ಮಡಿಕೇರಿ ಜ.23 NEWS DESK : ಮಡಿಕೇರಿ ನಗರದಲ್ಲಿರುವ ಡಾ.ಅಂಬೇಡ್ಕರ್ ಭವನ ಸೀಮಿತ ಚೌಕಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಮತ್ತು ಭವನವನ್ನು ದಲಿತ ಸಂಘರ್ಷ ಸಮಿತಿಯ ವಶಕ್ಕೆ ನೀಡಬೇಕೆಂದು ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್ ಆಗ್ರಹಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಡಿಕೇರಿ ಶಾಖೆಗೆ ಸುಮಾರು ಮೂರು ದಶಕಗಳ ಹಿಂದೆ ಮಂಜೂರಾಗಿದ್ದ ಜಾಗದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡಿದೆ. 1985 ರಿಂದ ಜಿಲ್ಲಾ ಕೇಂದ್ರ್ರದಲ್ಲಿ ಅಂಬೇಡ್ಕರ್ ಭವನ ಮತ್ತು ಅಂಬೇಡ್ಕರ್ ಪತಿಮೆಗೆ ಆಗ್ರಹಿಸಿ ನಿರಂತರವಾದ ಹೋರಾಟಗಳನ್ನು ನಡೆಸಿಕೊಂಡು ಬಂದಿದೆ. ಈ ಹಿನ್ನೆಲೆ 1991 ರ ಸುಮಾರಿಗೆ ನಗರ ವ್ಯಾಪ್ತಿಯ 10 ಸೆಂಟ್ಸ್ ಜಾಗವನ್ನು ಜಿಲ್ಲಾಡಳಿತ ಕರ್ನಾಟಕ ದಲಿತ ಸಂಘರ್ಷ ಸಮಿತಿ ಮಡಿಕೇರಿ ಶಾಖೆಗೆ ಭವನ ನಿರ್ಮಾಣಕ್ಕೆಂದು ಮಂಜೂರು ಮಾಡಿತು ಎಂದರು. ಅಂದಿನ ದಿನಗಳಲ್ಲಿ ಡಾ.ನಾಗರಾಜ್ ಅವರ ಅಧ್ಯಕ್ಷತೆಯಲ್ಲಿ ಭವನ ನಿರ್ಮಾಣ ಸಮಿತಿಯನ್ನು ರಚಿಸಲಾಯಿತು. ನಂತರ ಸಮಿತಿ ಬದಲಾವಣೆಯಾಗಿದ್ದು, ಅದರಲ್ಲಿ ದಲಿತ ಸಂಘರ್ಷ ಸಮಿತಿಗೆ ಪ್ರಾಮುಖ್ಯತೆಯನ್ನು ನೀಡಿಲ್ಲ. ಅಂಬೇಡ್ಕರ್ ಭವನದಲ್ಲಿ ದಲಿತ ಸಮುದಾಯದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ತರಬೇತಿ ಕಾರ್ಯಕ್ರಮ, ಸಾಂಸ್ಕೃತಿಕ ವೇದಿಕೆಗಳನ್ನು ಕಟ್ಟಿಕೊಡುವುದು, ದಲಿತ ಬಡ ಕುಟುಂಬಗಳ ಕಾರ್ಯಕ್ರಮಗಳಿಗೆ ಒದಗಿಸುವ ಉದ್ದೇಶಗಳನ್ನು ಹೊಂದಲಾಗಿತ್ತು. ಆದರೆ, ಇಂದು ಈ ನಿಯಮಗಳು ಕಾರ್ಯಗತವಾಗುತ್ತಿಲ್ಲ ಎಂದು ಆರೋಪಿಸಿದರು.
::: ಹೋರಾಟದ ಎಚ್ಚರಿಕೆ ::: ನಗರದ ಅಂಬೇಡ್ಕರ್ ಭವನವನ್ನು ಮರಳಿ ಕರ್ನಾಟಕ ದಲಿತ ಸಂಘರ್ಷ ಸಮಿತಿಗೆ ಒದಗಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಗುತ್ತದೆ. ಸೂಕ್ತ ಸ್ಪಂದನ ದೊರಕದಿದ್ದಲ್ಲಿ ಕೊಡಗಿನ ಎಲ್ಲಾ ದಲಿತ ಪರ ಸಂಘಟನೆಗಳು, ದಲಿತ ಪರ ಒಕ್ಕೂಟಗಳು ಸಂಘಟಿತವಾಗಿ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗ ಅಹೋರಾತ್ರಿ ಪ್ರತಿಭಟನೆ ನಡೆಸುವುದಾಗಿ ಹೆಚ್.ಎಲ್. ದಿವಾಕರ್ ತಿಳಿಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಶನಿವಾರಸಂತೆಯ ಟಿ.ಜೆ.ಈರಪ್ಪ ಮಾತನಾಡಿ, ದಲಿತ ಸಮುದಾಯದ ಕಡು ಬಡವರ ಅನುಕೂಲಕ್ಕಾಗಿ ಅಂಬೇಡ್ಕರ್ ಭವನ ಬಳಕೆಯಾಗುತ್ತಿಲ್ಲ. ಈ ಭವನವನ್ನು ಮತ್ತೆ ದಸಂಸ ಮಡಿಕೇರಿ ಶಾಖೆಗೆ ವಹಿಸಿಕೊಡದಿದ್ದಲ್ಲಿ ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ದಂಸಂಸ ಜಿಲ್ಲಾ ಸಂಘಟನಾ ಸಂಚಾಲಕ ವಿರಾಜಪೇಟೆಯ ಹೆಚ್.ಕೆ.ಗಣೇಶ್, ಮಹಿಳಾ ಘಟಕದ ಸಂಚಾಲಕಿ ಪ್ರೇಮಾ ಕೃಷ್ಣಪ್ಪ ಹಾಗೂ ಮಡಿಕೇರಿ ತಾಲ್ಲೂಕು ದಸಂಸ ಸಂಚಾಲಕ ಎ.ಪಿ.ದೀಪಕ್ ಉಪಸ್ಥಿತರಿದ್ದರು.