ಮಡಿಕೇರಿ ಡಿ.26 NEWS DESK : ಔಷಧಿಗಳನ್ನು ಮನೆ ಬಾಗಲಿಗೆ ತಲುಪಿಸಲು ಕೋವಿಡ್ ಸಂದರ್ಭ ನೀಡಲಾಗಿದ್ದ ವಿಶೇಷ ಅನುಮತಿ ದುರುಪಯೋಗವಾಗುತ್ತಿರುವುದರಿಂದ ತಕ್ಷಣ ಈ ಅನುಮತಿಯನ್ನು ಹಿಂಪಡೆಯಬೇಕೆಂದು ಕೊಡಗು ಜಿಲ್ಲಾ ಔಷಧ ವ್ಯಾಪಾರಿಗಳ ಸಂಘ ಆರೋಗ್ಯ ಇಲಾಖೆಯನ್ನು ಒತ್ತಾಯಿಸಿದೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎ.ಕೆ.ಜೀವನ್ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಕಾರ್ಯದರ್ಶಿಗಳಿಗೆ ಮೂರನೇ ಬಾರಿಗೆ ಪತ್ರ ಬರೆದು ಅನುಮತಿಯನ್ನು ರದ್ದುಪಡಿಸಬೇಕೆಂದು ಕೋರಿಕಂಡಿದ್ದೇವೆ ಎಂದು ತಿಳಿಸಿದ್ದಾರೆ. ಅಕ್ರಮ ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳಿಂದ ವಿಶೇಷ ಅನುಮತಿಯ ನಿಯಮ ದುರುಪಯೋಗವಾಗುತ್ತಿದ್ದು, ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. 2020 ಮಾರ್ಚ್ ತಿಂಗಳಿನಲ್ಲಿ ಕೆಲವು ಷರತ್ತುಗಳೊಂದಿಗೆ ಮನೆ ಬಾಗಿಲಿಗೆ ಔಷಧಿಗಳ ಪೂರೈಕೆಯನ್ನು ಅನುಮತಿಸಲಾಗಿದೆ. ತುರ್ತು ಸಂದರ್ಭಗಳಲ್ಲಿ ಔಷಧಿಗಳನ್ನು ತಲುಪಿಸುವುದು ಈ ಅಧಿಸೂಚನೆಯ ಮುಖ್ಯ ಉದ್ದೇಶವಾಗಿದೆ. ಆದರೆ ಪ್ರಸ್ತುತ ಡಿಜಿಟಲ್ ಪ್ಲಾಟ್‍ಫಾರ್ಮ್‍ಗಳು ಅಗತ್ಯ ನಿಯಂತ್ರಣವನ್ನು ಅನುಸರಿಸದೆ ಔಷಧಿಗಳನ್ನು ಮನೆಗೆ ತಲುಪಿಸುತ್ತಿವೆ. ವೈದ್ಯರ ಚೀಟಿ ಇಲ್ಲದೆ ಔಷಧಿಗಳನ್ನು ಮಾರಾಟ ಮಾಡುತ್ತಿದ್ದು, ಸ್ವಯಂ-ಔಷಧಿ, ಮಾದಕ ವ್ಯಸನ ಮತ್ತು ಆಂಟಿಮೈಕ್ರೊಬಿಯಲ್ ಪ್ರತಿರೋಧದಂತಹ ಗಂಭೀರ ಸಮಸ್ಯೆಗಳು ಹೆಚ್ಚಿಸುತ್ತಿದೆ. ಇಂತಹ ಕಾನೂನುಬಾಹಿರ ವ್ಯವಹಾರ ಸಂಸ್ಥೆಗಳು ರೋಗಿಗಳ ಸುರಕ್ಷತೆಯನ್ನು ಕಡೆಗಣಿಸಿ ತಮ್ಮ ಲಾಭದತ್ತ ಮಾತ್ರ ಗಮನಹರಿಸುತ್ತಿವೆ. ಆನ್‍ಲೈನ್ ಪ್ಲಾಟ್‍ಫಾರ್ಮ್‍ಗಳು ತಮ್ಮ ಅನುಕೂಲಕ್ಕಾಗಿ ಔಷಧ ವಿತರಣೆಯ ನಿಯಮಗಳನ್ನು ನಿರ್ಲಕ್ಷಿಸುತ್ತಿವೆ, ಇದು ಸಾರ್ವಜನಿಕರ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಎ.ಕೆ.ಜೀವನ್ ಪತ್ರದ ಮೂಲಕ ಆರೋಗ್ಯ ಇಲಾಖೆಯ ಗಮನ ಸೆಳೆದಿದ್ದಾರೆ.
::: ಬೇಡಿಕೆಗಳು :::
ಕೋವಿಡ್ ಸಾಂಕ್ರಾಮಿಕ ರೋಗದ ತುರ್ತು ಹಂತವು ಈಗ ಅಸ್ತಿತ್ವದಲ್ಲಿಲ್ಲ ಮತ್ತು ಸಾಮಾನ್ಯ ಸ್ಥಿತಿಗೆ ಮರಳಿದೆ. ಆದ್ದರಿಂದ 2020ರ ಅಧಿಸೂಚನೆಯು ಇನ್ನು ಮುಂದೆ ಪ್ರಸ್ತುತವಾಗುವುದಿಲ್ಲ. ಆದ್ದರಿಂದ ತಕ್ಷಣ ಅಧಿಸೂಚನೆಯನ್ನು ಹಿಂಪಡೆಯಬೇಕು. ಔಷಧಿಗಳ ಮಾರಾಟ ಹಾಗೂ ವಿತರಣೆಗಾಗಿ ಪ್ರಿಸ್ಕ್ರಿಪ್ಷನ್ ಮತ್ತು ಇತರ ಸುರಕ್ಷತಾ ನಿಯಮಗಳಿಗೆ ಕಟ್ಟುನಿಟ್ಟಾದ ಅನುಸರಣೆಯನ್ನು ಖಚಿತಪಡಿಸಿಕೊಳ್ಳಬೇಕು. ದೇಶದಲ್ಲಿ ಔಷಧಗಳ ಅಕ್ರಮ ಆನ್‍ಲೈನ್ ಮಾರಾಟವನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಲ್ಲಿಸಬೇಕು, ಇದರಿಂದ ಅನಿಯಂತ್ರಿತ ಔಷಧಿಗಳ ಮಾರಾಟವನ್ನು ನಿಲ್ಲಿಸಬಹುದು. ಸಾರ್ವಜನಿಕರ ಆರೋಗ್ಯ ಮತ್ತು ಸುರಕ್ಷತೆಯ ದೃಷ್ಟಿಯಿಂದ ಸರಕಾರ ಈ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ದೇಶದ ಎಲ್ಲಾ ಔಷಧ ವ್ಯಾಪಾರಿಗಳ ಸಂಘದ 12.40 ಲಕ್ಷ ಸದಸ್ಯರು ಸೇರಿ ಬೃಹತ್ ಹೋರಾಟವನ್ನು ರೂಪಿಸಬೇಕಾಗುತ್ತದೆ ಎಂದು ಸಂಘ ಎಚ್ಚರಿಕೆ ನೀಡಿದೆ.