ಮಡಿಕೇರಿ ಜ.17 NEWS DESK : ಸರಕಾರಿ ಭೂಮಿಯನ್ನು ಅತಿಕ್ರಮಿಸಿಕೊಂಡವರಿಗೆ ಗುತ್ತಿಗೆ ಆಧಾರದಲ್ಲಿ ಭೂಮಿ ನೀಡುವ ‘ಭೂ ಗುತ್ತಿಗೆ ಕಾಯ್ದೆ’ಯನ್ನು ಹಿಂಪಡೆಯಬೇಕು ಮತ್ತು ಒತ್ತುವರಿ ತೆರವುಗೊಳಿಸಿ ನಿವೇಶನ ರಹಿತ ಶೋಷಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕೆಂದು ಆಗ್ರಹಿಸಿ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿತು. ವಿವಿಧ ಸಂಘಟನೆಗಳ ಪ್ರಮುಖರು, ನೂರಾರು ನಿವೇಶನ ರಹಿತರು ಶುಕ್ರವಾರ ನಗರದ ಫೀ.ಮಾ.ಕಾರ್ಯಪ್ಪ ವೃತ್ತದಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಸರಕಾರದ ನಡೆಯನ್ನು ಖಂಡಿಸಿದರು. ‘ನಮ್ಮ ಭೂಮಿ ನಮ್ಮ ಹಕ್ಕು’ ಘೋಷಣೆಯೊಂದಿಗೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿದ ನಿವೇಶನ ರಹಿತರು ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಸರ್ಕಾರ ಇನ್ನಾದರು ಎಚ್ಚೆತ್ತುಕೊಂಡು ಒತ್ತುವರಿಯಾಗಿರುವ ಸರಕಾರಿ ಭೂಮಿಯನ್ನು ನಿವೇಶನ ರಹಿತರಿಗೆ ಒದಗಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಅಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಮಾತನಾಡಿ, ಭೂಗುತ್ತಿಗೆ ಕಾಯ್ದೆಯನ್ನು ಈ ಹಿಂದಿನ ಬಿಜೆಪಿ ಸರಕಾರ ಜಾರಿಗೆ ತಂದಿತು. ಪ್ರಸ್ತುತ ದಲಿತರು, ಆದಿವಾಸಿಗಳು, ದುಡಿಯುವ ವರ್ಗವನ್ನು ಒಳಗೊಂಡ ಬಹುಸಂಖ್ಯಾತರ ಮತಗಳಿಂದ ಆಯ್ಕೆಯಾದ ಕಾಂಗ್ರೆಸ್ ಸರಕಾರವೇ ಗುತ್ತಿಗೆ ಕಾಯ್ದೆ ಅನುಷ್ಠಾನಗೊಳಿಸುತ್ತಿರುವುದು ಖಂಡನೀಯವೆಂದು ಅಸಮಾಧಾನ ವ್ಯಕ್ತಪಡಿಸಿದರು. ಭೂ ಗುತ್ತಿಗೆ ಕಾಯ್ದೆಯ ಮೂಲಕ ಸರ್ಕಾರಿ ಜಾಗವನ್ನು ಒತ್ತುವರಿ ಕೃಷಿ ನಡೆಸುತ್ತಿರುವ ಉಳ್ಳವರಿಗೆ ಏಕರೆಯೊಂದಕ್ಕೆ 1 ಸಾವಿರ ರೂ.ಗಳಂತೆ 25 ಏಕರೆಯವರೆಗೆ 30 ವರ್ಷಗಳ ಕಾಲ ಗುತ್ತಿಗೆ ನೀಡುವ ಕ್ರಮ ಸರಿಯಲ್ಲ. ನಾವೇ ಆರಿಸಿ ಕಳುಹಿಸಿರುವ ಜಿಲ್ಲೆಯ ಇಬ್ಬರು ಶಾಸಕರು ಭೂ ಗುತ್ತಿಗೆ ಕಾಯ್ದೆಯನ್ನು ಹಿಂದಕ್ಕೆ ಪಡೆಯುವ ಪ್ರಯತ್ನಗಳಿಗೆ ಬದಲಾಗಿ, ಉಳ್ಳವರ ಪರವಾಗಿ ನಿಂತಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾ ವ್ಯಾಪ್ತಿಯಲ್ಲಿ 5 ಸಾವಿರಕ್ಕೂ ಹೆಚ್ಚಿನ ಆದಿವಾಸಿ ಕುಟುಂಬಗಳು ಲೈನ್ ಮನೆಗಳಲ್ಲಿ ಕೂಲಿ ಕಾರ್ಮಿಕರಾಗಿ, ಸ್ವಂತ ಸೂರಿಲ್ಲದೆ, ಮೂಲಭೂತ ಸೌಳಭ್ಯಗಳಿಂದ ವಂಚಿತರಾಗಿ ಸಂಕಷ್ಟದ ಬದುಕನ್ನು ನಡೆಸುತ್ತಿದ್ದಾರೆ. ಇವರಿಗೆ ಸ್ವಂತ ನೆಲೆ ಕಲ್ಪಿಸುವ ನಿಟ್ಟಿನಲ್ಲಿ ಕನಿಷ್ಟ ಕಾಳಜಿಯನ್ನು ಸರ್ಕಾರ ತೋರುತ್ತಿಲ್ಲವೆಂದು ಟೀಕಿಸಿದರು.
::: ವಿಧಾನಸೌಧ ಚಲೋ ::: ನಮ್ಮ ಹೋರಾಟಕ್ಕೆ ಸರಕಾರ ಸೂಕ್ತ ಸ್ಪಂದನ ನೀಡದಿದ್ದಲ್ಲಿ ಸಾವಿರಾರು ಮಂದಿ ನಿವೇಶನ ರಹಿತರೊಂದಿಗೆ ‘ವಿಧಾನ ಸೌಧ ಚಲೋ’ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ. ನಮ್ಮ ಹೋರಾಟ ನಿವೇಶನ ರಹಿತರಿಗೆ ನ್ಯಾಯ ದೊರಕುವವರೆಗೆ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಪ್ರತಿಭಟನೆಯಲ್ಲಿ ಭೂ ಗುತ್ತಿಗೆ ವಿರೋಧಿ ಹೋರಾಟ ಸಮಿತಿಯ ಸಂಚಾಲಕರಾದ ಕೆ.ಮೊಣ್ಣಪ್ಪ, ಸಂಚಾಲಕರುಗಳಾದ ರಮೇಶ್ ಮಾಯಮುಡಿ, ರಮೇಶ್, ಹೆಚ್.ಈ. ಸಣ್ಣಪ್ಪ, ಸಮಿತಿಯ ಪ್ರಮುಖರಾದ ಟಿ.ಎನ್.ಗೋವಿಂದಪ್ಪ, ಕಾರ್ಮಿಕ ಮುಖಂಡರಾದ ಪಿ.ಆರ್. ಭರತ್, ದಸಂಸ (ಕೃಷ್ಣಪ್ಪ ಬಣ)ದ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್. ವಿಭಾಗೀಯ ಸಂಚಾಲಕರಾದ ವೀರಭದ್ರಯ್ಯ, ಸಂಘಟನಾ ಸಂಚಾಲಕ ಡಿ.ಜೆ.ಈರಪ್ಪ, ಸಿಪಿಐ ಜಿಲ್ಲಾಧ್ಯಕ್ಷ ಸುನಿಲ್, ಪ್ರಗತಿಪರ ಹೋರಾಟಗಾರರಾದ ಪ್ರೇಮ್ ಕುಮಾರ್, ದಸಂಸ ಮಾವಳ್ಳಿ ಶಂಕರ್ ಬಣದ ಹೆಚ್.ಆರ್.ಶಿವಣ್ಣ, ಎಐಯುಕೆಎಸ್‍ನ ಹೆಚ್.ಜೆ.ಪ್ರಕಾಶ್, ಸಿಪಿಐಎಂಎಲ್‍ನ ಜಿಲ್ಲಾ ಕಾರ್ಯದರ್ಶಿ ವೈ.ಎಂ.ಸುರೇಶ್, ದಲಿತ ಆದಿವಾಸಿ ಕೃಷಿ ಕಾರ್ಮಿಕರ ಸಂಘದ ಜಿಲ್ಲಾ ಮುಖಂಡ ಮುತ್ತಣ್ಣ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.