ಸೋಮವಾರಪೇಟೆ ಜ.18 : ಇತಿಹಾಸ ಪ್ರಸಿದ್ಧ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ದೇವಾಲಯದ 66ನೇ ವರ್ಷದ ಮಹಾರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ದೇವಾಲಯ ಧರ್ಮದರ್ಶಿ ಮಂಡಳಿಯ ಅಧ್ಯಕ್ಷ ಕೆ.ಎಂ.ಲೋಕೇಶ್, ಶಾಂತಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ.ಎಂ.ಧರ್ಮಪ್ಪ ಶಾಸಕ ಡಾ.ಮಂತರ್‍ಗೌಡ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ಮಾಜಿ ಎಂಎಲ್ಸಿ ಎಸ್.ಜಿ.ಮೇದಪ್ಪ, ಸೋಮವಾರಪೇಟೆ ತಾಲ್ಲೂಕು ಅಭಿವೃದ್ಧಿ ಹೋರಾಟ ಸಮಿತಿಯ ಅಧ್ಯಕ್ಷ ಅರುಣ್ ಕೊತ್ನಳ್ಳಿ, ರೈತ ಹೋರಾಟ ಸಮಿತಿ ಅಧ್ಯಕ್ಷ ಕೆ.ಬಿ.ಸುರೇಶ್, ಪ್ರಮುಖರಾದ ಬಿ.ಬಿ.ಸತೀಶ್, ಬಿ.ಇ.ಜಯೇಂದ್ರ, ಸಜನ್ ಮಂದಣ್ಣ, ಕೆ.ಪಿ. ಚಂಗಪ್ಪ, ಪ್ರಧಾನ ಅರ್ಚಕ ಕೃಷ್ಣಮೂರ್ತಿ ಭಟ್ ಸೇರಿದಂತೆ ಗ್ರಾಮದ ಪ್ರಮುಖರು ರಥವನ್ನು ಎಳೆಯುವ ಮೂಲಕ ಚಾಲನೆ ನೀಡಿದರು. ಶಾಂತಳ್ಳಿಯ ರಾಜಬೀದಿ ಮಾರ್ಗದಲ್ಲಿ ಅದ್ಧೂರಿಯ ರಥ ಸಾಗಿತು. ಭಕ್ತಾಧಿಗಳು ರಥಕ್ಕೆ ಈಡುಗಾಯಿ ಒಡೆದು ಪೂಜೆ ಸಲ್ಲಿಸಿದರು. ಕರುವಿನ ಹಬ್ಬದ ಅಂಗವಾಗಿ ದೇಗುಲದ ಗರುಡ ಕಂಬದ ಅಗ್ರಪೀಠದಲ್ಲಿ ತುಪ್ಪದ ನಂದಾದೀಪವನ್ನು ಹಚ್ಚಲಾಯಿತು. ಕಳೆದ ಒಂದು ವಾರದ ತನಕ ಧಾರ್ಮಿಕ ವಿಧಿ ವಿಧಾನದಂತೆ ದೇವರ ಪೂಜೆ ಉತ್ಸವಗಳು ನಡೆಯುತ್ತಿದ್ದು, ಹೊರ ಜಿಲ್ಲೆ, ಹೊರ ರಾಜ್ಯಗಳಿಂದಲೂ ಸಹಸ್ರಾರು ಭಕ್ತರು ಶ್ರೀ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಬೆಟ್ಟದಳ್ಳಿ, ಹರಗ, ಯಡೂರು, ಕೂತಿ ಅಬ್ಭಿಮಠ ಬಾಚಳ್ಳಿ, ಚಿಕ್ಕತೋಳೂರು, ದೊಡ್ಡತೋಳೂರು, ಕುಮಾರಳ್ಳಿ, ಕೊತ್ತನಳ್ಳಿ, ತಲ್ತಾರೆಶೆಟ್ಟಳ್ಳಿ, ಕುಂದಳ್ಳಿ, ಜಕ್ಕನಳ್ಳಿ, ಬಸವನಕಟ್ಟೆ ಗ್ರಾಮಗಳ ಗ್ರಾಮಸ್ಥರು ಪೂಜೋತ್ಸವದಲ್ಲಿ ಭಾಗವಹಿಸಿ ಗ್ರಾಮದ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಮಧ್ಯಾಹ್ಣ ಅನ್ನದಾನ ನಡೆಯಿತು. ತೋಟಗಾರಿಕೆ, ಕೃಷಿ ಇಲಾಖೆಯಿಂದ ವಸ್ತು ಪ್ರದರ್ಶನ ನಡೆಯಿತು. ಗ್ರಾಮಸ್ಥರು ಬೆಳೆ ವಿಶೇಷ ತರಕಾರಿಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದರು. ಗ್ರಾಮೀಣ ಜನರು ತಾವು ಉತ್ಪಾದಿಸಿದ ಗುಣಮಟ್ಟದ ಜೇನನ್ನು ತಂದು ಮಾರಾಟ ಮಾಡಿದರು.
ಕ್ರೀಡಾಕೂಟ:: ಮಹಾರಥೋತ್ಸವ ಅಂಗವಾಗಿ ಶ್ರೀಕುಮಾರಲಿಂಗೇಶ್ವರ ಯುವಕ ಸಂಘದ ವತಿಯಿಂದ ಪುರುಷರಿಗೆ ಕಬಡ್ಡಿ ಮತ್ತು ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಪಂದ್ಯಾವಳಿಗಳ ನಡೆಯಿತು.
ಸಮಾರೋಪ :: ಜ.17ರಂದು ಸಮಾರೋಪ ಸಮಾರಂಭ ನಡೆಯಿತು. ವಿವಿಧ ಶಾಲಾ ಮಕ್ಕಳಿಂದ ನಡೆದ ಸಾಂಸ್ಖøತಿಕ ಕಾರ್ಯಕ್ರಮ ಗಮನ ಸೆಳೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಿ.ಎನ್.ಶಾಂತಪ್ಪ, ಡಿ.ಎಸ್.ಲಿಂಗರಾಜು, ಕೆ.ಕೆ.ಲಿಂಗರಾಜು, ಕೆ.ಎಸ್.ಜಯಾರಾಮ್, ಆಲ್ಪರ್ಟ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.