
ಪೊನ್ನಂಪೇಟೆ, ಜ.25 NEWS DESK : ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ವಿಶೇಷ ಅತಿಥಿಗಳಾಗಿ ತೆರಳಿದ ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ) ಕೋಶಾಧಿಕಾರಿ ಮತ್ತು ಹೊದ್ದೂರು ಗ್ರಾ.ಪಂ ಅಧ್ಯಕ್ಷ ಹರಿಶ್ಚಂದ್ರ ಎ.ಹಂಸ ಅವರನ್ನು ಕೆ.ಎಂ.ಎ. ವತಿಯಿಂದ ಬೀಳ್ಕೊಡಲಾಯಿತು. ಜ.26 ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಗವಹಿಸಲು ಶುಕ್ರವಾರದಂದು ಬೆಳಿಗ್ಗೆ ಕಣ್ಣನೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ನವದೆಹಲಿಗೆ ಪ್ರಯಾಣ ಬೆಳೆಸಿದ ಹೆಚ್.ಎ.ಹಂಸ ಅವರನ್ನು ಕೆ. ಎಂ.ಎ. ಪರವಾಗಿ ಅಧ್ಯಕ್ಷ ದುದ್ದಿಯಂಡ ಸೂಫಿ ಹಾಜಿ ಪುಷ್ಪಗುಚ್ಛ ನೀಡಿ ಬೀಳ್ಕೊಟ್ಟರು. ಈ ಸಂದರ್ಭ ಪ್ರಯಾಣಕ್ಕೆ ಶುಭ ಹಾರೈಸಿ ಮಾತನಾಡಿದ ಸೂಫಿ ಹಾಜಿ, ಜ. 26 ರಂದು ನವದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಕರ್ನಾಟಕ ರಾಜ್ಯ ಸರ್ಕಾರದ ವತಿಯಿಂದ ವಿಶೇಷ ಅತಿಥಿಗಳಾಗಿ ತೆರಳಲು ಆಯ್ಕೆಗೊಂಡ ಕರ್ನಾಟಕದ 12 ಗ್ರಾ.ಪಂ ಅಧ್ಯಕ್ಷರ ಪೈಕಿ ಒಬ್ಬರಾಗಿರುವ ಹಂಸ ಅವರ ಸಾಧನೆ ಕೇವಲ ಸಮುದಾಯಕ್ಕೆ ಮಾತ್ರವಲ್ಲ ಇಡೀ ಜಿಲ್ಲೆಗೆ ಹೆಗ್ಗಳಿಕೆ ಮೂಡಿಸಿದೆ. ಹಂಸ ಅವರ ಸಮಾಜಮುಖಿ ಚಿಂತನೆ ಮತ್ತು ಜನಪರ ಕಾಳಜಿ ಎಲ್ಲ ಜನಪ್ರತಿನಿಧಿಗಳಿಗೆ ಮಾದರಿಯಾಗಿದೆ ಎಂದು ಹೇಳಿದರಲ್ಲದೆ, ಇವರ ಸಾಮಾಜಿಕ ಮತ್ತು ರಾಜಕೀಯ ಕೀರ್ತಿ ಮತ್ತಷ್ಟು ಹೆಚ್ಚಾಗಲಿ ಎಂದು ಶುಭ ಹಾರೈಸಿದರು. ಕೊಡವ ಮುಸ್ಲಿಂ ಅಸೋಸಿಯೇಷನ್ ನ ಕಾರ್ಯಕಾರಿ ಸಮಿತಿಯ ಹಿರಿಯ ನಿರ್ದೇಶಕ ಪುದಿಯತ್ತಂಡ ಹೆಚ್.ಶಂಸುದ್ದೀನ್, ನಿರ್ದೇಶಕರುಗಳಾದ ಮಂಡೇಂಡ ಎ.ಮೊಯ್ದು, ದುದ್ದಿಯಂಡ ಹೆಚ್.ಮೊಯ್ದು, ಪುದಿಯಾಣೆರ ಎಂ.ಹನೀಫ್, ಈತಲತಂಡ ರಫೀಕ್ ತೂಚಮಕೇರಿ ಹಾಜರಿದ್ದರು.









