ಮಡಿಕೇರಿ ಜ.18 NEWS DESK : ಶಿವಯೋಗಿ ಸಿದ್ದರಾಮೇಶ್ವರರು ಆಗಾಧ ಶಕ್ತಿಯಿಂದ ಲೋಕ ಕಲ್ಯಾಣಕ್ಕಾಗಿ ಶ್ರಮಿಸಿದ ಮಹಾನ್ ಸಾಧಕ ಎಂದು ಸಾಹಿತಿ ಹಾಗೂ ಸರಸ್ವತಿ ಡಿಎಡ್ ಕಾಲೇಜು ಪ್ರಾಂಶುಪಾಲ ಕುಮಾರ್ ತಿಳಿಸಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇವರ ಆಶ್ರಯದಲ್ಲಿ ಗಾಂಧಿ ಭವನದಲ್ಲಿ ನಡೆದ ಶಿವಯೋಗಿ ಸಿದ್ದರಾಮ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಮಾಜದ ಉದ್ದಾರಕ್ಕಾಗಿ ಶ್ರಮಿಸಿ, ಲೋಕ ಕಲ್ಯಾಣಕ್ಕಾಗಿ ತಪಸ್ಸನ್ನು ಮಾಡಿ ಶಿವಯೋಗಿ ಆದ ಸಿದ್ದರಾಮೇಶ್ವರರು ಸಮಾಜದ ಕುಲವನ್ನು ಉದ್ದಾರ ಮಾಡಿದವರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು. ಶಿವಯೋಗಿ ಸಿದ್ದರಾಮ ಸರಳ ಜೀವನ ಮಾಡುತ್ತಾ ಸಕಲ ಜೀವಿಗಳ ಲೇಸುಗಳನ್ನು ಬಯಸುತ್ತಿದ್ದರು, ಶ್ರದ್ದೆ, ನಿಷ್ಠೆಯಿಂದ ನಡೆದುಕೊಂಡು ದೇಹದಲ್ಲಿಯೆ ದೇವರನ್ನು ಕಾಣಿ ಎಂದು ಕರೆ ನೀಡಿದರು. ಅಪರ ಜಿಲ್ಲಾಧಿಕಾರಿ ಐಶ್ವರ್ಯ ಅವರು ಇದೊಂದು ವಿಶೇಷ ಜಯಂತಿಯಾಗಿದ್ದು, ಮುಗ್ದ ಬಾಲಕ ಸಿದ್ದರಾಮ ಯೋಗಿ ಆದ ಕಥೆ ತುಂಬಾ ಆಶ್ಚರ್ಯಕರವಾಗಿದೆ. ಸಮಾಜದ ದಾರಿ ದೀಪವಾಗಿ ಬೆಳೆದು ಅಂದಿನ ಕಾಲಘಟ್ಟದಲ್ಲಿ ಕೆರೆಕಟ್ಟೆಗಳನ್ನು ನಿರ್ಮಿಸಿ ಸಮಾಜಮುಖಿಯಾಗಿ ಸಮಾಜ ಕ್ರಾಂತಿ ಮಾಡಿದವರಲ್ಲಿ ಪ್ರಮುಖರು ಎಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಜಿಲ್ಲಾ ಬೋವಿ ಸಮಾಜದ ಅಧ್ಯಕ್ಷ ಡಿ.ಸುಜಿತ್ ಮಾತನಾಡಿ, ಆರ್ಥಿಕವಾಗಿ ಹಿಂದುಳಿದಿರುವ ನಮ್ಮ ಸಮುದಾಯಕ್ಕೆ ಸಹಕಾರ ನೀಡಲು ಮುಂದಾಗಬೇಕೆಂದು ಕೋರಿದರು. ವೇದಿಕೆಯಲ್ಲಿ ಬೋವಿ ಸಮಾಜದ ಮುಖಂಡ ಸುಬ್ರಮಣಿ ಹಾಗೂ ಚೇತನ್ ಹಾಜರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಸ್ವಾಗತಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ವಿದ್ವಾನ್.ಬಿ.ಸಿ.ಶಂಕರಯ್ಯ ನಿರೂಪಿಸಿ, ಮಣಜೂರು ಮಂಜುನಾಥ್ ವಂದಿಸಿದರು.