ಮಡಿಕೇರಿ ಜ.17 NEWS DESK : ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಹಸುಗಳ ಕೆಚ್ಚಲನ್ನು ಕತ್ತರಿಸಿ ಅಮಾನವೀಯ ಕೃತ್ಯವೆಸಗಿರುವುದನ್ನು ಖಂಡಿಸಿ, ದುಷ್ಕೃತ್ಯವೆಸಗಿದವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಗೋ ಸಂರಕ್ಷಣಾ ಸಂವರ್ಧನಾ ಸಮಿತಿಯ ನೇತೃತ್ವದಲ್ಲಿ ವಿವಿಧ ಹಿಂದೂ ಪರ ಸಂಘಟನೆಗಳು ಮಡಿಕೇರಿಯಲ್ಲ್ಲಿ ಮಾನವ ಸರಪಳಿ ರಚಿಸಿ ಬೃಹತ್ ಪ್ರತಿಭಟನೆ ನಡೆಸಿದವು. ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸಮಾವೇಶಗೊಂಡ ವಿವಿಧ ಹಿಂದೂ ಪರ ಸಂಘಟನೆಗಳ ಪ್ರಮುಖರು ಮತ್ತು ಕಾರ್ಯಕರ್ತರು, ಹಿಂದೂ ಸಮಾಜಕ್ಕೆ ಪೂಜನೀಯವಾಗಿರುವ ಹಸುಗಳ ಮೇಲೆ ಕುಕೃತ್ಯವೆಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಜ.ತಿಮ್ಮಯ್ಯ ವೃತ್ತದಲ್ಲಿ ಮಾನವ ಸರಪಳಿಯನ್ನು ರಚಿಸಿದ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು, ರಸ್ತೆ ತಡೆ ನಡೆಸಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಗೋವುಗಳ ಸಂರಕ್ಷಣೆಗೆ ಕಠಿಣ ಕಾನೂನು ಜಾರಿಗೊಳಿಸಬೇಕೆಂದು ಒತ್ತಾಯಿಸಿದರು. ಬಳಿಕ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಛೇರಿಗೆ ತೆರಳಿ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿದರು. ಹಿಂದು ಜಾಗರಣಾ ವೇದಿಕೆಯ ಅಧ್ಯಕ್ಷ ರವಿ ಗೌಡ ಮಾತನಾಡಿ, ಹಸುವಿನ ಮೇಲೆ ಕ್ರೌರ್ಯವೆಸಗುವ ಮೂಲಕ ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧsಕ್ಕೆ ತರಲಾಗಿದೆ. ತಕ್ಷಣ ದುಷ್ಕೃತ್ಯವೆಸಗಿದ ವ್ಯಕ್ತಿಗಳ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ವಿಶ್ವ ಹಿಂದೂ ಪರಿಷತ್ತಿನ ಮಠ ಮಂದಿರ ಅರ್ಚಕರ ವಿಭಾಗದ ಪ್ರಮುಖ ಮಹಾಬಲೇಶ್ವರ ಭಟ್ ಮಾತನಾಡಿ, ಅತ್ಯಂತ ಪವಿತ್ರವಾದ ಗೋವುಗಳ ಮೇಲೆ ದಾಳಿ ಮಾಡಿ ಹೇಯ ಕೃತ್ಯವನ್ನು ಎಸಗಲಾಗಿದೆ. ತನಿಖೆಗೂ ಮೊದಲೇ ಮಾನಸಿಕ ಅಸ್ವಸ್ಥನಿಂದ ಪ್ರಕರಣ ನಡೆದಿದೆ ಎಂದು ಸರಕಾರ ತೀರ್ಪು ನೀಡಲು ಮುಂದಾಗಿರುವುದು ಸರಿಯಲ್ಲ. ಒಟ್ಟು ಪ್ರಕರಣವನ್ನು ಸೂಕ್ತ ತನಿಖೆಗೊಳಪಡಿಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಹಿಂದೂ ಜಾಗರಣಾ ವೇದಿಕೆಯ ಮಾಜಿ ಅಧ್ಯಕ್ಷ ಕುಕ್ಕೇರ ಅಜಿತ್ ಮಾತನಾಡಿ, ದುಷ್ಕೃತ್ಯವೆಸಗಿದವರಿಗೆ ತಕ್ಕ ಶಿಕ್ಷೆಯಾಗಲೇ ಬೇಕು, ಭವಿಷ್ಯದಲ್ಲಿ ಈ ರೀತಿಯ ಘಟನೆ ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಸುರೇಶ್ ಮುತ್ತಪ್ಪ, ಪ್ರಮುಖರಾದ ಸಂಪತ್ ಕುಮಾರ್, ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಅಧ್ಯಕ್ಷ ರಾಬಿನ್ ದೇವಯ್ಯ, ಪ್ರಮಖರಾದ ಶಾಂತೆಯಂಡ ರವಿ ಕುಶಾಲಪ್ಪ, ಅನಿತಾ ಪೂವಯ್ಯ, ಮಹೇಶ್ ಜೈನಿ, ರಮೇಶ್ ಹೊಳ್ಳ, ಬಿ.ಕೆ.ಜಗದೀಶ್, ಸುಬ್ರಹ್ಮಣ್ಯ ಹೊಳ್ಳ, ಬಿ.ಕೆ.ಅರುಣ್ ಕುಮಾರ್, ಕನ್ನಂಡ ಸಂಪತ್, ವಿನಯ್, ಕೆ.ಎಸ್. ರಮೇಶ್, ಸತೀಶ್ ಪೈ, ಪಿ.ಎಂ.ರವಿ, ಸವಿತಾ ರಾಕೇಶ್, ಕನ್ನಿಕೆ, ಡೀನ್ ಬೋಪಣ್ಣ, ಅರುಣ್ ಶೆಟ್ಟಿ ಮತ್ತಿತರ ಪ್ರಮುಖರು ಪಾಲ್ಗೊಂಡಿದ್ದರು.