ಬೆಳಗಾವಿ ಡಿ.27 NEWS DESK : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಬದುಕು , ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ. ಶ್ರೇಷ್ಠ ಆರ್ಥಿಕ ತಜ್ಞರಾಗಿದ್ದ ಅವರು, 2013-18 ರವರೆಗೆ ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಬಣ್ಣಿಸಿದ್ದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಮರಿಸಿದರು. ಇಂದು ಬೆಳಗಾವಿಯಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನಿಧನಕ್ಕೆ ಸಂತಾಪ ಸೂಚಿಸಿದ ಮುಖ್ಯಮಂತ್ರಿಗಳು, ಈಗಿನ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಜನಿಸಿದ ಮನಮೋಹನ್ ಸಿಂಗ್ ರವರು ಜಗತ್ತಿನ ಖ್ಯಾತ ಅರ್ಥಶಾಸ್ತ್ರಜ್ಞರಾಗಿ ಬೆಳೆದವರು. ಪಿ.ವಿ. ನರಸಿಂಹರಾವ್ ಅವರ ಸಂಪುಟದಲ್ಲಿ ಆರ್ಥಿಕ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಉದಾರೀಕರಣದ ಮೂಲಕ ಭಾರತವನ್ನು ವಿಶ್ವಮಟ್ಟಕ್ಕೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದವರು. ಅವರ ಅಪಾರ ಜ್ಞಾನ ಹಾಗೂ ದೂರದೃಷ್ಟಿಯ ಯೋಜನೆಗಳು, ಭಾರತವು ಆರ್ಥಿಕ ಮುಗ್ಗಟ್ಟಿನಿಂದ ಹೊರಬರಲು ಕಾರಣವಾಯಿತು ಎಂದರು.
ದೇಶದ ಆರ್ಥಿಕತೆಯಲ್ಲಿ ಮನಮೋಹನ್ ಸಿಂಗ್ ರ ಹೆಜ್ಜೆಗುರುತು :: 2004 ರಲ್ಲಿ ಕಾಂಗ್ರೆಸ್ ಪಕ್ಷ ಬಹುಮತ ಸಾಧಿಸಿ, ಸೋನಿಯಾ ಗಾಂಧಿಯವರು ಪ್ರಧಾನಿಯಾಗಲು ನಿರಾಕರಿಸಿದ ಸಂದರ್ಭದಲ್ಲಿ ಮನಮೋಹನ್ ಸಿಂಗ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆಮಾಡಲಾಗುತ್ತದೆ. ಹತ್ತು ವರ್ಷಗಳ ಕಾಲ ಪ್ರಧಾನಿ ಮಂತ್ರಿಯಾಗಿ ದೇಶದ ಅಧಿಕಾರದ ಚುಕ್ಕಾಣಿಯನ್ನು ಹಿಡಿದ ಮನಮೋಹನ್ ಸಿಂಗ್ ಅವರು ದೇಶವನ್ನು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿಗೊಳಿಸಿದರು. ದೇಶ ಕಂಡ ಪ್ರಾಮಾಣಿಕ ಪ್ರಧಾನಮಂತ್ರಿಗಳಲ್ಲಿ ಒಬ್ಬರು. ರಾಜಕಾರಣದಲ್ಲಿ ಪ್ರಾಮಾಣಿಕತೆ ಕಾಣಸಿಗುವುದು ವಿರಳ. ಆದರೆ ತಮ್ಮ ಅಧಿಕಾರವಧಿಯಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿ, ದೇಶದ ಆರ್ಥಿಕತೆಯಲ್ಲಿ ತಮ್ಮ ಹೆಜ್ಜೆಗುರುತನ್ನು ಬಿಟ್ಟುಹೋಗಿದ್ದಾರೆ ಎಂದರು.
ಅವರ ನಿಧನದಿಂದ ದೇಶಕ್ಕೆ ದೊಡ್ಡ ನಷ್ಟ :: ಅವರ ಬದುಕು , ಆರ್ಥಿಕ ನೀತಿಗಳು ನಮ್ಮೆಗೆಲ್ಲ ಪ್ರೇರಣೆ ಹಾಗೂ ಸ್ಪೂರ್ತಿ ನೀಡುತ್ತಿದೆ. ದೀರ್ಘಾವಧಿಯವರೆಗೆ ಅಧಿಕಾರದಲ್ಲಿದ್ದರೂ ಅತ್ಯಂತ ಸರಳ, ವಿನಯವಂತರಾಗಿದ್ದ ಶ್ರೀಯುತರು ದೇಶದ ಗೌರವಯುತ ವ್ಯಕ್ತಿಯಾಗಿದ್ದರು. ಇಂದು ಅವರು ನಮ್ಮನ್ನು ಅಗಲಿದ್ದು, ಭಾರತಕ್ಕೆ ಆದ ದೊಡ್ಡ ನಷ್ಟ. ಅವರ ಸಾವಿನ ದು:ಖವನ್ನು ಭರಿಸುವ ಶಕ್ತಿಯನ್ನು ಕುಟುಂಬ ವರ್ಗದವರಿಗೆ, ಅಭಿಮಾನಿ ಬಳಗ ಭಗವಂತ ನೀಡಲಿ ಎಂದು ಪ್ರಾರ್ಥಿಸುವುದಾಗಿ ತಿಳಿಸಿದರು.
ಆಹಾರ ಭದ್ರತೆ ಕಾಯ್ದೆಯಡಿ ಅನ್ನಭಾಗ್ಯ ಯೋಜನೆ :: ಮನಮೋಹನ್ ಸಿಂಗ್ ದೇಶದಲ್ಲಿ ಮೊದಲ ಬಾರಿಗೆ ಆಹಾರ ಭದ್ರತೆ ಕಾಯ್ದೆಯನ್ನು ಜಾರಿಗೆ ತಂದವರು. ದೇಶದ ಬಡತನವಿದ್ದಿದ್ದರಿಂದ, ಕಡಿಮೆ ದರದಲ್ಲಿ ಆಹಾರ ಲಭಿಸುವಂತಾಗಬೇಕೆಂಬ ಸದುದ್ದೇಶದಿಂದ ಈ ಕಾನೂನನ್ನು ಜಾರಿಗೆ ತರಲಾಯಿತು. ನಂತರ ನಾನು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಪಿಎಲ್ ಕಾರ್ಡ್ದಾರರಿಗೆ ಅನ್ನಭಾಗ್ಯ ಯೋಜನೆಯಡಿ ಒಂದು ರೂ. ದರದಲ್ಲಿ ಒಂದು ಕೆಜಿ ಅಕ್ಕಿ ನೀಡುವ ಯೋಜನೆಯನ್ನು ರಾಜ್ಯದಲ್ಲಿ ಜಾರಿಗೆ ತರಲಾಯಿತು. ನಂತರದ ದಿನಗಳಲ್ಲಿ ಐದು ಕೆಜಿ ಯಿಂದ ಏಳು ಕೆಜಿಯವರೆಗೆ ಹೆಚ್ಚಿಸಿ ಅಕ್ಕಿಯನ್ನು ಉಚಿತವಾಗಿ ನೀಡಲಾಗುತ್ತಿತ್ತು. ಇಂದು ನರೇಂದ್ರ ಮೋದಿಯವರು ನೀಡುತ್ತಿರುವ ಐದು ಕೆಜಿ ಆಹಾರಧಾನ್ಯ ಹಂಚಿಕೆಯ ಯೋಜನೆ ಪ್ರಾರಂಭವಾದದ್ದು ಮನಮೋಹನ್ ಸಿಂಗ್ ಅವರ ದೂರದೃಷ್ಟಿಯಿಂದ. ದೇಶದ ಬಡವರು, ನಿರುದ್ಯೋಗಿಗಳ ಕಷ್ಟನಿವಾರಣೆಗೆ ಪೂರಕ ಯೋಜನೆಗಳನ್ನು ಜಾರಿಗೊಳಿಸಿದ್ದರು ಎಂದರು.
ಕರ್ನಾಟಕದ ಆರ್ಥಿಕ ಸ್ಥಿತಿ ಉತ್ತಮವಾಗಿದೆ ಎಂದು ಪ್ರಶಂಸೆ :: ಮನಮೋಹನ್ ಸಿಂಗ್ ರವರೊಂದಿಗಿನ ಮುಖ್ಯಮಂತ್ರಿಗಳ ಒಡನಾಟದ ಬಗ್ಗೆ ಪ್ರತಿಕ್ರಿಯೆ ನೀಡಿ, ಅವರು ಪ್ರಧಾನಿಯಾಗಿದ್ದಾಗ ಭೇಟಿ ಮಾಡಿದ್ದೂ, ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಕರ್ನಾಟಕದಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ಆಗಮಿಸಿ, ರಾಜ್ಯದ ಆರ್ಥಿಕತೆಯ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದ್ದರು ಎಂದರು.