ನಾಪೋಕ್ಲು ಡಿ.27 NEWS DESK : ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಹಬ್ಬ ಡಿ.28 ಮತ್ತು 29ರಂದು ವಿಜೃಂಭಣೆಯಿಂದ ನಡೆಯಲಿದೆ ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು. ಕೊಡವ ಸಮಾಜದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಾಪೋಕ್ಲು ಕೊಡವ ಸಮಾಜ 1997 ರಲ್ಲಿ ಸ್ಥಾಪನೆಯಾಗಿದ್ದು, 2022ಕ್ಕೆ 25 ವರ್ಷಗಳನ್ನು ಪೂರೈಸಿದೆ. ಕಾರಣಾಂತರಗಳಿಂದ ಬೆಳ್ಳಿ ಹಬ್ಬವನ್ನು ಆಚರಿಸಲು ಸಾಧ್ಯವಾಗಲಿಲ್ಲ. ಇದೀಗ ಹೊಸ ಆಡಳಿತ ಮಂಡಳಿಯು ಬೆಳ್ಳಿ ಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕಾರ್ಯ ಪ್ರವೃತ್ತವಾಗಿದೆ ಎಂದರು. ಬೆಳ್ಳಿ ಮಹೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮಾಜಿ ಮಂತ್ರಿ ಮೇರಿಯಂಡ ಸಿ.ನಾಣಯ್ಯ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಕೊಡವ ಸಮಾಜ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಕೆ. ಸುಬ್ರಮಣಿ, ಕೊಡವ ಸಮಾಜದ ಮಾಜಿ ಅಧ್ಯಕ್ಷ ಮಣವಟ್ಟಿರ ಬಿ.ಮಾಚಯ್ಯ, ಬ್ಲೂ ಡಾರ್ಟ್ ಈ ಕಾಮರ್ಸ್ ಗುಂಪಿನ ದಕ್ಷಿಣ ಭಾರತದ ಪ್ರಾದೇಶಿಕ ನಿವೃತ್ತ ಮುಖ್ಯಸ್ಥ ಬಾಳೆಯಡ ಕರುಣ್ ಕಾಳಪ್ಪ ಪಾಲ್ಗೊಳ್ಳಲಿದ್ದಾರೆ ಎಂದರು. ಬೆಳ್ಳಿ ಹಬ್ಬದ ಅಂಗವಾಗಿ ನಾಪೋಕ್ಲು ಮಾರುಕಟ್ಟೆ ಆವರಣದಿಂದ ಕೊಡವ ಸಮಾಜದವರೆಗೆ ಸಾಂಸ್ಕೃತಿಕ ಮೆರವಣಿಯ ನಡೆಯಲಿದೆ. ಮೆರವಣಿಗೆಯನ್ನು ಮೈಸೂರು ಕೊಡವ ಸಮಾಜದ ಅಧ್ಯಕ್ಷ ಪಿ.ಎ.ಗಣಪತಿ ಉದ್ಘಾಟಿಸಲಿದ್ದಾರೆ. ಬೆಳಿಗ್ಗೆ 10 ಗಂಟೆಯಿಂದ ಸಮಾಜ ಬಾಂಧವರಿಗಾಗಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಉಮ್ಮತ್ತಟ್ ಸ್ಪರ್ಧೆಯನ್ನು ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಬೊಪ್ಪಂಡ ಬೊಳ್ಲಮ್ಮ ನಾಣಯ್ಯ, ಬೊಳೊಪಾಟ್ ಸ್ಪರ್ಧೆಯನ್ನು ಕೊಡವ ಸಮಾಜದ ಮಾಜಿ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಕೋಲಾಟ ಸ್ಪರ್ಧೆಯನ್ನು ನಾಪೋಕ್ಲು ಕೊಡವ ಸಮಾಜದ ಮಾಜಿ ಅಧ್ಯಕ್ಷ ಬಿದ್ದಾಟಂಡ ರಮೇಶ್ ಚೆಂಗಪ್ಪ, ಕತ್ತಿಯಾಟ್ ಹಾಗೂ ಪರೆಯಕಳಿ ಸ್ಪರ್ಧೆಯನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿದ್ದಾಟಂಡ ಎಸ್. ತಮ್ಮಯ್ಯ, ವಾಲಗತಾಟ್ ಮತ್ತು ಕಪ್ಪೆಯಾಟ್ ಸ್ಪರ್ಧೆಯನ್ನು ಬಲಂಬೇರಿ ಸಮಾಜ ಸೇವಕ ಬೊಳ್ಳಚೆಟ್ಟೀರ ಎಂ.ಸುರೇಶ್ ಉದ್ಘಾಟಿಸಲಿದ್ದಾರೆ. ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಪಾಲೂರಿನ ಸಮಾಜ ಸೇವಕ ಬೊಳ್ಳಿಯಂಡ ಪಿ.ಹರೀಶ್ ಕಾರ್ಯಪ್ಪ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳನ್ನು ಪೇರೂರಿನ ಕೊಡವ ಜಾನಪದ ತಜ್ಞ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಉದ್ಘಾಟಿಸಲಿದ್ದಾರೆ ಎಂದರು. ಡಿ.29 ರಂದು ಮಧ್ಯಾಹ್ನ 3 ಗಂಟೆಗೆ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭ ನಡೆಯಲಿದ್ದು, ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ ನಾಣಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎ.ಎಸ್.ಪೊನ್ನಣ್ಣ, ಸಂಸದ ಕೃಷ್ಣರಾಜ ಯದುವೀರ್ ಒಡೆಯರ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಮಂಡೆಪಂಡ ಸುಜಾ ಕುಶಾಲಪ್ಪ, ಉದ್ಯಮಿ ಬಾಚಂಗಂಡ ಎಸ್.ಮೊಣ್ಣಪ್ಪ ಪಾಲ್ಗೊಳ್ಳಲಿದ್ದು, ಎಲ್ಲರೂ ಕೊಡವ ಸಾಂಸ್ಕೃತಿಕ ದಿರಿಸಿನಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಕರವಂಡ ಪಿ.ಲವ ನಾಣಯ್ಯ, ಕಾರ್ಯದರ್ಶಿ ಕುಲ್ಲೇಟಿರ ಅಜಿತ್ ನಾಣಯ್ಯ, ಸಹಕಾರ್ಯದರ್ಶಿ ಕುಸು ಮಾಚೆಟ್ಟಿರ ಕುಶಾಲಪ್ಪ, ನಿರ್ದೇಶಕರಾದ ಚೇನಂಡ ಗಿರೀಶ್ ಪೂಣಚ್ಚ, ಬೊಳಿಯಾಡಿರ ಸಂತು ಸುಬ್ರಮಣಿ, ಬೊಪ್ಪೇರ ಜಯ ಉತ್ತಪ್ಪ, ಬದಂಜೆಟ್ಟಿರ ಬಿ.ದೇವಯ್ಯ, ಚೌರೀರ ಜಿ.ಅಯ್ಯಪ್ಪ, ಕುಡಿಯೊಳಂಡ ಬಿ.ಬೋಪಣ್ಣ, ಕುಟ್ಟಂಜೆಟ್ಟಿರ ಶ್ಯಾಮ್ ಬೋಪಣ್ಣ, ನಾಯಕಂಡ ಜೂಬಿ ತಿಮ್ಮಯ್ಯ, ನಾಯಕಂಡ ಟಿ.ಮುತ್ತಪ್ಪ, ಬಾಳೆಯಡ ನಿಶಾ ಮೇದಪ್ಪ, ಅರೆಯಡ ಸರಸು ಚರ್ಮಣ, ಕೋಟೆರ ಜಾನ್ಸಿ ಮಂದಪ್ಪ, ಕಲಿಯಂಡ ಗೀತಾ ಗಿರೀಶ್, ಬೊಟ್ಟೋಳಂಡ ಗಿರೀಶ್ ಮಾದಪ್ಪ, ಶಿವಚಾಳಿಯಂಡ ಕಿಶೋರ್ ಬೋಪಣ್ಣ, ಬಿದ್ದಾಟಂಡ ಸಂಪತ್ ಸೋಮಯ್ಯ, ವ್ಯವಸ್ಥಾಪಕ ಶಿವಚಾಳಿಯಂಡ ಜಗದೀಶ್ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.