ಮಡಿಕೇರಿ NEWS DESK ಡಿ.30 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಗ್ರಾಮದ ಶ್ರೀ ಮಹಾ ಮೃತ್ಯುಂಜಯ ದೇವಾಲಯದ ಪ್ರವೇಶಕ್ಕೆ ಸಂಬಂಧಿಸಿದಂತೆ ಎರಡು ಜನಾಂಗಗಳ ನಡುವೆ ನಡೆದ ಸಂಘರ್ಷವನ್ನು ಶಮನ ಮಾಡಲು ಕೊಡಗು ಜಿಲ್ಲಾಡಳಿತ ಇಂದು ಉಭಯ ಕಡೆಗಳ ಶಾಂತಿ ಸಭೆ ನಡೆಸಿತು. ಸುಮಾರು ಮೂರು ಗಂಟೆಗಳ ಸಭೆಯಲ್ಲಿ ಕೊಡವ ಸಮಾಜಗಳ ಒಕ್ಕೂಟ, ಗೌಡ ಸಮಾಜಗಳ ಒಕ್ಕೂಟ ಹಾಗೂ ಶ್ರೀ ಮಹಾ ಮೃತ್ಯಂಜಯ ದೇವಾಲಯ ಆಡಳಿತ ಮಂಡಳಿಯ ಅಭಿಪ್ರಾಯಗಳನ್ನು ಜಿಲ್ಲಾಡಳಿತ ಆಲಿಸಿತು. ಸಭೆಯ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ದೇವಸ್ಥಾನದ ಬೈಲಾದಲ್ಲಿರುವ ಗೊಂದಲ ನಿವಾರಣೆಗಾಗಿ ದೇವಾಲಯದ ಆಡಳಿತ ಮಂಡಳಿಯ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಮುಂದಿನ ಸೋಮವಾರದವರೆಗೆ ಕಾಲಾವಕಾಶ ಬೇಕೆಂದು ದೇವಾಲಯದ ಆಡಳಿತ ಮಂಡಳಿಯ ಪ್ರಮುಖರು ಕೋರಿಕೊಂಡಿದ್ದಾರೆ. ಈ ಹಿನ್ನೆಲೆ ಅಂತಿಮ ನಿರ್ಧಾರಕ್ಕೆ ಬರಲು ಏಳು ದಿನಗಳ ಕಾಲಾವಕಾಶ ನಿಡಲಾಗಿದೆ ಎಂದರು.
ಆಡಳಿತ ಮಂಡಳಿ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಏಳು ದಿನಗಳ ಕಾಲಾವಕಾಶ ಕೋರಿಕೊಂಡ ಹಿನ್ನೆಲೆಯಲ್ಲಿ ಎಲ್ಲರು ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಕೊಡಗು ಸರ್ವ ಜನಾಂಗಗಳ ಶಾಂತಿಯ ತೋಟವಾಗಿದ್ದು, ಸಭೆಯಲ್ಲಿ ಇಂದಿನ ತೀರ್ಮಾನವನ್ನು ಎಲ್ಲರು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಜಿಲ್ಲಾಡಳಿತ ಕೂಡ ಮುಂದಿನ ದಿನಗಳಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ಪಡೆದುಕೊಂಡು ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ತಿಳಿಸಿದರು. ಜಿಲ್ಲಾಡಳಿತ ಹಾಗೂ ಜಿಲ್ಲಾ ಪೊಲೀಸ್ ಇಲಾಖೆ ಕಾನೂನು ಸುವ್ಯವಸ್ಥೆ ಕಾಪಾಡಲು ಬದ್ಧವಾಗಿದೆ. ಈಗಾಗಲೆ ಮುಂಜಾಗ್ರತಾ ಕ್ರಮವಾಗಿ 163 ಸೆಕ್ಷನ್‌ನಡಿ ಜ.2ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿದೆ. ಅಗತ್ಯ ಬಿದ್ದಲ್ಲಿ ಇದನ್ನು ಮುಂದುವರಿಸುವ ಕುರಿತು ಚಿಂತಿಸಲಾಗುವುದು. ಮುಂದಿನ ಸೋಮವಾರದವರೆಗೆ ದೇವಾಲಯದಲ್ಲಿ ಎಂದಿನಂತೆ ಪೂಜೆಗಳು ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಕೊಡಗಿನ ಜನತೆ ಶಾಂತಿ ಪ್ರಿಯರಾಗಿರುವುದರಿಂದ ಮುಂದಿನ ಸೋಮವಾರ ನಡೆಯುವ ಸಭೆಯಲ್ಲಿ ಒಮ್ಮತದ ಉತ್ತಮ ನಿರ್ಧಾರಕ್ಕೆ ಬರಲಿದ್ದಾರೆ ಎನ್ನುವ ವಿಶ್ವಾಸವಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದರು.
::: ಕಾನೂನು ಉಲ್ಲಂಘಿಸಲು ಅವಕಾಶವಿಲ್ಲ :::
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಮಾತನಾಡಿ, ದೇವಾಲಯ ಆಡಳಿತ ಮಂಡಳಿಯ ಕೋರಿಕೆಯಂತೆ ಜಿಲ್ಲಾಡಳಿತ ಒಂದು ವಾರದ ಕಾಲಾವಕಾಶ ನೀಡಿದೆ. ನಂತರ ನಡೆಯುವ ಸಭೆಯಲ್ಲಿ ಒಮ್ಮತದ ನಿರ್ಧಾರವಾದರೆ ಸ್ವಾಗತಾರ್ಹ. ತಪ್ಪಿದಲ್ಲಿ ಪ್ರತಿಭಟನೆ ನಡೆಸುವುದು ಅಥವಾ ದೇವಾಲಯಕ್ಕೆ ನುಗ್ಗಲು ಮುಂದಾಗುವುದಕ್ಕೆ ಪೊಲೀಸ್ ಇಲಾಖೆ ಅವಕಾಶ ನಿಡುವುದಿಲ್ಲ. ಉದ್ದೇಶ ಪೂರ್ವಕವಾಗಿ ಶಾಂತಿಭಂಗ ಮಾಡಲು ಯತ್ನಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು. ಸಭೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ ಒಪ್ಪಿಗೆಯಾಗದಿದ್ದಲ್ಲಿ ನ್ಯಾಯಾಲಯಕ್ಕೆ ಹೋಗಲು ಅವಕಾಶವಿದೆ, ಅಲ್ಲಿ ನ್ಯಾಯವನ್ನು ಪಡೆಯಬಹುದಾಗಿದೆ. ಅದನ್ನು ಬಿಟ್ಟು ಶಾಂತಿಭಂಗ ಮಾಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೂಕ್ತ ನಿರ್ಧಾರ ಕೈಗೊಳ್ಳಲು ಒಂದು ವಾರದ ಕಾಲಾವಕಾಶವನ್ನು ಜಿಲ್ಲಾಡಳಿತ ನೀಡಿರುವುದರಿಂದ ಮತ್ತು ಸಭೆಯಲ್ಲಿ ಇದ್ದವರು ಇದಕ್ಕೆ ಸಮ್ಮತಿ ಸೂಚಿಸಿರುವುದರಿಂದ ಪ್ರತಿಭಟನೆಗಳನ್ನು ವಾಪಾಸು ಪಡೆಯಲಿದ್ದಾರೆ ಎನ್ನುವ ವಿಶ್ವಾಸವಿದೆಯೆಂದು ಎಸ್‌ಪಿ ತಿಳಿಸಿದರು.
Breaking News
- *ನಾಗರಹೊಳೆಯಲ್ಲಿ ಬೇಟೆ : ಕೊಡಗಿನ ಆರೋಪಿಗಳ ಬಂಧನ*
- *ಅರ್ಚಕ ವಿಘ್ನೇಶ್ ಭಟ್ ಮೇಲೆ ಹಲ್ಲೆ : ಆರೋಪಿಗಳ ಬಂಧನ*
- *ಸಾಮಾನ್ಯ ವರ್ಗಕ್ಕೆ ಸಹಾಯವಾಗದ ಬಜೆಟ್*
- *ಸ್ವಾವಲಂಬಿ ಭಾರತಕ್ಕೆ ಪೂರಕವಾದ ಜನಪರ ಬಜೆಟ್*
- *ದೆಹಲಿ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಜೆಟ್*
- *ಮಡಿಕೇರಿಯಲ್ಲಿ ಮಡಿವಾಳ ಮಾಚಿದೇವರ ಜಯಂತಿ : ವಚನಗಳ ಸಂರಕ್ಷಣೆಯಲ್ಲಿ ಮಡಿವಾಳ ಮಾಚಿದೇವರ ಕೊಡುಗೆ ಅಪಾರ : ಬಿ.ಸಿ.ಶಂಕರಯ್ಯ*
- *ವಿರಾಜಪೇಟೆ : ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಗಳಾಗಬೇಕು : ಅನೂಪ್ ಮಾದಪ್ಪ ಕರೆ*
- *ದೀಪ್ತಿ ದೇಚಮ್ಮ ಗೆ ಪಿ.ಹೆಚ್.ಡಿ ಪದವಿ ಪ್ರದಾನ*
- *ಜನಪರ ಮತ್ತು ರೈತಪರ ಬಜೆಟ್ : ತೇಲಪಂಡ ಶಿವಕುಮಾರ್ ನಾಣಯ್ಯ*
- *ರಾಜ್ಯದ ಹಿತಕ್ಕೆ ನಿರಾಶದಾಯಕ ಬಜೆಟ್ : ನಾವಿಟ್ಟ ಬೇಡಿಕೆಗಳಲ್ಲಿ ಒಂದನ್ನೂ ಈಡೇರಿಸಿಲ್ಲ : ಸಿಎಂ ಸಿದ್ದರಾಮಯ್ಯ ಅಸಮಾಧಾನ*