ರಮದ ವಿಚಾರ. ಯೇಸು ಕ್ರಿಸ್ತರ ಜನನವನ್ನು ಆತ್ಮೀಯವಾಗಿ, ಸಂತೋಷದಿಂದ ಕಾಣುವುದು ಹಬ್ಬದ ಪ್ರತೀಕವಾಗಿದೆ ಎಂದು ಡೇನಿಯಲ್ ಅವರು ಹೇಳುತ್ತಾರೆ. ಗೋದಲಿ ನಿರ್ಮಾಣದ ಬಗ್ಗೆ ಮಾತನಾಡಿದ ಡೇನಿಯಲ್, ಯೇಸು ಸ್ವಾಮಿಯ ಜನನವು ಬೇತ್ಲೆಹ್ಯಾಂನ ಹಳ್ಳಿಯೊಂದರಲ್ಲಿ ನಡೆಯಿತು. ಈ ಅಂಶವನ್ನು ಆಧರಿಸಿ ಜಯಂತಿಯ ಹತ್ತು ದಿನಗಳಿಗಿಂತ ಮುಂಚಿತವಾಗಿ ಕಾಲ್ಪನಿಕ ರೇಖಾ ಚಿತ್ರಗಳನ್ನು ಬರೆದು ಮಂಗಳೂರಿನಿಂದ ತಂದಿರುವ ಬೊಂಬೆಗಳನ್ನು ಸ್ಥಳಕ್ಕೆ ಅನುಗುಣವಾಗಿ ಪ್ರತಿಷ್ಠಾಪಿಸಲಾಗಿದೆ. ಕ್ರಿಸ್‍ಮಸ್‍ನ ಮೂರು ದಿನಗಳ ಬಳಿಕ ಗೋದಲಿಯನ್ನು ತೆಗೆಯಲಾಗುತ್ತದೆಂದು ತಿಳಿಸಿದರು.
ವರದಿ : ಕಿಶೋರ್ ಕುಮಾರ್ ಶೆಟ್ಟಿ