ಮಡಿಕೇರಿ ಜ.18 NEWS DESK : ಕಾರ್ಮಿಕ ಇಲಾಖೆ ವತಿಯಿಂದ ಅಸಂಘಟಿತ ಕಟ್ಟಡ ಕಾರ್ಮಿಕರಿಗೆ ಹಲವು ಯೋಜನೆಗಳನ್ನು ಸರ್ಕಾರ ಜಾರಿಗೊಳಿಸಿದೆ. ಕೊಡಗು ಜಿಲ್ಲೆಯ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ನೋಂದಣಿಯಾಗಿರುವ ಕಾರ್ಮಿಕರಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಜಿಲ್ಲೆಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ಇದುವರೆಗೆ 12,367 ಮಂದಿ ಹೆಸರು ನೋಂದಾಯಿಸಿದ್ದಾರೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಅವರು ಮಾಹಿತಿ ನೀಡಿದ್ದಾರೆ. ಇವರಲ್ಲಿ 9,740 ಮಂದಿ ಪುರುಷರು ಹಾಗೂ 2,627 ಮಂದಿ ಮಹಿಳೆಯರು ಕಟ್ಟಡ ಹಾಗೂ ಇತರೆ ನಿರ್ಮಾಣ ಕಾಯ್ದೆಯಡಿ ನೋಂದಣಿಯಾಗಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 3,035 ಮಂದಿ, ಸೋಮವಾರಪೇಟೆ ತಾಲ್ಲೂಕಿನಲ್ಲಿ 4,037 ಮಂದಿ, ವಿರಾಜಪೇಟೆ ತಾಲ್ಲೂಕಿನ 5295 ಮಂದಿ ಹೆಸರು ನೋಂದಾಯಿಸಿದ್ದಾರೆ. ಪ್ರಸಕ್ತ ವರ್ಷದಲ್ಲಿ ಡಿಸೆಂಬರ್ ಅಂತ್ಯದವರೆಗೆ ಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಧನಸಹಾಯ ವಿತರಿಸಲಾಗಿದೆ. ಹೆರಿಗೆ ಧನ ಭತ್ಯೆ, ವೈದ್ಯಕೀಯ ಸಹಾಯಧನ, ಮದುವೆಗೆ ಧನಸಹಾಯ, ಹೀಗೆ ವಿವಿಧ ಯೋಜನೆಗಳಡಿ ಸುಮಾರು 41 ಲಕ್ಷ ರೂ. ಭರಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಮಡಿಕೇರಿ ತಾಲ್ಲೂಕಿನಲ್ಲಿ 7,19,492, ಸೋಮವಾರಪೇಟೆ ತಾಲ್ಲೂಕಿನಲ್ಲಿ 22,66,293, ವಿರಾಜಪೇಟೆ ತಾಲ್ಲೂಕಿನಲ್ಲಿ 12 ಲಕ್ಷ ರೂ. ಭರಿಸಲಾಗಿದೆ ಎಂದು ಜಿಲ್ಲಾ ಕಾರ್ಮಿ ಅಧಿಕಾರಿ ಅವರು ವಿವರಿಸಿದ್ದಾರೆ. ಈ ನೋಂದಾಯಿತ ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರಿಗೆ ಮೂರು ವರ್ಷದ ಸದಸ್ಯತದೊಂದಿಗೆ 60 ವರ್ಷ ಪೂರೈಸಿದ ಫಲಾನುಭವಿಗೆ ಮಾಸಿಕ ಪಿಂಚಣಿ ಸೌಲಭ್ಯ, ಮೃತ ಪಿಂಚಣಿದಾರರ ಪತಿ/ಪತ್ನಿಗೆ ಮಾಸಿಕ ಪಿಂಚಣಿ, ನೋಂದಾಯಿತ ಫಲಾನುಭವಿಯು ಖಾಯಿಲೆಗಳಿಂದ ಅಥವಾ ಕಟ್ಟಡ ಕಾಮಗಾರಿಗಳ ಅಪಘಾತದಿಂದ ಶಾಶ್ವತ/ಭಾಗಶಃ ಅಂಗವಿಕಲತೆ ಹೊಂದಿದ್ದರೆ ಮಾಸಿಕ ಪಿಂಚಣಿ ಸೌಲಭ್ಯ ಹಾಗೂ ಶೇಕಡವಾರು ದುರ್ಬಲತೆಯನ್ನಾಧರಿಸಿ ಅನುಗ್ರಹ ರಾಶಿ ಸಹಾಯಧನ ನೀಡಲಾಗುತ್ತದೆ ಎಂದು ಅವರು ವಿವರಿಸಿದ್ದಾರೆ. ನೋಂದಾಯಿತ ಫಲಾನುಭವಿಗೆ ವೃತ್ತಿಯಾಧಾರಿತ ಟೂಲ್‍ಕಿಟ್ ಸೌಲಭ್ಯ ನೀಡಲಾಗುತ್ತದೆ. ಮಹಿಳಾ ಫಲಾನುಭವಿಯ ಮೊದಲ ಎರಡು ಹೆರಿಗೆಗೆ ಸಹಾಯಧನ ನೀಡಲಾಗುತ್ತದೆ. ಹೆಸರು ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ ಅಂತ್ಯಕ್ರಿಯೆ ವೆಚ್ಚ ಹಾಗೂ ಅನುಗ್ರಹ ರಾಶಿ ಸಹಾಯಧನ ನೀಡುವ ಯೋಜನೆ ಇದೆ ಎಂದರು. ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮೊದಲ ಇಬ್ಬರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನರ್ಸರಿಯಿಂದ ಸ್ನಾತಕೋತ್ತರ ಪದವಿಯವರೆಗೆ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ನೋಂದಾಯಿತ ಫಲಾನುಭವಿ ಹಾಗೂ ಅವರ ಅವಲಂಬಿತರಿಗೆ ವೈದ್ಯಕೀಯ ಸಹಾಯಧನ ನೀಡುವ ಯೋಜನೆ ಇದೆ ಎಂದು ಕಾವೇರಿ ತಿಳಿಸಿದರು. ನೋಂದಾಯಿತ ಫಲಾನುಭವಿಯು ಮರಣ ಹೊಂದಿದ್ದಲ್ಲಿ, ಸಂಪೂರ್ಣ ಶಾಶ್ವತ ದುರ್ಬಲತೆಯಾದಲ್ಲಿ ಅಥವಾ ಭಾಗಶಃ ಶಾಶ್ವತ ದುರ್ಬಲತೆಯಾದಲ್ಲಿ ಅಪಘಾತ ಪರಿಹಾರ ಸಹಾಯಧನ ನೀಡಲಾಗುತ್ತದೆ. ಫಲಾನುಭವಿ ಅಥವಾ ಅವರ ಇಬ್ಬರು ಮಕ್ಕಳ ಮದುವೆಗೆ ಧನ ಸಹಾಯ ನೀಡಲಾಗುತ್ತದೆ. ಮಹಿಳಾ ಫಲಾನುಭವಿಯು ಮಗುವಿಗೆ ಜನ್ಮ ನೀಡಿದ ಸಂದರ್ಭದಲ್ಲಿ ಆಕೆಯ ಮಗುವಿನ ಶಾಲಾ ಪೂರ್ವ ಶಿಕ್ಷಣ ಮತ್ತು ಪೌಷ್ಟಿಕತೆಗಾಗಿ ಮಗುವಿಗೆ ಮೂರು ವರ್ಷಗಳು ತುಂಬುವವರೆಗೆ ತಾಯಿ ಮಗು ಸಹಾಯಧನ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ಜೊತೆಗೆ ಅಂಬೇಡ್ಕರ್ ಕಾರ್ಮಿಕ ಸಹಾಯಹಸ್ತ ಯೋಜನೆ, ಪ್ರಧಾನಮಂತ್ರಿ ಶ್ರಮಯೋಗಿ ಮಾನ್‍ಧನ್ ಯೋಜನೆ, ಇ-ಶ್ರಮ ಯೋಜನೆ, ಹೀಗೆ ಹಲವು ಯೋಜನೆಗಳು ಇವೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಕಾವೇರಿ ಅವರು ಮಾಹಿತಿ ನೀಡಿದ್ದಾರೆ. ಹೃದ್ರೋಗ, ಕಿಡ್ನಿ ಜೋಡಣೆ, ಕ್ಯಾನ್ಸರ್ ಶಸ್ತ್ರಚಿಕಿತ್ಸೆ, ಕಣ್ಣಿನ ಶಸ್ತ್ರಚಿಕಿತ್ಸೆ, ಪಾಶ್ರ್ವವಾಯು, ಮೂಳೆ ಶಸ್ತ್ರಚಿಕಿತ್ಸೆ, ಗರ್ಭಕೋಶ ಶಸ್ತ್ರಚಿಕಿತ್ಸೆ, ಅಸ್ತಮ ಚಿಕಿತ್ಸೆ, ಗರ್ಭಪಾತ ಪ್ರಕರಣಗಳು, ಪಿತ್ತಕೋಶದ ತೊಂದರೆಗೆ ಸಂಬಂಧಿಸಿದ ಚಿಕಿತ್ಸೆ, ಮೂತ್ರ ಪಿಂಡದಲ್ಲಿನ ಕಲ್ಲು ತೆಗೆಯುವ ಚಿಕಿತ್ಸೆ, ಮೆದುಳಿನ ರಕ್ತಸ್ರಾವದ ಚಿಕಿತ್ಸೆ, ಅಲ್ಸರ್ ಚಿಕಿತ್ಸೆ, ಡಯಾಲಿಸಿಸ್ ಚಿಕಿತ್ಸೆ, ಕಿಡ್ನಿ ಶಸ್ತ್ರಚಿಕಿತ್ಸೆ, ವ್ಯಾಸ್ಕ್ಯೂಲರ್ ಶಸ್ತ್ರಚಿಕಿತ್ಸೆ, ಅನ್ನನಾಳದ ಚಿಕಿತ್ಸೆ ಮತ್ತು ಕರುಳಿನ ಶಸ್ತ್ರಚಿಕಿತ್ಸೆ, ಸ್ತನ ಸಂಬಂಧಿತ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ, ಹರ್ನಿಯ ಶಸ್ತ್ರಚಿಕಿತ್ಸೆ, ಅಪೆಂಡಿಕ್ಸ್ ಶಸ್ತ್ರಚಿಕಿತ್ಸೆ, ಮೂಳೆ ಮುರಿತ ಡಿಸ್‍ಲೊಕೇಶನ್ ಚಿಕಿತ್ಸೆ ಇತರ ಔದ್ಯೋಗಿಕ ಖಾಯಿಲೆಗಳಿಗೆ ನೋಂದಾಯಿತ ಫಲಾನುಭವಿ ಅಥವಾ ಅವರ ಅವಲಂಬಿತರು ಒಳಗಾದಲ್ಲಿ ವೈದ್ಯಕೀಯ ಚಿಕಿತ್ಸೆಗಳಿಗೆ ಸಹಾಯಧನ ನೀಡಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.