ಮಡಿಕೇರಿ ಜ.23 NEWS DESK : ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆಯಾದ ದಿನವೇ ಭಾರತಕ್ಕೆ ನಿಜವಾದ ಸ್ವಾತಂತ್ರ್ಯ ದೊರೆಯಿತು ಎಂದು ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ನೀಡಿರುವ ಹೇಳಿಕೆಯನ್ನು ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿಸಿತ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೊಡಗು ಜಿಲ್ಲಾ ಘಟಕ ತೀವ್ರವಾಗಿ ಖಂಡಿಸುತ್ತದೆ ಎಂದು ಸಮಿತಿಯ ಸಂಚಾಲಕಿ ಗಾಯತ್ರಿ ನರಸಿಂಹ ತಿಳಿಸಿದ್ದಾರೆ. ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಕೇಂದ್ರ ಸರಕಾರ ದೇಶ ವಿರೋಧಿ ಎಂದು ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಒತ್ತಾಯಿಸಿದ್ದಾರೆ. ಭಾರತವು 1947ರ ಆಗಸ್ಟ್ 15 ರಂದು ಸ್ವಾತಂತ್ರ ಪಡೆದುದರ ಹಿಂದೆ ಬಹುದೊಡ್ಡ ಹೋರಾಟವೇ ಇತ್ತು, ದೇಶಾದ್ಯಂತ ಚಳುವಳಿ ನಡೆದಿದೆ. ಆದರೆ ಭಾಗವತ್ ಅವರು ತಮ್ಮ ಹೇಳಿಕೆಯ ಮೂಲಕ ಇದನ್ನು ನಿರಾಕರಿಸಿದಂತ್ತಾಗಿದೆ. ದೇಶವು ತನ್ನದೇ ಆದ ಸಂವಿಧಾನವನ್ನು ಹೊಂದಿದೆ. ಭಾರತದ ಗಣರಾಜ್ಯ ಈ ಸಂವಿಧಾನದ ಮೌಲ್ಯಗಳ ಮೇಲೆ ಸ್ಥಾಪಿತವಾಗಿದೆ. ಸ್ವಾತಂತ್ರ್ಯದ 75ನೇ ವರ್ಷಾಚರಣೆಯನ್ನು ಸರಕಾರ, ವಿರೋಧ ಪಕ್ಷಗಳು ಮತ್ತು ಇತರ ಎಲ್ಲರೂ ಮಾಡಿದ್ದಾರೆ. ಆದರೆ, ಭಾಗವತ್ ಅವರು ಈ 75 ವರ್ಷಗಳನ್ನು ನಿಜವಾದ ಸ್ವಾತಂತ್ರ್ಯದ ಅವಧಿ ಎಂದು ಪರಿಗಣಿಸಿಲ್ಲ ಎನ್ನುವುದಕ್ಕೆ ಅವರ ಹೇಳಿಕೆ ಸಾಕ್ಷಿಯಾಗಿದೆ. ರಾಮ ಮಂದಿರದ ಉದ್ಘಾಟನಾ ದಿನವನ್ನು ಈ ದೇಶದ ಸ್ವಾತಂತ್ರ್ಯ ದಿನ ಎಂದು ಪರಿಗಣಿಸಲು ಅವಕಾಶವೇ ಇಲ್ಲ ಎಂದು ಗಾಯತ್ರಿ ನರಸಿಂಹ ತಿಳಿಸಿದ್ದಾರೆ.