ಮಡಿಕೇರಿ NEWS DESK ಜ.12 : 1965ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಬಲಿದಾನಗೈದ ಕೊಡಗಿನ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯ “ಸ್ಕೈ ಫೋರ್ಸ್” ಬಾಲಿವುಡ್ ಸಿನಿಮಾ ಜ.24 ರಂದು ಬಿಡುಗಡೆಯಾಗುತ್ತಿದೆ. ಬೊಳ್ಳಜಿರ ಬಿ.ಅಯ್ಯಪ್ಪ ನೇತೃತ್ವದ ಕೊಡವ ಮಕ್ಕಡ ಕೂಟ ಹೊರತಂದಿರುವ ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ “1965ರ ಯುದ್ಧ ಹಾಗೂ ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾಡ್ರನ್ ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ ಪುಸ್ತಕವನ್ನು ಆಧರಿಸಿ “ಸ್ಕೈ ಫೋರ್ಸ್” ಚಿತ್ರವನ್ನು ತಯಾರಿಸಲಾಗಿದೆ. ಮ್ಯಾಡಾಕ್ ಫಿಲ್ಮ್ಸ್ ಮತ್ತು ಜಿಯೋ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ದಿನೇಶ್ ವಿಜನ್, ಅಮರ್ ಕೌಶಿಕ್ ಹಾಗೂ ಜ್ಯೋತಿ ದೇಶಪಾಂಡೆ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಸಂದೀಪ್ ಕೇವಾಲಾನಿ ಹಾಗೂ ಅಭಿಷೇಕ್ ಅನಿಲ್ ಕಪೂರ್ ಜಂಟಿಯಾಗಿ ಸಿನಿಮಾ ನಿರ್ದೇಶಿಸಿದ್ದಾರೆ. ಅಕ್ಷಯ್ ಕುಮಾರ್ ಹಾಗೂ ವೀರ್ ಪಹಾಡಿಯಾ ಪ್ರಮುಖ ಪಾತ್ರಗಳಲ್ಲಿದ್ದಾರೆ. ಸಾರಾ ಅಲಿ ಖಾನ್, ನಿಮ್ರತ್ ಕೌರ್ ಮತ್ತು ಶರದ್ ಕೇಳ್ಕರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಚಿತ್ರ ಜ.24ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಟ್ರೈಲರ್ ಬಿಡುಗಡೆಯಾಗಿ ದೇಶಪ್ರೇಮದ ಕಿಚ್ಚನ್ನು ಹಚ್ಚಿದೆ, ಚಿತ್ರಾಭಿಮಾನಿಗಳು “ಸ್ಕೈ ಫೋರ್ಸ್” ಕ್ಕಾಗಿ ಎದುರು ನೋಡುತ್ತಿದ್ದಾರೆ.
1965ರಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧದ ನೈಜ ಘಟನೆಯನ್ನು ಆಧರಿಸಿ ಚಿತ್ರದ ಕಥೆಯನ್ನು ಹೆಣೆಯಲಾಗಿದೆ. ಪಾಕಿಸ್ತಾನದ ಸರ್ಗೋಧಾ ವಾಯುನೆಲೆ ಮೇಲೆ ಭಾರತೀಯ ವಾಯುಸೇನೆ ವೈಮಾನಿಕ ದಾಳಿ ನಡೆಸಿತು. ಇದು ಭಾರತೀಯ ವಾಯುಪಡೆಯ ಮೊದಲ ಮತ್ತು ಅತ್ಯಂತ ಮಾರಣಾಂತಿಕ ದಾಳಿ ಎಂದು ಪರಿಗಣಿಸಲಾಗಿದೆ. ಚಿತ್ರದಲ್ಲಿ ದೇಶಪ್ರೇಮದ ಜೊತೆಗೆ ಸಾಹಸ ದೃಶ್ಯಗಳಿಗೆ ಆದ್ಯತೆ ನೀಡಲಾಗಿದ್ದು, ಭಾರತೀಯ ವಾಯುಪಡೆಯ ಧೈರ್ಯದ ಪ್ರತೀಕ ಎಂಬಂತೆ ಚಿತ್ರಿಸಲಾಗಿದೆ. 1965ರ ಭಾರತ-ಪಾಕ್ ಯುದ್ಧದಲ್ಲಿ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರು ಬದುಕಿ ಹಿಂದಕ್ಕೆ ಬರುವ ಅವಕಾಶಗಳಿತ್ತು. ಆದರೆ, ಈ ಅವಕಾಶವನ್ನು ಕೈಬಿಟ್ಟು ಶತ್ರು ರಾಷ್ಟ್ರ ಪಾಕ್‌ನ ಅತ್ಯಾಧುನಿಕ ಯುದ್ಧವಿಮಾನವನ್ನು ಕೆಚ್ಚೆದೆಯ ಸಾಹಸದ ಮೂಲಕ ಹೊಡೆದುರುಳಿಸಿ ಹುತಾತ್ಮರಾದರು. ಅವರ ಈ ಮಹಾನ್ ಬಲಿದಾನ ಹಲವಾರು ವರ್ಷಗಳ ಬಳಿಕ ಪಾಕ್ ಸೇನೆಯ ಅಧಿಕಾರಿಯೊಬ್ಬರನ್ನು ಬಿಬಿಸಿಯವರು ಸಂದರ್ಶನ ಮಾಡಿದ ಸಂದರ್ಭ ಬೆಳಕಿಗೆ ಬಂದಿತು. ಶೌರ್ಯ ಮೆರೆದು ಹುತಾತ್ಮರಾದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪುರಸ್ಕಾರ ನೀಡಲಾಯಿತು. ಇವರ ಸಾಹಸಗಾಥೆಯನ್ನು ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ತಮ್ಮ ಪುಸ್ತಕದಲ್ಲಿ ಮನೋಜ್ಞವಾಗಿ ಚಿತ್ರಿಸಿದ್ದಾರೆ. ವೀರ ಸೇನಾನಿಯ ಪುಸ್ತಕ ರಚನೆಗೆ ಪ್ರೇರಣೆ ನೀಡಿದ ಮತ್ತು ಪುಸ್ತಕವನ್ನು ಹೊರತಂದ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಅವರು ಸತತ ಪರಿಶ್ರಮದ ಮೂಲಕ ಮಡಿಕೇರಿಯ ಹೃದಯ ಭಾಗದಲ್ಲಿ ಸ್ಕಾ÷್ವಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಪ್ರತಿಮೆಯನ್ನು ಸ್ಥಾಪಿಸಿದ್ದಾರೆ. ಅಲ್ಲದೆ ಪ್ರತಿವರ್ಷ ಗೌರವ ಅರ್ಪಿಸುವ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ.
::: ಹೆಮ್ಮೆ ತಂದಿದೆ :::
1965ರ ಭಾರತ-ಪಾಕ್ ಯುದ್ಧದಲ್ಲಿ ಶೌರ್ಯ ಮೆರೆದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆ ಚಲನಚಿತ್ರವಾಗಿ “ಸ್ಕೈ ಫೋರ್ಸ್” ಹೆಸರಿನಲ್ಲಿ ತೆರೆಗೆ ಬರುತ್ತಿರುವುದು ಹೆಮ್ಮೆ ಎನಿಸಿದೆ. ಸೈನಿಕರ ನಾಡು ಕೊಡಗಿನ ಸೇನಾಧಿಕಾರಿಯೊಬ್ಬರ ವೀರತ್ವದ ಕಥೆ ಬಾಲಿವುಡ್ ಚಿತ್ರವಾಗಿ ತೆರೆ ಕಾಣುತ್ತಿರುವುದು ಇದೇ ಮೊದಲಾಗಿದೆ. ಸಾಹಿತಿ ರಮೇಶ್ ಉತ್ತಪ್ಪ ಅವರು ಬರೆದ ದೇವಯ್ಯ ಅವರ ಸಾಹಸದ ಪುಸ್ತಕವನ್ನು ಕೊಡವ ಮಕ್ಕಡ ಕೂಟ ಬಿಡುಗಡೆ ಮಾಡಿತ್ತು. ಇದೇ ಪುಸ್ತಕವನ್ನು ಆಧರಿಸಿ ಹಿಂದಿ ಚಿತ್ರ ತಯಾರಿಸಲಾಗಿದೆ. ಚಿತ್ರತಂಡ ಕಳೆದ 5 ವರ್ಷಗಳಿಂದ ನಮ್ಮೊಂದಿಗೆ ಹಾಗೂ ದೇವಯ್ಯ ಅವರ ಕುಟುಂಬದ ಸದಸ್ಯರೊಂದಿಗೆ ಸಂಪರ್ಕದಲ್ಲಿದ್ದು, ಚಿತ್ರ ತಯಾರಿಕೆ ಮಾಡಿದ್ದಾರೆ. ದೇಶದ ವೀರ ಸೇನಾನಿಗೆ ಚಲನಚಿತ್ರದ ಮೂಲಕ ಗೌರವ ನೀಡುತ್ತಿರುವುದು ಕೊಡಗಿನ ಮಟ್ಟಿಗೆ ಹೆಗ್ಗಳಿಕೆಯಾಗಿದೆ. (ಬೊಳ್ಳಜಿರ ಬಿ.ಅಯ್ಯಪ್ಪ, ಅಧ್ಯಕ್ಷರು, ಕೊಡವ ಮಕ್ಕಡ ಕೂಟ)
::: ಅಪ್ರತಿಮ ಸೇನಾನಿಗೆ ಸಂದ ಗೌರವ :::
ತನ್ನ ಪ್ರಾಣವನ್ನೂ ಲೆಕ್ಕಿಸದೆ ತನ್ನೊಂದಿಗಿದ್ದ ಭಾರತೀಯ ಸೈನಿಕರ ವಿಮಾನಗಳನ್ನು ರಕ್ಷಣೆ ಮಾಡುತ್ತಲೇ ದೇಶಪ್ರೇಮವನ್ನು ಮೆರೆದು ಪ್ರಾಣತ್ಯಾಗ ಮಾಡಿದ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆ ಚಲನಚಿತ್ರವಾಗಿ ತೆರೆ ಕಾಣುತ್ತಿರುವುದು ಅಪ್ರತಿಮ ಸೇನಾನಿಗೆ ಸಂದ ಗೌರವವಾಗಿದೆ. ದೇವಯ್ಯ ಅವರ ಕುರಿತು ಪುಸ್ತಕ ಬರೆದ ನನಗೆ ಇದು ಹೆಮ್ಮೆಯ ವಿಚಾರವಾಗಿದೆ, ಈ ಪುಸ್ತಕವನ್ನು ಆಧರಿಸಿ ಚಿತ್ರವಾಗಿರುವುದು ಕೊಡಗಿಗೂ ಹೆಮ್ಮೆ ಎನಿಸಿದೆ. ದೇಶಭಕ್ತ, ಅಪ್ರತಿಮ ವೀರ ದೇವಯ್ಯ ಅವರು ಕುರಿತು ಬಹಳ ಹಿಂದೆಯೇ ಸಿನಿಮಾ ಮೂಡಿ ಬರಬೇಕಾಗಿತ್ತು. ತಡವಾಗಿಯಾದರೂ “ಸ್ಕೈ ಫೋರ್ಸ್” ಹೆಸರಿನಲ್ಲಿ ಚಿತ್ರ ತೆರೆ ಕಾಣುತ್ತಿರುವುದು ಖುಷಿ ತಂದಿದೆ. ದೇವಯ್ಯ ಅವರ ಕುರಿತು ನಾನು ಬರೆದ ಪುಸ್ತಕವನ್ನು ಬಿಡುಗಡೆ ಮಾಡಿದ ಕೊಡವ ಮಕ್ಕಡ ಕೂಟಕ್ಕೂ ನಾನು ಅಭಿನಂದನೆ ಸಲ್ಲಿಸುತ್ತೇನೆ. ಪುಸ್ತಕ ರಚನೆಯ ಸಂದರ್ಭ ನಾನು ಭಾರತ- ಪಾಕ್ ಗಡಿಗೆ ಭೇಟಿ ನೀಡಿ 1965ರಲ್ಲಿ ನಡೆದ ಯುದ್ಧದ ಕುರಿತು ಮಾಹಿತಿ ಸಂಗ್ರಹಿಸಿದ್ದೇನೆ. ಅಧಿಕಾರಿಗಳು ಹಾಗೂ ತಜ್ಞರಿಂದ ಮಾಹಿತಿ ಪಡೆದು ಅಧ್ಯಯನದ ರೂಪದಲ್ಲಿ ಶ್ರಮ ವಹಿಸಿ “1965ರ ಯುದ್ಧ ಹಾಗೂ ಕೊಡಗಿನ ಮಹಾವೀರ” ಪುಸ್ತಕವನ್ನು ರಚನೆ ಮಾಡಿದ್ದೇನೆ. ಈ ಪುಸ್ತಕ ರಾಜ್ಯ ಮಟ್ಟದಲ್ಲಿ ಪ್ರಚಾರ ಪಡೆದಿದ್ದರೆ ಪ್ರಶಸ್ತಿ ಲಭಿಸುತ್ತಿತ್ತು. ಆದರೆ ಇದೀಗ ಬಾಲಿವುಡ್ ಸಿನಿಮಾವಾಗಿ ತೆರೆಗೆ ಬರುತ್ತಿರುವುದೇ ದೊಡ್ಡ ಪ್ರಶಸ್ತಿಯಾಗಿದ್ದು, ಹೆಚ್ಚು ಸಂತೋಷವಾಗಿದೆ. (ಐತಿಚಂಡ ರಮೇಶ್ ಉತ್ತಪ್ಪ, ಸಾಹಿತಿ, “1965ರ ಯುದ್ಧ ಹಾಗೂ ಕೊಡಗಿನ ಮಹಾವೀರ” ಪುಸ್ತಕದ ರಚನೆಕಾರರು)