ಮಡಿಕೇರಿ NEWS DESK ಜ.12 : 1965ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಶತ್ರುಗಳ ವಿಮಾನವನ್ನು ಹೊಡೆದುರುಳಿಸಿ ದೇಶಕ್ಕಾಗಿ ಬಲಿದಾನಗೈದ ಕೊಡಗಿನ ವೀರ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ದೇವಯ್ಯ ಅವರ ಸಾಹಸಗಾಥೆಯ “ಸ್ಕೈ ಫೋರ್ಸ್” ಬಾಲಿವುಡ್ ಸಿನಿಮಾ ಜ.24 ರಂದು ಬಿಡುಗಡೆಯಾಗುತ್ತಿದೆ. ಈ ಚಿತ್ರದ ಪ್ರಮುಖ ಪಾತ್ರಧಾರಿ ವೀರ್ ಪಹಾಡಿಯಾ ಅವರು ಇಂದು ಅಜ್ಜಮಾಡ ದೇವಯ್ಯ ಅವರ ಪತ್ನಿ ಸುಂದರಿ ದೇವಯ್ಯ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಬೊಳ್ಳಜಿರ ಬಿ.ಅಯ್ಯಪ್ಪ ನೇತೃತ್ವದ ಕೊಡವ ಮಕ್ಕಡ ಕೂಟ ಹೊರತಂದಿರುವ ಪತ್ರಕರ್ತ ಹಾಗೂ ಸಾಹಿತಿ ಐತಿಚಂಡ ರಮೇಶ್ ಉತ್ತಪ್ಪ ಅವರು ಬರೆದಿರುವ “1965ರ ಯುದ್ಧ ಹಾಗೂ ಮಹಾವೀರ ಚಕ್ರ ಪುರಸ್ಕೃತ ಸ್ಕ್ವಾಡ್ರನ್ ಲೀಡರ್ ಅಜ್ಜಮಾಡ ಬಿ.ದೇವಯ್ಯ ಅವರ ಜೀವನಾಧರಿತ ಪುಸ್ತಕವನ್ನು ಆಧರಿಸಿ “ಸ್ಕೈ ಫೋರ್ಸ್” ಚಿತ್ರವನ್ನು ತಯಾರಿಸಲಾಗಿದೆ.