ಕಣಿವೆ ಡಿ.28 NEWS DESK : ಕುಶಾಲನಗರ ತಾಲ್ಲೂಕಿನ ಮಾವಿನಹಳ್ಳ ಗಿರಿಜನ ಹಾಡಿಯ ಅರಣ್ಯ ಹಕ್ಕು ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಗ್ರಾಮ ಅರಣ್ಯ ಹಕ್ಕು ಸಮಿತಿ ಅಧ್ಯಕ್ಷರಾಗಿ ಜೆ.ಎಂ.ನಾಗೇಶ್, ಉಪಾಧ್ಯಕ್ಷರಾಗಿ ಚಂದ್ರಪ್ಪ, ಕಾರ್ಯದರ್ಶಿ ಪಾಪಣ್ಣ ಆಯ್ಕೆ ಮಾಡಲಾಗಿದ್ದು, ನಿರ್ದೇಶಕರುಗಳಾಗಿ ಮುತ್ತಮ್ಮ, ಗೀತಾ, ನಾಗಮ್ಮ, ಗೋಪಾಲ, ಜೆ.ಸಿ.ಸತೀಶ, ಜೆ.ಕೆ.ಲೋಕೇಶ, ಜೆ.ಎಂ.ಸೋಮೇಶ, ಜೆ.ಹೆಚ್.ರಾಜು, ಜೆ.ಕೆ.ಚಂದ್ರ, ಲಿಂಗ ನೇಮಕಗೊಂಡಿದ್ದಾರೆ. ಹಾಡಿಯ ಪ್ರವೇಶ ದ್ವಾರದಲ್ಲಿ ಅಳವಡಿಸಿದ ಸಮಿತಿಯ ನಾಮಫಲಕವನ್ನು ಉದ್ಘಾಟಿಸಿ ಮಾತನಾಡಿದ ಗಿರಜನ ಹೋರಾಟಗಾರ ಮಾವಿನಹಳ್ಳ ಕಾಳಿಂಗ, ದಶಕಗಳಿಂದಲೂ ಗಿರಿಜನರು ತಮ್ಮ ಹಕ್ಕುಗಳಿಗಾಗಿ ನಡೆಸುತ್ತಿರುವ ಹೋರಾಟಕ್ಕೆ ಆಳುವ ಸರ್ಕಾರಗಳು ನಯಾ ಪೈಸೆಯ ಕಿಮ್ಮತ್ತು ಕೊಡುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಗಿರಿಜನ ನಿವಾಸಿಗಳನ್ನು ಸಂಘಟಿಸಿ ಉಗ್ರವಾದ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು. ಮತ್ತೋರ್ವ ಮುಖಂಡ, ಜಿಪಂ ಮಾಜಿ ಸದಸ್ಯ ಆರ್.ಕೆ.ಚಂದ್ರು ಮಾತನಾಡಿ, ಗಿರಿಜನ ವಾಸಿಗಳು ತಮಗೆ ಅಗತ್ಯವಿರುವ ಸೌಲಭ್ಯಗಳನ್ನು ಪಡೆದುಕೊಳ್ಳಲೆಂದೇ ಗ್ರಾಮ ಅರಣ್ಯ ಹಕ್ಕು ಸಮಿತಿಗಳನ್ನು ಎಲ್ಲೆಡೆ ರಚಿಸಲಾಗುತ್ತಿದೆ. ಸಮಿತಿಯ ಮೂಲಕ ಸಭೆ ನಡೆಸಿ ನಿವಾಸಿಗಳನ್ನು ಒಗ್ಗೂಡಿಸಿ ಗಟ್ಟಿ ಧ್ವನಿ ಮೊಳಗಿಸಿ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಲು ಹೋರಾಟ ರೂಪಿಸಲಾಗುತ್ತದೆ ಎಂದರು.