ಪೊನ್ನಂಪೇಟೆ ಜ.18 NEWS DESK : ಕ್ರೀಡೆಯ ತವರು ಎಂದು ಕರೆಸಿಕೊಂಡಿರುವ ಕೊಡಗು ಜಿಲ್ಲೆಯಲ್ಲಿ ವಿವಿಧ ಕ್ರೀಡಾಕೂಟಗಳು ನಿರಂತರವಾಗಿ ನಡೆಯುತ್ತಿದೆ. ಈ ರೀತಿಯ ಕ್ರೀಡಾಕೂಟಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರವನ್ನು ರಚಿಸಲು ಸರಕಾರ ಮುಂದಾಗಬೇಕು ಎಂದು ಆಗ್ರಹಿಸಿರುವ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆಎಂಎ) ಅಧ್ಯಕ್ಷರಾದ ವಿರಾಜಪೇಟೆಯ ದುದ್ದಿಯಂಡ ಹೆಚ್. ಸೂಫಿ ಹಾಜಿ, ಇದರಿಂದ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುವುದಲ್ಲದೆ ಜಿಲ್ಲೆಯಿಂದ ಹೆಚ್ಚಿನ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಉತ್ಪಾದಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ವಿರಾಜಪೇಟೆ ಸಮೀಪದ ಬೇಟೋಳಿ ಗ್ರಾಮದಲ್ಲಿರುವ ಚಿಟ್ಟಡೆಯ ಜುಮ್ಮಾ ಮಸೀದಿ ಮೈದಾನದಲ್ಲಿ ಚಿಟ್ಟಡೆಯ ಕೂವಲೆರ ಕುಟುಂಬಸ್ಥರ ಆತಿಥ್ಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕೊಡವ ಮುಸ್ಲಿಂ ಮನೆತನಗಳ ನಡುವಿನ ಪ್ರಥಮ ವರ್ಷದ ಹೊನಲು ಬೆಳಕಿನ ಕೌಟುಂಬಿಕ ವಾಲಿಬಾಲ್ ಪಂದ್ಯಾವಳಿ “ಕೂವಲೆರ ಚಿಟ್ಟಡೆ ಕಪ್ -2025″ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನಲ್ಲಿ ಮಳೆಗಾಲದ ಮೂರು ತಿಂಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಅವಧಿಯಲ್ಲೂ ಬೇರೆ ಬೇರೆ ರೀತಿಯ ಕ್ರೀಡಾಕೂಟಗಳು ನಿರಂತರವಾಗಿ ಜರುಗುತ್ತಿರುತ್ತವೆ. ಇದರಿಂದಾಗಿ ಕ್ರೀಡಾಕೂಟಗಳನ್ನು ಆಯೋಜಿಸುವ ತಂಡಗಳಿಗೆ ಸಹಜವಾಗಿಯೇ ಆರ್ಥಿಕ ಕೊರತೆ ಎದುರಾಗುತ್ತದೆ. ಇದನ್ನು ನೀಗಿಸಲು ಸರಕಾರ ಕೊಡಗು ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅದರ ಮೂಲಕ ಕ್ರೀಡಾಕೂಟಗಳಿಗೆ ಅನುದಾನ ಒದಗಿಸಿದರೆ ಅದು ಕ್ರೀಡೆಯ ತವರಾದ ಕೊಡಗು ಜಿಲ್ಲೆಗೆ ದೊರೆಯುವ ಮನ್ನಣೆಯಾಗಲಿದೆ ಎಂದು ಹೇಳಿದರು. ದೇಶದ ಹಾಕಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಕೊಡಗು ಜಿಲ್ಲೆ ನೀಡಿದ ಕೊಡುಗೆ ಇಡೀ ಭಾರತವೇ ಹೆಮ್ಮೆಪಡುವ ಮಟ್ಟಿಗಿದೆ. ಈ ಹಿನ್ನೆಲೆಯಲ್ಲಾದರೂ ಕ್ರೀಡಾ ಅಭಿವೃದ್ಧಿ ಪ್ರಾಧಿಕಾರ ರಚನೆಯಾಗಬೇಕು. ಅಲ್ಲದೆ ಪ್ರತಿ ವರ್ಷದ ಬಜೆಟ್ಟಿನಲ್ಲಿ ಇದಕ್ಕಾಗಿ ಹಣವನ್ನು ಮೀಸಲಿಟ್ಟು ಕೊಡಗಿನಲ್ಲಿ ನಡೆಯುವ ಕ್ರೀಡಾಕೂಟಗಳನ್ನು ಸರ್ಕಾರ ಉತ್ತೇಜಿಸಬೇಕು. ಇದಕ್ಕಾಗಿ ಕೊಡಗಿನ ಜನಪ್ರತಿನಿಧಿಗಳು ಸರ್ಕಾರದ ಉನ್ನತ ಮಟ್ಟದಲ್ಲಿ ಒತ್ತಡ ಹೇರಬೇಕು. ಮುಂಬರುವ ಬಜೆಟ್ಟಿನಲ್ಲೇ ಈ ಪ್ರಾಧಿಕಾರವನ್ನು ಘೋಷಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಬೇಕು ಎಂದು ಒತ್ತಾಯಿಸಿದ ಸೂಫಿ ಹಾಜಿ, ಕೊಡಗಿನ ಕ್ರೀಡಾ ಚಟುವಟಿಕೆಗಳಿಗೆ ಸರಕಾರ ಸೂಕ್ತವಾಗಿ ಉತ್ತೇಜನ ನೀಡದಿದ್ದಲ್ಲಿ ಕೊಡಗನ್ನು ಕ್ರೀಡೆಯ ತವರು ಎಂದು ಕರೆಸಿಕೊಳ್ಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದ ಹೊದ್ದೂರು ಗ್ರಾ. ಪಂ. ಅಧ್ಯಕ್ಷರಾದ ಹೆಚ್.ಎ. ಹಂಸ, ಕೊಡಗು ಗ್ಯಾರೆಂಟಿ ಪ್ರಾಧಿಕಾರದ ಉಪಾಧ್ಯಕ್ಷರಾದ ಸಿ.ಎ. ನಾಸರ್, ಕೆ. ಎಂ. ಎ. ಸಂಘಟನಾ ಕಾರ್ಯದರ್ಶಿ ಮೀತಲತಂಡ ಎಂ. ಇಸ್ಮಾಯಿಲ್ ಮೊದಲಾದವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಕೆ. ಎಂ. ಎ. ಅಧ್ಯಕ್ಷರಾದ ದುದ್ದಿಯಂಡ ಸೂಫಿ ಹಾಜಿ, ಹೊದ್ದೂರು ಗ್ರಾ. ಪಂ. ಅಧ್ಯಕ್ಷರಾದ ಹೆಚ್.ಎ. ಹಂಸ, ಕರ್ನಾಟಕ ಪೊಲೀಸ್ ವಾಲಿಬಾಲ್ ತಂಡದ ಕೂವಲೆರ ಅಬ್ದುಲ್ ಘನಿ ಸೇರಿದಂತೆ ಹಲವು ಸಾಧಕರನ್ನು ಕೂವಲೆರ ಕುಟುಂಬದ ಪರವಾಗಿ ಸನ್ಮಾನಿಸಲಾಯಿತು. ಚಿಟ್ಟಡೆ ಕೂವಲೆರ ಕುಟುಂಬದ ಅಧ್ಯಕ್ಷರಾದ ಉಮ್ಮರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮದ ತಕ್ಕರು ಮತ್ತು ಕೂವಲೆರ ಕುಟುಂಬದ ಹಿರಿಯರಾದ ಶಾದುಲಿ, ಗ್ರಾ. ಪಂ. ಸದಸ್ಯರಾದ ಸಣ್ಣು ಚಂಗಪ್ಪ, ಚಿಟ್ಟಡೆ ಜಮಾಅತ್ ಅಧ್ಯಕ್ಷರಾದ ಕೂವಲೆರ ಫಕ್ರುದ್ದೀನ್, ಗ್ರಾಮದ ಹಿರಿಯರಾದ ಸಿ. ಯು. ಮೊಹಮ್ಮದ್, ಕೀಪಡ ಮುಹಮ್ಮದ್, ಎ. ಎ. ಇಬ್ರಾಹಿಂ, ಗ್ರಾ. ಪಂ. ಮಾಜಿ ಸದಸ್ಯರಾದ ವೈ. ಇ. ಮುಸ್ತಫಾ, ಕಾಫಿ ಬೆಳೆಗಾರರಾದ ವೈ. ಎ. ಉಮ್ಮರ್, ಮಾಳೆಟಿರ ಚಂಗಪ್ಪ, ಸಿ. ಎಸ್. ಉಮ್ಮರ್, ಕೆ. ಎಂ. ಹಸೈನಾರ್, ಕೆಎಂಎ ಆಡಳಿತ ಮಂಡಳಿ ಪದಾಧಿಕಾರಿಗಳಾದ ಪುದಿಯತ್ತಂಡ ಹೆಚ್. ಶಂಸುದ್ದೀನ್, ಚಿಮ್ಮಿಚ್ಚಿರ ಕೆ. ಇಬ್ರಾಹಿಂ ಹಾಜಿ, ಪುದಿಯಾಣೆರ ಎಂ.ಹನೀಫ್, ಕೋಳುಮಂಡ ರಫೀಕ್, ಮಂಡೇಂಡ ಎ. ಮೊಯ್ದು, ಕರತೋರೆರ ಮುಸ್ತಫಾ, ದುದ್ದಿಯಂಡ ಹೆಚ್. ಮೊಯ್ದು ಹಾಜಿ, ಕತ್ತಣಿರ ಅಂದಾಯಿ, ಪ್ರಮುಖರಾದ ಸಿ.ಯು. ಶಾದುಲಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪಂದ್ಯಾವಳಿಯ ಉದ್ಘಾಟನೆಯ ಅಂಗವಾಗಿ ರಜಿತ್ ಫ್ರೆಂಡ್ಸ್ ಮತ್ತು ಲಿಂಬ್ರ ಫ್ರೆಂಡ್ಸ್ ತಂಡಗಳ ನಡುವೆ ನಡೆದ ಸೌಹಾರ್ದ ಪಂದ್ಯದಲ್ಲಿ ರಜಿತ್ ಫ್ರೆಂಡ್ಸ್ ತಂಡ ಗೆಲುವು ಸಾಧಿಸಿತು.