ಮಡಿಕೇರಿ ಜ.15 NEWS DESK : ಕೊಡವರ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ನಂದಿನೆರವಂಡ ಯು.ನಾಚಪ್ಪ ಅವರ ವಿರುದ್ಧ ಹೂಡಲಾಗಿರುವ ಮೊಕದ್ದಮೆ ಹಿಂಪಡೆಯಬೇಕು ಎಂದು ನಾಪೋಕ್ಲು ಕೊಡವ ಸಮಾಜ ಒತ್ತಾಯಿಸಿದೆ.
ಪತ್ರಿಕಾ ಪ್ರಕಟಣೆ ನೀಡಿರುವ ಕೊಡವ ಸಮಾಜದ ಅಧ್ಯಕ್ಷ ಎಂ.ಸಿ.ನಾಣಯ್ಯ ಹಾಗೂ ಆಡಳಿತ ಮಂಡಳಿಯ ನಿರ್ದೇಶಕರುಗಳು ಎನ್.ಯು.ನಾಚಪ್ಪ ಅವರ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಲಾಗಿದ್ದು, ಇದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಕೊಡಗಿನ ಅಸ್ತಿತ್ವಕ್ಕಾಗಿ ಮತ್ತು ಮೂಲ ನಿವಾಸಿ ಕೊಡವರ ಹಕ್ಕುಗಳಿಗಾಗಿ ಒತ್ತಾಯಿಸುತ್ತಾ ಬಂದಿರುವ ಎನ್.ಯು.ನಾಚಪ್ಪ ಅವರು ನಿರಂತರ ಶಾಂತಿಯುತ ಹೋರಾಟ ನಡೆಸುತ್ತಾ ಬಂದಿದ್ದಾರೆ. ಕೊಡವರ ಹಕ್ಕುಗಳ ಹಕ್ಕುಗಳ ರಕ್ಷಣೆಗಾಗಿ ಇರುವ ಸಂವಿಧಾನಾತ್ಮಕ ವಿಚಾರಧಾರೆಗಳನ್ನು ಪ್ರತಿಪಾದಿಸುತ್ತಾ ಬಂದಿದ್ದಾರೆ. ಆದರೆ ಇದೀಗ ಕೆಲವರು ವಿನಾಕಾರಣ ಇವರ ಮೇಲೆ ಸುಳ್ಳು ಪ್ರಕರಣ ದಾಖಲಿಸಿದ್ದು, ಇದನ್ನು ನಾಪೋಕ್ಲು ಕೊಡವ ಸಮಾಜ ತೀವ್ರವಾಗಿ ಖಂಡಿಸುತ್ತದೆ ಮತ್ತು ಪ್ರಕರಣವನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸುವುದಾಗಿ ತಿಳಿಸಿದ್ದಾರೆ. ಕೊಡಗಿನ ಮೂಲನಿವಾಸಿಗಳಾದ ಕೊಡವರಿಗೆ ವಿಶೇಷ ಸ್ಥಾನಮಾನ ಮತ್ತು ಸೌಲಭ್ಯ ದೊರಕಿಸಿಕೊಡಲು ಹಗಲಿರುಳೆನ್ನದೆ ದುಡಿಯುತ್ತಿರುವ ನೇರ ಹಾಗೂ ದಿಟ್ಟ ವ್ಯಕ್ತಿತ್ವದ ನಾಚಪ್ಪ ಅವರ ಶಕ್ತಿಯನ್ನು ಕುಂದಿಸುವ ಪ್ರಯತ್ನವನ್ನು ಯಾರೇ ಮಾಡಿದರೂ, ನಾಪೋಕ್ಲು ಕೊಡವ ಸಮಾಜ ಗಟ್ಟಿಯಾಗಿ ಅವರ ಬೆಂಬಲಕ್ಕೆ ನಿಲ್ಲುತ್ತದೆ ಮತ್ತು ಎಲ್ಲಾ ಷಡ್ಯಂತ್ರಗಳನ್ನು ತೀವ್ರವಾಗಿ ಖಂಡಿಸುತ್ತದೆ. ನಾಚಪ್ಪ ಅವರ ನ್ಯಾಯಯುತ ಹೋರಾಟಕ್ಕೆ ನಾಪೋಕ್ಲು ಕೊಡವ ಸಮಾಜ ಸಂಪೂರ್ಣ ಸಹಕಾರ ಮತ್ತು ಬೆಂಬಲ ನೀಡುತ್ತದೆ ಎಂದು ಎಂ.ಸಿ.ನಾಣಯ್ಯ ಸ್ಪಷ್ಟಪಡಿಸಿದ್ದಾರೆ.