ಮಡಿಕೇರಿ ಜ.24 NEWS DESK : ಪ್ರಾಣಿ ದಯಾಸಂಘದ ವಾರ್ಷಿಕ ಮಹಾಸಭೆಯು ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಸರ್ಕಾರಿ ಗೋಶಾಲೆ ಮಂಜೂರಾಗಿರುವ 8 ಎಕರೆ ಜಾಗಕ್ಕೆ ಬೇಲಿ ಅಳವಡಿಸುವುದು, ಗೋಶಾಲೆಗೆ ಹೆಚ್ವುವರಿಯಾಗಿ ಒಂದು ಕೊಳವೆ ಬಾವಿ ಕೊರೆಸುವುದು, ಸರ್ಕಾರಿ ಗೋಶಾಲೆಯ ಜಾನುವಾರುಗಳಿಗೆ ಮೇವು ಕತ್ತರಿಸುವ ಯಂತ್ರ ಖರೀದಿಸುವುದು ಸೇರಿದಂತೆ ವಿವಿಧ ವಿಷಯಕ್ಕೆ ಸಂಬಂಧಿಸಿದಂತೆ ಸಭೆಯಲ್ಲಿ ಅನುಮೋದಿಸಲಾಯಿತು ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಸಂರಕ್ಷಣಾ ಅಧಿನಿಯಮ 2020 ರಂತೆ ಪೊಲೀಸ್ ಇಲಾಖೆಯ ಮಾಹಿತಿಯಂತೆ 2023ರ ಏ.1 ರಿಂದ 2024ರ ಮಾರ್ಚ್ 31ರವರೆಗೆ 17 ಪ್ರಕರಣಗಳು ದಾಖಲಾಗಿದ್ದು, 38 ಜಾನುವಾರುಗಳನ್ನು ರಕ್ಷಿಸಲಾಗಿದೆ. ಸರ್ಕಾರಿ ಗೋಶಾಲೆ ಮಡಿಕೇರಿಗೆ 8 ಎಕರೆ ಮಂಜೂರಾಗಿದ್ದು, ಹಾಲಿ 2 ಎಕರೆ ಜಾಗಕ್ಕೆ ಮಾತ್ರ ಬೇಲಿ ನಿರ್ಮಿಸಲಾಗಿರುತ್ತದೆ. ಈ ಗೋಶಾಲೆ ಕಟ್ಟಡವು, ಮೇವು ದಾಸ್ತಾನು ಕೊಠಡಿ ಕಾವಲುಗಾರ ವಾಸದ ಕೊಠಡಿ ನಿರ್ಮಿಸಲಾಗಿದ್ದು, ಗೋಶಾಲೆಯ ಜಾನುವಾರುಗಳಿಗೆ ಮೇಯಲು ಸ್ಥಳದ ಅಭಾವವಿದೆ. ಉಳಿದ 6 ಎಕರೆ ಜಾಗಕ್ಕೆ ಬೇಲಿ ಅಳವಡಿಸದೆ ಇರುವುದರಿಂದ ಗೋಶಾಲೆಯ ಜಾನುವಾರುಗಳನ್ನು ಸ್ವತಂತ್ರವಾಗಿ ಮೇಯಲು ಬಿಡಲು ಅಸಾಧ್ಯವಾಗಿದೆ. ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ ಉಳಿದ ಜಾಗಕ್ಕೆ ಬೇಲಿ ನಿರ್ಮಿಸಲು ಕಳೆದ ಮಹಾಸಭೆಯಲ್ಲಿ ತೀರ್ಮಾನಿಸಿದಂತೆ ಹೆಚ್ಚುವರಿ ಅನುದಾನಕ್ಕಾಗಿ ಪ್ರಾಣಿ ದಯಾ ಸಂಘ ವು ಅಂದಾಜು ಪಟ್ಟಿ ರೂ.15.20 ಲಕ್ಷ ಹೆಚ್ಚುವರಿ ಅನುದಾನ ಕೋರಿ ಆಯುಕ್ತಾಲಯಕ್ಕೆ ಮನವಿ ಮಾಡಲಾಗಿದೆ. ಸರ್ಕಾರಿ ಗೋಶಾಲೆಗೆ ಹೆಚ್ಚುವರಿಯಾಗಿ ಕೊಳವೆ ಬಾವಿ ಕೊರೆಸುವ ಬಗ್ಗೆ ಉಪ ನಿರ್ದೇಶಕರು ಸಭೆಗೆ ಪ್ರಸ್ತಾವನೆ ಮಂಡಿಸಲಾಗಿ ಸಭಾಧ್ಯಕ್ಷರು ಜಲಜೀವನ್ ಮಿಷನ್ ಯೋಜನೆಯಡಿ ನಿಯಮಾನುಸಾರ ಅವಕಾಶವಿದ್ದಲ್ಲಿ ಕ್ರಮವಹಿಸುವಂತೆ ಸೂಚಿಸಿರುವ ಮೇರೆಗೆ ಪರಿಶೀಲಿಸಲಾಗಿ ಜಲಜೀವನ್ ಮಿಷನ್ ಯೋಜನೆಯಡಿಯಲ್ಲಿ ಕುಡಿಯುವ ನೀರಿಗೆ ಮಾತ್ರ ಅವಕಾಶವಿರುವುದರಿಂದ ಮಡಿಕೇರಿ ತಾಲ್ಲೂಕಿನ ಟಾಸ್ಕ್ ಪೋರ್ಸ್ ಸಭೆಗೆ ಪ್ರಸ್ತಾವನೆ ಮಂಡಿಸಲಾಗಿ ಅನುಮೋದನೆ ನಿರೀಕ್ಷಿಸಲಾಗಿದೆ. ಸರ್ಕಾರಿ ಗೋಶಾಲೆಯ ಹಸಿರು ಮೇವು ಕ್ಷೇತ್ರದಲ್ಲಿ ಬೆಳೆಯುವ ಮೇವನ್ನು ಸಮರ್ಪಕವಾಗಿ ಬಳಸಲು ಮೇವು ಕತ್ತರಿಸುವ ಯಂತ್ರ ಹಾಗೂ ಕಳೆ ಕೊಚ್ಚುವ ಯಂತ್ರ ಅವಶ್ಯಕತೆ ಇದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಪ್ರಸನ್ನ ಮನವಿ ಮಾಡಿದರು. ಪ್ರಾಣಿ ದಯಾಸಂಘದ ಅಧಿಕಾರೇತರ ಸದಸ್ಯರಾದ ಗಿರೀಶ್ ತಾಳತ್ತಮನೆ ಜಾನುವಾರುಗಳಿಗೆ ಚರ್ಮಗಂಟು ರೋಗ ತಡೆಯುವ ಬಗ್ಗೆ ಗಮನ ಸೆಳೆದಿದ್ದು, ಈ ಬಗ್ಗೆ ಅಗತ್ಯ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಮಾಹಿತಿ ನೀಡಿದರು.