ಮಡಿಕೇರಿ NEWS DESK ಜ.2 : ಮಡಿಕೇರಿ ತಾಲ್ಲೂಕಿನ ಕಟ್ಟೆಮಾಡು ಶ್ರೀ ಮಹಾಮೃತ್ಯುಂಜಯ ದೇವಾಲಯದಲ್ಲಿ ಎದುರಾಗಿರುವ ಭಿನ್ನಾಭಿಪ್ರಾಯದ ಕುರಿತು ಹೇಳಿಕೆ, ಪ್ರತಿ ಹೇಳಿಕೆ ನೀಡಿ ಸಮಾಜದಲ್ಲಿ ಅಶಾಂತಿಯ ವಾತಾವರಣ ಸೃಷ್ಟಿಸುವ ಬದಲು ಕೊಡಗಿನ ಹಿತಕ್ಕಾಗಿ ಆಗಿರುವುದನ್ನು ಮರೆತು ಬಿಡೋಣ. ಎಲ್ಲರ ಸಂಪ್ರದಾಯವನ್ನು ಎಲ್ಲರೂ ಪರಸ್ಪರ ಗೌರವಿಸಿ ಶಾಂತಿ ಕಾಪಾಡುವ ಮೂಲಕ ಪ್ರೀತಿ ಬೆಳೆಸೋಣವೆಂದು ಅರೆಕಾಡು ಹೊಸ್ಕೇರಿಯ ಕೊಡವ ವೆಲ್ ಫೇರ್ ಐಂಡ್ ರಿಕ್ರಿಯೇಷನ್ ಅಸೋಸಿಯೇಷನ್ ನ ಅಧ್ಯಕ್ಷ ಕುಕ್ಕೇರ ಜಯ ಚಿಣ್ಣಪ್ಪ ಮನವಿ ಮಾಡಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊತ್ತಿರುವ ಕಿಡಿಯನ್ನು ಶಮನ ಮಾಡಲು ಪ್ರತಿಯೊಬ್ಬರು ಪ್ರಯತ್ನಿಸಬೇಕೆ ಹೊರತು ಬೆಂಕಿಯ ಜ್ವಾಲೆಯಾಗಲು ಬಿಡಬಾರದು. ಕೊಡಗಿನಲ್ಲಿ ನೆಲೆಸಿರುವ ಪ್ರತಿಯೊಂದು ಜನಾಂಗದ ಮಂದಿಯೂ ಸ್ವಾಭಿಮಾನಿಗಳಾಗಿದ್ದಾರೆ, ಪ್ರಜ್ಞಾವಂತರಾಗಿದ್ದಾರೆ, ವಿದ್ಯಾವಂತರಾಗಿದ್ದಾರೆ. ಆದ್ದರಿಂದ ದೇವಾಲಯದಲ್ಲಿ ನಡೆದ ಪ್ರಕರಣವನ್ನು ಮತ್ತಷ್ಟು ಬೆಳೆಸದೆ ಸಾಮರಸ್ಯದ ಮೂಲಕ ಸಮಸ್ಯೆಯನ್ನು ಇತ್ಯರ್ಥಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ. ವಿಷ ಗಳಿಗೆಯೊಂದರಲ್ಲಿ ಘಟನೆ ನಡೆದು ಹೋಗಿದೆ, ನಂತರ ನಡೆದ ಬೆಳವಣಿಗೆಗಳು ಕೊಡಗಿನ ಗೌರವಕ್ಕೆ ದಕ್ಕೆ ತಂದಿದೆ. ಪುಟ್ಟ ಜಿಲ್ಲೆ ಶಾಂತಿಪ್ರಿಯ ಕೊಡಗು ವಿಶ್ವದೆಲ್ಲೆಡೆೆ ತನ್ನ ಘನತೆಯನ್ನು ಹೆಚ್ಚಿಸಿಕೊಂಡೇ ಬಂದಿದೆ. ಕೊಡಗಿನ ಜನರನ್ನು ಇಡೀ ಸಮಾಜ ಅತ್ಯಂತ ಪ್ರೀತಿಯಿಂದ ಮತ್ತು ಗೌರವದಿಂದ ಕಾಣುತ್ತದೆ. ಆದರೆ ಕಟ್ಟೆಮಾಡಿನ ಘಟನೆಯ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಪರಸ್ಪರ ಅವಮಾನಿಸುವ ಪ್ರಕರಣಗಳು ಹೆಚ್ಚಾಗಿದೆ. ಕೊಡಗಿನ ಹಿತ ದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಎಲ್ಲಾ ಸಮುದಾಯದವರು ತಮ್ಮ ತಮ್ಮ ಪ್ರತಿಷ್ಠೆಯನ್ನು ಬದಿಗೊತ್ತಿ ಶ್ರೀ ಮಹಾಮೃತ್ಯುಂಜಯನಲ್ಲಿ ಕ್ಷಮೆ ಕೋರಿ ಸಾಮರಸ್ಯದ ಸಮಾಜವನ್ನು ಮತ್ತೆ ಕಟ್ಟಲು ಪಣತೊಡೋಣವೆಂದು ಕುಕ್ಕೇರ ಜಯ ಚಿಣ್ಣಪ್ಪ ಕೋರಿದ್ದಾರೆ.